ಶುಕ್ರವಾರ, ಏಪ್ರಿಲ್ 23, 2021
22 °C
ಸತತ ಎರಡನೇ ಅರ್ಧಶತಕ ಗಳಿಸಿದ ಪೂನಂ

ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಏಕದಿನ ಪಂದ್ಯ; ಲೀ ಶತಕಕ್ಕೆ ಶರಣಾದ ಮಿಥಾಲಿ ಬಳಗ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಖನೌ: ಮೊದಲ ಪಂದ್ಯದಲ್ಲಿ ಅಮೋಘ ಜೊತೆಯಾಟದ ಮೂಲಕ ತಂಡಕ್ಕೆ ಸುಲಭ ಜಯ ಗಳಿಸಿಕೊಟ್ಟ ಆರಂಭಿಕ ಬ್ಯಾಟರ್ ಲಿಜೆಲಿ ಲೀ ಶುಕ್ರವಾರ ಇಲ್ಲಿ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ವೈಭವ ಪ್ರದರ್ಶಿಸಿದರು. ಅವರ ಮೋಹಕ ಶತಕದ (ಔಟಾಗದೆ 132; 131 ಎಸೆತ, 16 ಬೌಂಡರಿ, 2 ಸಿಕ್ಸರ್) ನೆರವಿನಿಂದ ದಕ್ಷಿಣ ಆಫ್ರಿಕಾ ತಂಡ ಭಾರತ ಎದುರಿನ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು.

ಏಕಾನ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ 249 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ 46.3 ಓವರ್‌ಗಳಲ್ಲಿ ತಂಡ ನಾಲ್ಕು ವಿಕೆಟ್‌ಗಳಿಗೆ 223 ರನ್ ಗಳಿಸಿದ್ದಾಗ ಮಳೆ ಸುರಿಯಿತು. ಹೀಗಾಗಿ ಡಕ್ವರ್ಥ್ ಲೂಯಿಸ್ ನಿಯಮದಡಿ ದಕ್ಷಿಣ ಆಫ್ರಿಕಾ ಆರು ರನ್‌ಗಳಿಂದ ಗೆದ್ದಿತು. ಈ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2–1ರ ಮುನ್ನಡೆ ಸಾಧಿಸಿತು.  

ತಂಡಕ್ಕೆ ಆರಂಭಿಕ ಬ್ಯಾಟರ್‌ಗಳಾದ ಲೀ ಮತ್ತು ಲೌರಾ ವೊಲ್ವರ್ಟ್‌ 41 ರನ್‌ ಗಳಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟರು. ಆಫ್‌ ಸ್ಪಿನ್ನರ್ ದೀಪ್ತಿ ಶರ್ಮಾ ಎಸೆತದಲ್ಲಿ ವೊಲ್ವಾರ್ಟ್‌ ವಿಕೆಟ್ ಉರುಳಿದ ನಂತರ ಲೀ ಮತ್ತು ಲಾರಾ ಗೊಡಾಲ್ 40 ರನ್‌ಗಳ ಜೊತೆಯಾಟ ಆಡಿದರು. ನಂತರ ವಿಕೆಟ್‌ಗಳು ಉರುಳುತ್ತಿದ್ದರೂ ಲೀ ಏಕಾಂಗಿಯಾಗಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಲೀ ಜೀವನ ಶ್ರೇಷ್ಠ ಮೊತ್ತ ಗಳಿಸಿದರು. ಮಿಗ್ನನ್ ಡು ಪ್ರೀಜ್ 46 ಎಸೆತಗಳಲ್ಲಿ 37 ರನ್ ಗಳಿಸಿ ಲೀಗೆ ಉತ್ತಮ ಸಹಕಾರ ನೀಡಿದರು.

99 ಎಸೆತಗಳಲ್ಲಿ 13 ಬೌಂಡರಿ ಮತ್ತು ಒಂದು ಸಿಕ್ಸರ್ ಸಿಡಿಸಿ ಮೂರಂಕಿ ಮೊತ್ತ ದಾಟಿದ ಲೀ ಏಕದಿನ ಕ್ರಿಕೆಟ್‌ನಲ್ಲಿ ಮೂರನೇ ಹಾಗೂ ಭಾರತದ ವಿರುದ್ಧ ಮೊದಲ ಶತಕ ಗಳಿಸಿದ ಸಾಧನೆ ಮಾಡಿದರು. ಮಳೆ ಮೋಡ ಮುತ್ತಿದ್ದರಿಂದ ರನ್ ರೇಟ್ ಮೇಲೆ ಕಡಿವಾಣ ಹಾಕಿ ಎದುರಾಳಿಗಳನ್ನು ಸಂಕಷ್ಟಕ್ಕೆ ಸಿಲುಕಿಸುವ ಭಾರತದ ತಂತ್ರ ಲೀ ಎದುರು ಫಲಿಸಲಿಲ್ಲ. ಡಕ್ವರ್ಥ್ ಲೂಯಿಸ್ ನಿಯಮದಡಿ ಫಲಿತಾಂಶ ನಿರ್ಣಯಿಸುವ ಪರಿಸ್ಥಿತಿ ಎದುರಾದರೆ ಜಯಕ್ಕೆ ಬೇಕಾದ ರನ್ ರೇಟ್‌ ಕಾಯ್ದುಕೊಂಡೇ ಲೀ ಆಡಿದರು. ಎರಡು ಓವರ್‌ಗಳ ಅಂತರದಲ್ಲಿ ಡು ಪ್ರೀಜ್ ಮತ್ತು ಮರಿಜನೆ ಕಾಪ್ ವಿಕೆಟ್ ಪಡೆದು ನಿರೀಕ್ಷೆ ಮೂಡಿಸಿದ ಭಾರತದ ಬೌಲರ್‌ಗಳು ನಂತರ ಸಪ್ಪೆಯಾದರು.

ಟಾಸ್‌ ಗೆದ್ದ ದಕ್ಷಿಣ ಆಫ್ರಿಕಾ ಆತಿಥೇಯರನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. ತಂಡ ಖಾತೆ ತೆರೆಯುವ ಮೊದಲೇ ಇನಿಂಗ್ಸ್‌ನ ಎರಡನೇ ಎಸೆತದಲ್ಲಿ ಜೆಮಿಮಾ ರಾಡ್ರಿಗಸ್‌ ಔಟಾಗಿ ಮರಳಿದರು. ನಂತರ ಸ್ಮೃತಿ ಮಂದಾನ ಮತ್ತು ಪೂನಂ ರಾವತ್ ಕೆಚ್ಚೆದೆಯಿಂದ ಆಡಿ ಎರಡನೇ ವಿಕೆಟ್‌ಗೆ 63 ರನ್‌ಗಳ ಜೊತೆಯಾಟ ಆಡಿದರು. ಸ್ಮೃತಿ ಔಟಾದ ನಂತರ ಪೂನಂ ಮತ್ತು ನಾಯಕಿ ಮಿಥಾಲಿ ರಾಜ್ 77 ರನ್‌ಗಳನ್ನು ಸೇರಿಸಿದರು.

ಮಿಥಾಲಿ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 10 ಸಾವಿರ ರನ್ ಗಳಿಸಿದ ಮೊದಲ ಭಾರತೀಯ ಆಟಗಾರ್ತಿ ಎಂದೆನಿಸಿದರು. ಪೂನಂ (77; 108ಎ, 11 ಬೌಂ) ಸತತ ಎರಡನೇ ಅರ್ಧಶತಕ ಗಳಿಸಿದರು. ಹರ್ಮನ್‌ಪ್ರೀತ್ ಕೌರ್ ಮತ್ತು ದೀಪ್ತಿ ಶರ್ಮಾ ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಹೀಗಾಗಿ ತಂಡಕ್ಕೆ ಸ್ಪರ್ಧಾತ್ಮಕ ಮೊತ್ತ ಗಳಿಸಲು ಸಾಧ್ಯವಾಯಿತು. 

ಸಂಕ್ಷಿಪ್ತ ಸ್ಕೋರು: ಭಾರತ: 50 ಓವರ್‌ಗಳಲ್ಲಿ 5ಕ್ಕೆ 248 (ಸ್ಮೃತಿ ಮಂದಾನ 25, ಪೂನಂ ರಾವತ್ 77, ಮಿಥಾಲಿ ರಾಜ್ 36, ಹರ್ಮನ್‌ಪ್ರೀತ್ ಕೌರ್ 36, ದೀಪ್ತಿ ಶರ್ಮಾ 36; ಶಬ್ನಿಮ್ ಇಸ್ಮಾಯಿಲ್ 46ಕ್ಕೆ2, ಮರಿಜನೆ ಕಾಪ್ 47ಕ್ಕೆ1, ತೂಮಿ ಸೇಖುಖೂನೆ 53ಕ್ಕೆ1, ಅನಿ ಬಾಸ್‌ 29ಕ್ಕೆ1); ದಕ್ಷಿಣ ಆಫ್ರಿಕಾ: 46.3 ಓವರ್‌ಗಳಲ್ಲಿ 4ಕ್ಕೆ223 (ಲಿಜೆಲಿ ಲೀ ಔಟಾಗದೆ 132, ಮಿಗ್ನನ್ ಡು ಪ್ರೀಜ್ 37; ಜೂಲನ್ ಗೋಸ್ವಾಮಿ 20ಕ್ಕೆ2, ರಾಜೇಶ್ವರಿ ಗಾಯಕವಾಡ್ 39ಕ್ಕೆ1, ದೀಪ್ತಿ ಶರ್ಮಾ 39ಕ್ಕೆ1). ಫಲಿತಾಂಶ: ದಕ್ಷಿಣ ಆಫ್ರಿಕಾ ತಂಡಕ್ಕೆ ಆರು ರನ್‌ಗಳ ಜಯ (ಡಕ್ವರ್ಥ್ ಲೂಯಿಸ್ ನಿಯಮದಡಿ); ಸರಣಿಯಲ್ಲಿ 2–1ರ ಮುನ್ನಡೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು