ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್ ಕೊಹ್ಲಿ ಸಾಧನೆಗೆ ಶ್ಲಾಘಿಸಿದ ಬಿಸಿಸಿಐ: ಕೃತಜ್ಞತೆ ಸಲ್ಲಿಕೆ

Last Updated 9 ಡಿಸೆಂಬರ್ 2021, 15:24 IST
ಅಕ್ಷರ ಗಾತ್ರ

ನವದೆಹಲಿ: ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕತ್ವದಲ್ಲಿ ವಿರಾಟ್ ಕೊಹ್ಲಿಯ ಸಾಧನೆಯನ್ನು ಶ್ಲಾಘಿಸಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಕೃತಜ್ಞತೆ ಸಲ್ಲಿಸಿದೆ.

ಬುಧವಾರ ಏಕದಿನ ಕ್ರಿಕೆಟ್ ತಂಡಕ್ಕೆ ರೋಹಿತ್ ಶರ್ಮಾ ಅವರನ್ನು ನಾಯಕರನ್ನಾಗಿ ನೇಮಕ ಮಾಡಿ, ಕೊಹ್ಲಿಯನ್ನು ಟೆಸ್ಟ್ ನಾಯಕರನ್ನಾಗಿ ಉಳಿಸಿಕೊಳ್ಳಲಾಗಿದೆ. ಈ ಹಿಂದೆ ಟಿ20 ತಂಡಕ್ಕೆ ರೋಹಿತ್ ಅವರನ್ನು ನೇಮಕ ಮಾಡಲಾಗಿತ್ತು. ಕೊಹ್ಲಿ ಟಿ20 ವಿಶ್ವಕಪ್ ನಂತರ ಚುಟುಕು ಕ್ರಿಕೆಟ್ ತಂಡದ ನಾಯಕತ್ವ ಬಿಟ್ಟುಕೊಟ್ಟಿದ್ದರು.

‘ತಂಡವನ್ನು ಎದೆಗಾರಿಕೆ, ಧೃಡ ನಿಶ್ಚಯ ಮತ್ತು ಅಗಾಧ ಪ್ರೇಮದಿಂದ ಮುನ್ನಡೆಸಿದ ನಾಯಕ ವಿರಾಟ್. ಅವರಿಗೆ ಧನ್ಯವಾದಗಳು’ ಎಂದು ಮಂಡಳಿಯು ಟ್ವೀಟ್ ಮಾಡಿದೆ.

ಸೀಮಿತ ಓವರ್‌ಗಳ ತಂಡಕ್ಕೆ 2017ರಲ್ಲಿ ಪೂರ್ಣಾವಧಿ ನಾಯಕರಾಗಿ ನೇಮಕವಾದ ಕೊಹ್ಲಿ, 95 ಏಕದಿನ ಪಂದ್ಯಗಳ ಪೈಕಿ 65ರಲ್ಲಿ ಜಯಿಸಿದ್ದಾರೆ.

ರೋಹಿತ್ ಶರ್ಮಾ ಇದೇ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಏಕದಿನ ಟೂರ್ನಿಯಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

ಸೀಮಿತ ಓವರ್‌ಗಳ ಕ್ರಿಕೆಟ್ ತಂಡಕ್ಕೆ ಇಬ್ಬರು ನಾಯಕರಿರುವುದು ತರವಲ್ಲ: ಏಕದಿನ ಕ್ರಿಕೆಟ್ ತಂಡದಕ್ಕೆ ವಿರಾಟ್ ಕೊಹ್ಲಿಯ ಬದಲು ರೋಹಿತ್ ಶರ್ಮಾ ಅವರನ್ನು ನೇಮಕ ಮಾಡಿರುವುದರ ಕುರಿತು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮೌನ ಮುರಿದಿದ್ದಾರೆ.

‘ಸೀಮಿತ ಓವರ್‌ಗಳ ಮಾದರಿಯ ಕ್ರಿಕೆಟ್‌ ತಂಡಕ್ಕೆ ಇಬ್ಬರು ನಾಯಕರಿರುವುದು ಒಳ್ಳೆಯದಲ್ಲ. ನಿರ್ಣಯ ಕೈಗೊಳ್ಳುವಾಗ ಮತ್ತು ತಂಡಗಳ ತಂತ್ರಗಾರಿಕೆ ರೂಪಿಸುವಾಗ ತೊಂದರೆಯಾಗುತ್ತದೆ. ಅಲ್ಲದೇ ಸಮತೋಲನದ ಕೊರತೆಯೂ ಆಗುತ್ತದೆ. ಆದ್ದರಿಂದ ಆಯ್ಕೆ ಸಮಿತಿಯು ಶ್ವೇತವರ್ಣದ ಚೆಂಡಿನ ಕ್ರಿಕೆಟ್‌ ತಂಡಕ್ಕೆ ಒಬ್ಬರನ್ನೇ ನಾಯಕರನ್ನಾಗಿ ಮಾಡಲು ನಿರ್ಧರಿಸಿದೆ’ ಎಂದು ಗಂಗೂಲಿ ಸ್ಪಷ್ಟಪಡಿಸಿದರು.

‘ಸ್ವತಃ ನಾನು ಮತ್ತು ಆಯ್ಕೆ ಸಮಿತಿ ಮುಖ್ಯಸ್ಥ ಚೇತನ್ ಶರ್ಮಾ ಅವರು ಕೊಹ್ಲಿಯೊಂದಿಗೆ ಮಾತನಾಡಿದ ನಂತರವೇ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕೆ ವಿರಾಟ್ ಸಮ್ಮತಿಸಿದ್ದಾರೆ. ಏನೇನು ಮಾತುಕತೆ ನಡೆಯಿತು ಎಂಬುದನ್ನು ನಾನು ವಿವರಿಸಲು ಸಾಧ್ಯವಿಲ್ಲ’ ಎಂದು ಗಂಗೂಲಿ ಹೇಳಿದರು.

‘ರೋಹಿತ್ ನಾಯಕತ್ವ ಹೇಗಿರಲಿದೆ ಎಂಬುದನ್ನು ಈಗಲೇ ಊಹಿಸಲು ಸಾಧ್ಯವಿಲ್ಲ. ಅವರು ಉತ್ತಮವಾಗಿ ಕಾರ್ಯನಿರ್ವಹಿಸುವ ಭರವಸೆ ಇದೆ. ಅವರಿಗೆ ಒಳ್ಳೆಯದಾಗಲಿ‘ ಎಂದು ಶುಭ ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT