ಬುಧವಾರ, ಆಗಸ್ಟ್ 4, 2021
27 °C
ಫಿಕ್ಸಿಂಗ್‌ ನಡೆದಿದೆ ಎಂಬ ಆರೋಪ

2011ರ ವಿಶ್ವಕಪ್ | ಸಾಕ್ಷ್ಯಾಧಾರಗಳ ಕೊರತೆ; ತನಿಖೆ ಕೈಬಿಟ್ಟ ಲಂಕಾ ಪೊಲೀಸ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೊಲಂಬೊ: 2011ರ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಫೈನಲ್‌ನಲ್ಲಿ ಫಿಕ್ಸಿಂಗ್‌ ನಡೆದಿತ್ತು ಎಂಬುದನ್ನು ಸಾಬೀತುಪಡಿಸಲು ಸೂಕ್ತ ಸಾಕ್ಷ್ಯಾಧಾರಗಳು ಸಿಗದ ಕಾರಣ ಶ್ರೀಲಂಕಾ ಪೊಲೀಸ್‌ ಶುಕ್ರವಾರ ಈ ಪ್ರಕರಣದ ತನಿಖೆಯನ್ನು ಕೈಬಿಟ್ಟಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದಿದ್ದ ಫೈನಲ್‌ನಲ್ಲಿ ಲಂಕಾ ತಂಡವು ಭಾರತದ ಎದುರು ಪರಾಭವಗೊಂಡಿತ್ತು. ಆ ಪಂದ್ಯವನ್ನು ಎರಡು ಪಕ್ಷಗಳು ಸೇರಿ ಮಾರಾಟ ಮಾಡಿವೆ ಎಂದು ಆರೋಪಿಸಿದ್ದ ಶ್ರೀಲಂಕಾದ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಳತಗಮಗೆ ಈ ಕುರಿತು ಸಮಗ್ರ ತನಿಖೆಯಾಗಬೇಕೆಂದು ಇತ್ತೀಚೆಗೆ ಒತ್ತಾಯಿಸಿದ್ದರು.

ಹೀಗಾಗಿ ಶ್ರೀಲಂಕಾ ಕ್ರೀಡಾ ಸಚಿವಾಲಯವು ಪ್ರಕರಣದ ತನಿಖೆ ನಡೆಸುವಂತೆ ವಿಶೇಷ ತನಿಖಾ ದಳಕ್ಕೆ ಸೂಚಿಸಿತ್ತು.

ತನಿಖೆ ಆರಂಭಿಸಿದ್ದ ವಿಶೇಷ ದಳವು ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ತಂಡವನ್ನು ಮುನ್ನಡೆಸಿದ್ದ ಕುಮಾರ ಸಂಗಕ್ಕಾರ, ಹಿರಿಯ ಆಟಗಾರ ಮಾಹೇಲ ಜಯವರ್ಧನೆ, ಆರಂಭಿಕ ಆಟಗಾರ ಉಪುಲ್‌ ತರಂಗ ಹಾಗೂ ಆಗ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದ ಅರವಿಂದ ಡಿಸಿಲ್ವಾ ಅವರ ವಿಚಾರಣೆ ನಡೆಸಿ ಹೇಳಿಕೆಗಳನ್ನು ದಾಖಲಿಸಿಕೊಂಡಿತ್ತು.

‘ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಿದ್ದೇವೆ. ತನಿಖಾ ವರದಿಯನ್ನು ಶೀಘ್ರವೇ ಕ್ರೀಡಾ ಸಚಿವಾಲಯದ ಕಾರ್ಯದರ್ಶಿಗಳಿಗೆ ಸಲ್ಲಿಸಲಿದ್ದೇವೆ. ಫಿಕ್ಸಿಂಗ್‌ ನಡೆದಿದೆ ಎಂಬುದನ್ನು ನಿರೂಪಿಸುವುದಕ್ಕೆ ಯಾವುದೇ ಸಾಕ್ಷ್ಯಗಳು ಇಲ್ಲ. ಹೀಗಾಗಿ ತನಿಖೆಯನ್ನು ಇಲ್ಲಿಗೆ ಮುಕ್ತಾಯಗೊಳಿಸಲು ತೀರ್ಮಾನಿಸಿದ್ದೇವೆ’ ಎಂದು ವಿಶೇಷ ತನಿಖಾ ದಳದ ಅಧಿಕಾರಿ ಜಗತ್‌ ಫೊನ್ಸೆಕಾ ಹೇಳಿದ್ದಾರೆ.

‘ಫೈನಲ್‌ ಪಂದ್ಯದ ವೇಳೆ ಆಡುವ ಬಳಗದಲ್ಲಿ ನಾಲ್ಕು ಬದಲಾವಣೆಗಳನ್ನು ಮಾಡಿದ್ದು ಏಕೆ ಎಂಬುದರ ಕುರಿತು ಸಂಗಕ್ಕಾರ, ಜಯವರ್ಧನೆ ಮತ್ತು ತರಂಗ ಅವರು ಸೂಕ್ತ ವಿವರಣೆ ನೀಡಿದ್ದಾರೆ. ಆಗ ತಂಡದಲ್ಲಿದ್ದ ಎಲ್ಲಾ ಆಟಗಾರರಿಗೂ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ನೀಡುವ ಆಲೋಚನೆ ಇತ್ತು. ಸಮರ್ಪಕ ಮಾಹಿತಿ ಸಿಕ್ಕ ಮೇಲೆಯೂ ಎಲ್ಲರನ್ನೂ ವಿಚಾರಣೆಗೆ ಒಳಪಡಿಸುವುದರಲ್ಲಿ ಅರ್ಥವಿಲ್ಲ. ಇದು ಸಾಕಷ್ಟು ಗೊಂದಲಕ್ಕೂ ಎಡೆಮಾಡಿಕೊಡಬಹುದು’ ಎಂದು ಪೊಲೀಸ್‌ ವರಿಷ್ಠಾಧಿಕಾರಿಯೂ ಆಗಿರುವ ಜಗತ್‌ ತಿಳಿಸಿದ್ದಾರೆ.

ಲಂಕಾ ತಂಡವು ವಿಶ್ವಕಪ್‌ ಫೈನಲ್‌ನಲ್ಲಿ ಸೋತಾಗ ಮಹಿಂದಾನಂದ ಅವರು ಕ್ರೀಡಾ ಸಚಿವರಾಗಿದ್ದರು. ಆಗ ಸುಮ್ಮನಿದ್ದ ಅವರು ಒಂಬತ್ತು ವರ್ಷಗಳ ಬಳಿಕ ಫಿಕ್ಸಿಂಗ್‌ ಆರೋಪ ಮಾಡಿ ತನಿಖೆಗೆ ಆಗ್ರಹಿಸಿದ್ದು ಏಕೆ ಎಂದು ಹಲವರು ಪ್ರಶ್ನಿಸಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು