ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಸಿಎ | ಗ್ರಾಮಾಂತರ, ಕ್ಲಬ್ ಕ್ರಿಕೆಟ್ ಬೆಳವಣಿಗೆಗೆ ಆದ್ಯತೆ: ರಘುರಾಮ್ ಭಟ್

ಕೆಎಸ್‌ಸಿಎ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ರಘುರಾಮ್ ಭಟ್
Last Updated 21 ನವೆಂಬರ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದ ಎಲ್ಲ ವಿಭಾಗಗಳ ಕ್ರಿಕೆಟ್‌ ಕ್ಲಬ್‌ಗಳನ್ನು ಬಲಪಡಿಸುವುದು ಮತ್ತು ಜೂನಿಯರ್ ಕ್ರಿಕೆಟ್‌ ಬೆಳವಣಿಗೆಗೆ ಆದ್ಯತೆ ನೀಡುವುದು ನಮ್ಮ ಗುರಿ‘–

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಗೆ ನೂತನ ಅಧ್ಯಕ್ಷರಾಗಿ ಸೋಮವಾರ ಅಧಿಕಾರ ಸ್ವೀಕರಿಸಿದ ರಘುರಾಮ್ ಭಟ್ ಅವರ ನುಡಿಗಳಿವು. ಭಾರತ ತಂಡವನ್ನು ಪ್ರತಿನಿಧಿಸಿದ್ದ ಕರ್ನಾಟಕದ ಎಡಗೈ ಸ್ಪಿನ್ನರ್ ಈಗ ಹೊಸ ಇನಿಂಗ್ಸ್ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ 64 ವರ್ಷದ ರಘುರಾಮ್ ’ಪ್ರಜಾವಾಣಿ’ಗೆ ನೀಡಿದ ಸಂದರ್ಶನ ಇಲ್ಲಿದೆ.

* ಹೊಸ ಇನಿಂಗ್ಸ್ ಆರಂಭಿಸಿದ್ದೀರಿ. ನಿಮ್ಮ ಮುಂದಿರುವ ಯೋಜನೆಗಳೇನು?

– ಹೌದು. ಇದು ವೃತ್ತಿಜೀವನದ ನೂತನ ಇನಿಂಗ್ಸ್ ಮತ್ತು ಹೊಣೆ. ನಮ್ಮ ಸಮಿತಿಯ ಉದ್ದೇಶ ರಾಜ್ಯ ಕ್ರಿಕೆಟ್‌ ಅನ್ನು ಮತ್ತಷ್ಟು ಬಲಪಡಿಸುವುದು. ಪ್ರಮುಖವಾಗಿ 14 ಮತ್ತು 16 ವರ್ಷದೊಳಗಿನ ಪ್ರತಿಭೆಗಳಿಗೆ ಹೆಚ್ಚು ಅವಕಾಶ ಕಲ್ಪಿಸುವುದು. ಅದರಲ್ಲೂ ಗ್ರಾಮಾಂತರ ವಿಭಾಗಗಳಿಗೆ ಹೆಚ್ಚು ಒತ್ತು ನೀಡುತ್ತೇವೆ. ಶಾಲಾ ಕ್ರಿಕೆಟ್‌ ಬೆಳವಣಿಗೆ ಹೆಚ್ಚು ಬಲ ತುಂಬುವುದು. ಇದಕ್ಕಾಗಿ ಈಗಿರುವ ಸೌಲಭ್ಯ ಹಾಗೂ ತರಬೇತಿ ಸೌಕರ್ಯಗಳನ್ನು ಮತ್ತಷ್ಟು ಮೇಲ್ದರ್ಜೆಗೆ ಏರಿಸುವುದು.

*ಭಾರತದ ಕ್ರಿಕೆಟ್‌ನಲ್ಲಿ ಕರ್ನಾಟಕವು ಪ್ರಮುಖ ಕೇಂದ್ರವಾಗಿದೆ. ಅದನ್ನು ಮತ್ತಷ್ಟು ಬಲಾಢ್ಯಗೊಳಿಸಲು ಏನು ಯೋಜನೆ ಇದೆ?

– ಪ್ರತಿಭೆಗಳು ಸಿಗುವುದೇ ಗ್ರಾಮಾಂತರ ವಿಭಾಗಗಳಲ್ಲಿ. ಆದ್ದರಿಂದ ಅಲ್ಲಿಯ ಮೂಲಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವುದು. ಮಹಿಳಾ ಕ್ರಿಕೆಟ್‌ ಬೆಳವಣಿಗೆಗೂ ವಿಶೇಷ ಆದ್ಯತೆ ನೀಡುತ್ತೇವೆ. ಮಹಿಳೆಯರಿಗೂ ಸಮಾನ ಅವಕಾಶಗಳು ಸಿಗುವಂತಾಗಬೇಕು.

* ರಾಜ್ಯದ ಯಾವುದೇ ಭಾಗದ ಆಟಗಾರ ತನ್ನ ಮೂಲ ಕ್ಲಬ್‌ನಿಂದ ರಾಜ್ಯ ತಂಡಗಳಿಗೆ ಆಯ್ಕೆಯಾಗುವುದು ಕಡಿಮೆ. ಆದರೆ, ಅವರು ಬೆಂಗಳೂರಿನ ಕ್ಲಬ್‌ಗಳಲ್ಲಿ ಪ್ರತಿನಿಧಿಸಿದಾಗ ಮಾತ್ರ ಆಯ್ಕೆಯಾಗ್ತಾರೆಂಬ ದೂರುಗಳಿವೆ. ಇದನ್ನು ನಿವಾರಿಸಲು ಏನು ಕ್ರಮ ಯೋಜಿಸದ್ದೀರಿ?

– ನಮಗೆ ಪ್ರತಿಭೆಗಳು ಲಭಿಸುವುದೇ ಗ್ರಾಮಾಂತರ ವಿಭಾಗಗಳಲ್ಲಿ. ಆದ್ದರಿಂದ ಅವರಿಗೆ ಆದ್ಯತೆ ನೀಡಲು ನಾವು ಬದ್ಧ. ಆಯಾ ಭಾಗಗಳಲ್ಲಿ ಪಂದ್ಯಗಳನ್ನು ಹಾಗೂ ಕೋಚಿಂಗ್ ಕ್ಯಾಂಪ್‌ಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯೋಜಿಸುತ್ತೇವೆ. ಅಕಾಡೆಮಿಗಳ ಮೂಲಕ ಉತ್ತಮ ಆಟಗಾರರನ್ನು ಆಯ್ಕೆ ಮಾಡಲಾಗುವುದು. ಸ್ಥಳೀಯ ಲೀಗ್‌ ಟೂರ್ನಿಗಳಲ್ಲೂ ಪ್ರತಿಭಾಶೋಧ ಮಾಡಲಾಗುವುದು. ಇದೊಂದು ದೀರ್ಘ ಪ್ರಕ್ರಿಯೆಯಾಗಿದೆ. ಯಾವುದೂ ರಾತ್ರಿ ಬೆಳಗಾಗುವುದರೊಳಗೆ ಆಗುವುದಿಲ್ಲ. ಈ ಮೊದಲೂ ಜಾರಿಯಾಗಿರುವ ಒಳ್ಳೆಯ ಕೆಲಸಗಳನ್ನು ಮತ್ತಷ್ಟು ಉತ್ತಮಪಡಿಸುತ್ತೇವೆ.

* ಬಿಸಿಸಿಐ ರಾಷ್ಟ್ರೀಯ ಆಯ್ಕೆ ಸಮಿತಿ ವಜಾ ಮಾಡುವ ಮೂಲಕ ಗುಣಮಟ್ಟವೇ ಮುಖ್ಯ ಎಂಬ ಸಂದೇಶ ರವಾನಿಸಿದೆ. ರಾಜ್ಯದಲ್ಲಿಯೂ ಇಂತಹ ಕಟ್ಟುನಿಟ್ಟಿನ ಕ್ರಮಗಳು ಜಾರಿಯಾಗಲಿವೆಯೇ?

– ರಾಷ್ಟ್ರೀಯ ಹಂತವೇ ಬೇರೆ. ಇಲ್ಲಿಯ ಕಾರ್ಯವೈಖರಿ ಬೇರೆ. ಆದರೆ ಒಂದಂತೂ ಸ್ಪಷ್ಟ. ಆಯ್ಕೆ ಸಮಿತಿಯವರು ಎಲ್ಲ ಪಂದ್ಯಗಳನ್ನೂ ಖುದ್ದು ವೀಕ್ಷಿಸಬೇಕು. ಪ್ರತಿಯೊಬ್ಬ ಆಟಗಾರನ ಸಾಮರ್ಥ್ಯ ದಾಖಲಿಸಬೇಕು. ಅದು ಶಾಲಾಮಟ್ಟ ಇರಲಿ. ರಾಜ್ಯಮಟ್ಟ ಇರಲಿ. ಪ್ರತಿ ಹಂತದಲ್ಲಿಯೂ ಇದು ರೂಢಿಗತವಾಗಬೇಕು. ನಾನೂ ಒಬ್ಬ ಕ್ರಿಕೆಟಿಗ. ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿರುವ ಅನುಭವ ನನಗಿದೆ. ಆದ್ದರಿಂದ ಯಾವುದೇ ಪ್ರತಿಭೆಗೂ ಅನ್ಯಾಯವಾಗದಂತೆ ನೋಡಿಕೊಳ್ಳಲು ಬದ್ಧನಾಗಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT