ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಯನ್ಸ್‌ ಗರ್ಜನೆಗೆ ಬೆದರಿದ ಟೈಗರ್ಸ್

ಕೆಪಿಎಲ್: ನಿಹಾಲ್ ಉಲ್ಲಾಳ ಮಿಂಚಿನ ಆಟ: ಶಿವಮೊಗ್ಗ ಶುಭಾರಂಭ; ಹುಬ್ಬಳ್ಳಿಗೆ ನಿರಾಸೆ
Last Updated 17 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ನಿಹಾಲ್ ಉಲ್ಲಾಳ ಬ್ಯಾಟಿಂಗ್ ರಭಸಕ್ಕೆ ಹುಬ್ಬಳ್ಳಿಯ ಬೌಲರ್‌ಗಳು ಬಸವಳಿದರು. ಶಿವಮೊಗ್ಗ ಲಯನ್ಸ್‌ ತಂಡವು ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಮಧ್ಯಾಹ್ನ ನಡೆದ ಪಂದ್ಯದಲ್ಲಿ ವಿನಯಕುಮಾರ್ ನಾಯಕತ್ವದ ಹುಬ್ಬಳ್ಳಿ ಟೈಗರ್ಸ್‌ ತಂಡವು ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಶಿವಮೊಗ್ಗ ತಂಡದ ಟಿ. ಪ್ರದೀಪ್ (47ಕ್ಕೆ3) ಅವರ ಬೌಲಿಂಗ್ ಮುಂದೆ ಹುಬ್ಬಳ್ಳಿ ತಂಡ ಆರಂಭದಲ್ಲಿಯೇ ಆಘಾತ ಅನುಭವಿಸಿತು. ಆಗ ಅನುಭವಿ ಬ್ಯಾಟ್ಸ್‌ಮನ್ ಕೆ.ಬಿ. ಪವನ್ (53; 37ಎಸೆತ, 7ಬೌಂಡರಿ, 1ಸಿಕ್ಸರ್) ಅವರ ಅರ್ಧಶತಕದ ಆಸರೆಯು ತಂಡಕ್ಕೆ ಲಭಿಸಿತು. ಇದರಿಂದಾಗಿ ಟೈಗರ್ಸ್‌ 20 ಓವರ್‌ಗಳಲ್ಲಿ 154 ರನ್‌ ಗಳಿಸಿತು.

ಆದರೆ, ಈ ಮೊತ್ತವನ್ನು ರಕ್ಷಿಸಿಕೊಳ್ಳಲು ಹುಬ್ಬಳ್ಳಿ ತಂಡದ ನಾಯಕ, ಮಧ್ಯಮವೇಗಿ ಆರ್. ವಿನಯಕುಮಾರ್ ಮತ್ತು ಆದಿತ್ಯ ಸೋಮಣ್ಣ ಮಾಡಿದ ಪ್ರಯತ್ನಗಳು ಫಲ ಕೊಡಲಿಲ್ಲ. ಅವರ ಯೋಜನೆಗೆ ಶಿವಮೊಗ್ಗದ ನಿಹಾಲ್ ಅಡ್ಡ ನಿಂತರು. ಆರಂಭಿಕ ಬ್ಯಾಟ್ಸ್‌ಮನ್ ನಿಹಾಲ್ ಆಕರ್ಷಕ ಹೊಡೆತಗಳ ಮೂಲಕ ತಂಡವನ್ನು ಜಯದತ್ತ ಕೊಂಡೊಯ್ದರು. ಅವರು ಎತ್ತಿದ ಎರಡು ಅಮೋಘ ಸಿಕ್ಸರ್‌ಗಳಿಗೆ ಕ್ರೀಡಾಂಗಣದಲ್ಲಿದ್ದ ಕೆಲವೇ ಕೆಲವು ಪ್ರೇ್ಕ್ಷಕರು ಕುಣಿದಾಡಿದರು.

ಇನಿಂಗ್ಸ್‌ನಲ್ಲಿ ಇನ್ನೂ ಎರಡು ಓವರ್‌ಗಳು ಬಾಕಿಯಿರುವಾಗಲೇ ತಂಡವು ಜಯದ ಗುರಿ ಮುಟ್ಟಿತು.

ಶುಕ್ರವಾರ ನಡೆದಿದ್ದ ಉದ್ಘಾಟನೆ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಅದರಿಂದಾಗಿ ಟೂರ್ನಿಯಲ್ಲಿ ಮೊದಲ ಜಯ ಸಾಧಿಸಿದ ಹೆಗ್ಗಳಿಕೆಗೆ ಶಿವಮೊಗ್ಗ ತಂಡವು ಪಾತ್ರವಾಯಿತು. ಲಯನ್ಸ್ ತಂಡವು ಭಾನುವಾರ ಮೈಸೂರು ವಾರಿಯರ್ಸ್ ತಂಡವನ್ನು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರು: ಹುಬ್ಬಳ್ಳಿ ಟೈಗರ್ಸ್: 20 ಓವರ್‌ಗಳಲ್ಲಿ 154 (ಮೊಹಮ್ಮದ್ ತಾಹ 18, ಕೆ.ಬಿ. ಪವನ್ 53, ಕೆ.ಎಲ್. ಶ್ರೀಜಿತ್ 33, ಪ್ರವೀಣ್ ದುಬೆ 19, ವಿನಯಕುಮಾರ್ 11, ಅಭಿಮನ್ಯು ಮಿಥುನ್ 21ಕ್ಕೆ1, ಟಿ. ಪ್ರದೀಪ್ 47ಕ್ಕೆ3, ಎಚ್.ಎಸ್. ಶರತ್ 30ಕ್ಕೆ2, ರಿಷಭ್ ಸಿಂಗ್ 19ಕ್ಕೆ3, ಪೃಥ್ವಿರಾಜ್ 14ಕ್ಕೆ1) ಶಿವಮೊಗ್ಗ ಲಯನ್ಸ್: 18 ಓವರ್‌ಗಳಲ್ಲಿ 4 ವಿಕೆಟ್‌ಗಲಿಗೆ 155 (ಅರ್ಜುನ್ ಹೊಯ್ಸಳ 13, ನಿಹಾಲ್ ಉಲ್ಲಾಳ ಔಟಾಗದೆ 88, ಪವನ್ ದೇಶಪಾಂಡೆ 20, ಅಕ್ಷಯ್ ಬಲ್ಲಾಳ 20, ಆದಿತ್ಯ ಸೋಮಣ್ಣ 26ಕ್ಕೆ1, ಮಿತ್ರಕಾಂತ್ ಸಿಂಗ್ ಯಾದವ್ 26ಕ್ಕೆ2) ಫಲಿತಾಂಶ: ಶಿವಮೊಗ್ಗ ಲಯನ್ಸ್‌ ತಂಡಕ್ಕೆ 6 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ನಿಹಾಲ್ ಉಲ್ಲಾಳ.

ಇಂದಿನ ಪಂದ್ಯಗಳು

ಮೈಸೂರು ವಾರಿಯರ್ಸ್–ಶಿವಮೊಗ್ಗ ಲಯನ್ಸ್‌ (ಮಧ್ಯಾಹ್ನ 3ರಿಂದ)

ಬಿಜಾಪುರ ಬುಲ್ಸ್‌–ಬೆಂಗಳೂರು ಬ್ಲಾಸ್ಟರ್ಸ್‌ (ಸಂಜೆ 7ರಿಂದ)

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT