ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಿನ ಸರಪಳಿ ಮುರಿಯುವುದೇ ಲಂಕಾ?

ಸರ್ಫರಾಜ್ ಅಹಮ್ಮದ್ ಬಳಗಕ್ಕೆ ದಿಮುತ್ ಕರುಣಾರತ್ನೆ ನಾಯಕತ್ವದ ತಂಡದ ಸವಾಲು
Last Updated 6 ಜೂನ್ 2019, 19:30 IST
ಅಕ್ಷರ ಗಾತ್ರ

ಬ್ರಿಸ್ಟಲ್ (ಎಎಫ್‌ಪಿ): ಏಳರಲ್ಲಿ ಏಳು ಸೋಲು... ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಶ್ರೀಲಂಕಾ ತಂಡ ಹೊಂದಿರುವ ಕಹಿ ‘ದಾಖಲೆ’ ಇದು. ಈ ಸೋಲಿನ ಸರಪಳಿ ಕಳಚಿ ಗೆಲುವಿನ ಹಾದಿಯಲ್ಲಿ ನಡೆಯುವ ಹುಮ್ಮಸ್ಸಿನೊಂದಿಗೆ ತಂಡ ಶುಕ್ರವಾರ ಇಲ್ಲಿ ಕಣಕ್ಕೆ ಇಳಿಯಲಿದೆ.

ಮೊದಲ ಎರಡು ಪಂದ್ಯಗಳಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ತಲಾ ಒಂದನ್ನು ಗೆದ್ದು ಒಂದರಲ್ಲಿ ಸೋತಿವೆ.

ಮೊದಲ ವಿಶ್ವಕಪ್ ಟೂರ್ನಿ ನಡೆದ 1975ರಿಂದ ಇಲ್ಲಿಯ ವರೆಗೆ ಪಾಕಿಸ್ತಾನ ಎದುರು ಶ್ರೀಲಂಕಾ ಪ್ರತಿ ಪಂದ್ಯದಲ್ಲೂ ಸೋತಿದೆ. ಈ ಬಾರಿಯೂ ಪಾಕಿಸ್ತಾನ ಬಲಿಷ್ಠವಾಗಿದೆ. ಮೊದಲ ಪಂದ್ಯದಲ್ಲಿ ಹೀನಾಯವಾಗಿ ಸೋತರೂ ಚೇತರಿಸಿಕೊಂಡಿರುವ ಸರ್ಫರಾಜ್ ಅಹಮ್ಮದ್ ಬಳಗ ಎರಡನೇ ಪಂದ್ಯದಲ್ಲಿ ಆತಿಥೇಯರನ್ನು ಮಣಿಸಿತ್ತು. ಶ್ರೀಲಂಕಾ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ 10 ವಿಕೆಟ್‌ಗಳಿಂದ ಸೋತಿತ್ತು. ನಂತರ ಏಷ್ಯಾದ ಎದುರಾಳಿ ಅಫ್ಗಾನಿಸ್ತಾನವನ್ನು ಸೋಲಿಸಿತ್ತು.

ಹೀಗಾಗಿ ನಾಯಕ ಕರುಣಾರತ್ನೆ ಗೆಲ್ಲುವ ಭರವಸೆಯಲ್ಲಿದ್ದಾರೆ. ಏಷ್ಯಾದ ಮತ್ತೊಂದು ಪ್ರಬಲ ಎದುರಾಳಿ ಪಾಕಿಸ್ತಾನವನ್ನು ಈ ಬಾರಿಯಾದರೂ ಮಣಿಸಿ ಗೆಲುವಿನ ಲಯ ಕಾಯ್ದುಕೊಳ್ಳಲು ಸಾಧ್ಯ ಎಂಬ ನಿರೀಕ್ಷೆಯಲ್ಲಿದ್ದಾರೆ.

ಹಿಂದಿನ ಸೋಲುಗಳನ್ನು ಮರೆತಿದ್ದೇವೆ. ತಂಡದ ಪಾಲಿಗೆ ಇದು ಮತ್ತೊಂದು ಏಕದಿನ ಪಂದ್ಯ. ಹೀಗಾಗಿ ಗೆಲುವಿನ ಕನಸು ಹೊತ್ತು ಅಂಗಣಕ್ಕೆ ಇಳಿಯಲಿದ್ದೇವೆ’ ಎಂದು ಕರುಣಾರತ್ನೆ ಹೇಳಿದರು.‌

‘ನ್ಯೂಜಿಲೆಂಡ್ ವಿರುದ್ಧ ಹೀನಾಯವಾಗಿ ಸೋತ ನಂತರ ತಂಡದ ಮನೋಬಲ ಕುಗ್ಗಿತ್ತು. ಆದರೆ ಅಫ್ಗಾನಿಸ್ತಾನ ಎದುರಿನ ಪಂದ್ಯದ ಗೆಲುವು ಚೇತರಿಕೆ ತುಂಬಿದೆ. ಪಾಕಿಸ್ತಾನವನ್ನು ಮಣಿಸುವ ಸಾಮರ್ಥ್ಯ ನಮಗಿದೆ ಎಂಬ ವಿಶ್ವಾಸ ಮೂಡಿದೆ’ ಎಂದು ಅವರು ಹೇಳಿದರು.

ಮಧ್ಯಮ ಕ್ರಮಾಂಕದ ಮೇಲೆ ಒತ್ತಡ: ಶ್ರೀಲಂಕಾ ತಂಡದ ಮಧ್ಯಮ ಕ್ರಮಾಂಕ ಎರಡೂ ಪಂದ್ಯಗಳಲ್ಲಿ ನಿರಾಸೆ ಅನುಭವಿಸಿತ್ತು. ಪಾಕಿಸ್ತಾನ ವಿರುದ್ಧವೂ ಈ ‘ಚಾಳಿ’ ಮುಂದುವರಿದರೆ ತಂಡ ಸಂಕಷ್ಟಕ್ಕೆ ಸಿಲುಕುವುದು ಖಚಿತ.

ಬ್ಯಾಟಿಂಗ್‌ನಲ್ಲೂ ಬೌಲಿಂಗ್‌ನಲ್ಲೂ ಪಾಕಿಸ್ತಾನ ಈಗ ಬಲಿಷ್ಠವಾಗಿದೆ. ಕಳೆದ ಪಂದ್ಯದಲ್ಲಿ ಇಂಗ್ಲೆಂಡ್‌ನ ಪ್ರಬಲ ಬೌಲಿಂಗ್ ದಾಳಿಯನ್ನು ಎದುರಿಸಿ 348 ರನ್‌ ಪೇರಿಸಿತ್ತು. ವಿಶ್ವಕಪ್‌ನಲ್ಲಿ ಈ ತಂಡದ ದಾಖಲೆ ಮೊತ್ತವಾಗಿತ್ತು ಇದು. ನಾಯಕನೊಂದಿಗೆ ಮೊಹಮ್ಮದ್ ಹಫೀಜ್, ಬಾಬರ್ ಆಜಂ, ಫಕ್ರ್ ಜಮಾನ್, ಇಮಾಮ್‌ ಉಲ್ ಹಕ್‌ ಮತ್ತು ಹಿರಿಯ ಆಟಗಾರ ಶೋಯೆಬ್ ಮಲಿಕ್ ತಂಡದ ಬ್ಯಾಟಿಂಗ್ ವಿಭಾಗದ ಶಕ್ತಿ ಎನಿಸಿದ್ದಾರೆ.

ವಹಾಬ್ ರಿಯಾಜ್, ಮೊಹಮ್ಮದ್ ಅಮೀರ್, ಶಾದಾಬ್ ಖಾನ್ ಮುಂತಾದ ಬೌಲರ್‌ಗಳು ಎಂಥ ಬ್ಯಾಟ್ಸ್‌ಮನ್‌ಗಳನ್ನೂ ಕಟ್ಟಿಹಾಕುವ ಸಾಮರ್ಥ್ಯ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT