ಭಾನುವಾರ, ನವೆಂಬರ್ 1, 2020
19 °C

RCB vs KXIP: ಪಂದ್ಯಕ್ಕೂ ಮುನ್ನ ಕಳಪೆ ಫಾರ್ಮ್ ಬಗ್ಗೆ ಮಾತನಾಡಿದ ಮ್ಯಾಕ್ಸ್‌ವೆಲ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಈ ಬಾರಿಯ ಐಪಿಎಲ್‌ ಟೂರ್ನಿಯಲ್ಲಿ ಫಾರ್ಮ್‌ ಸಮಸ್ಯೆಯಿಂದ ಬಳಲುತ್ತಿರುವ ಕಿಂಗ್ಸ್‌ ಇಲವೆನ್ ಪಂಜಾಬ್ ತಂಡದ ಆಲ್‌ರೌಂಡರ್‌ ಗ್ಲೇನ್‌ ಮ್ಯಾಕ್ಸ್‌ವೆಲ್‌ ಟೀಕಾಕಾರರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ದೊಡ್ಡ ಮೊತ್ತ ಕಲೆಹಾಕಲು ವಿಫಲವಾಗುತ್ತಿರುವ ಮ್ಯಾಕ್ಸ್‌ವೆಲ್‌, ಆಡಿರುವ 7 ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 10*, 7, 11*, 11,13*, 5 ಮತ್ತು 1 ರನ್‌ ಸೇರಿ ಒಟ್ಟು 58 ರನ್ ಗಳಿಸಿದ್ದಾರೆ. ರನ್‌ ಗಳಿಸಲು ವಿಫರಾಗುತ್ತಿದ್ದರೂ ಮ್ಯಾಕ್ಸ್‌ವೆಲ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡುತ್ತಿರುವುದರ ಬಗ್ಗೆ ಸಾಕಷ್ಟು ಪ್ರಶ್ನೆಗಳೂ ಎದ್ದಿವೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮ್ಯಾಕ್ಸ್‌ವೆಲ್‌, ‘ನೀವು ನಮ್ಮ ಬ್ಯಾಟಿಂಗ್‌ ಆರ್ಡರ್‌ ಅನ್ನು ಗಮನಿಸಿದರೆ, ನನಗಿಂತ ಮೊದಲು ಬ್ಯಾಟಿಂಗ್‌ ಮಾಡುವ ನಮ್ಮ ತಂಡದ ಮೂವರು ಟೂರ್ನಿಯಲ್ಲಿ ಹೆಚ್ಚು ರನ್‌ ಗಳಿಸಿದ ಹತ್ತು ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿದ್ದಾರೆ. ಇದರಿಂದಾಗಿ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಗಳಿಸಲು ಹೆಚ್ಚು ರನ್ ಉಳಿದಿರುವುದಿಲ್ಲ’

‘ನಾನು ಮೂರು ಬಾರಿ ನಾಟೌಟ್ ಆಗಿ ಉಳಿದಿದ್ದೇನೆ. ಬಹುಶಃ ಇದು ನಾನು ಕೊನೆಯಲ್ಲಿ ಎಷ್ಟು ಎಸೆತಗಳನ್ನು ಎದುರಿಸಿದ್ದೇನೆ ಎಂಬುದನ್ನು ತೋರಿಸುತ್ತದೆ. ನಾನು ಈಗಲೂ ನನ್ನಿಂದ ಸಾಧ್ಯವಾದಷ್ಟು ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತಿದ್ದೇನೆ. ನಾನಿಗಲೂ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದೇನೆ. ಹೆಚ್ಚು ಸಮಯ ಕ್ರೀಸ್‌ನಲ್ಲಿರುವ ಆಟಗಾರನಿಗೆ ಸ್ಟ್ರೈಕ್‌ ಸಿಗಬೇಕೆಂದು ನಾನು ಸಾಕಷ್ಟು ಬಾರಿ ಪ್ರಯತ್ನಸಿದ್ದೇನೆ’ ಎಂದು ಹೇಳಿದ್ದಾರೆ.

‘ಹೌದು, ನನಗೆ ಇಲ್ಲಿಯವರೆಗೆ ಹೆಚ್ಚು ಅವಕಾಶ ಸಿಕ್ಕಿಲ್ಲ ಮತ್ತು ಜನರು ನಾನು ಎಷ್ಟು ರನ್‌ ಗಳಿಸಿದ್ದೇನೆ ಎಂಬುದರತ್ತ ನೋಡುತ್ತಾರೆ. ಸಿಕ್ಕಿರುವ ಸೀಮಿತ ಅವಕಾಶಗಳೊಂದಿಗೆ ನಾನು ಚೆಂಡನ್ನು ಚೆನ್ನಾಗಿ ಬಾರಿಸಿದ್ದೇನೆ ಎಂದೇ ಈಗಲೂ ಭಾವಿಸಿದ್ದೇನೆ’ ಎಂದಿದ್ದಾರೆ.

ಟೂರ್ನಿಯಲ್ಲಿ ಆಡಿರುವ 7 ಪಂದ್ಯಗಳಲ್ಲಿ ಕೇವಲ 1 ಪಂದ್ಯ ಗೆದ್ದಿರುವ ಕಿಂಗ್ಸ್‌ ಇಲವೆನ್‌ ಪಂಜಾಬ್‌ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇಂದು ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ವಿರುದ್ಧ ಕಣಕ್ಕಿಳಿಯಲಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು