ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಅಕಾಡೆಮಿಗಳತ್ತ ಹೊರಳದ ಕ್ರಿಕೆಟಿಗರು: ತರಬೇತುದಾರರಿಗೆ ಕಠಿಣ ಸವಾಲು

Last Updated 25 ಜೂನ್ 2020, 5:42 IST
ಅಕ್ಷರ ಗಾತ್ರ

ಬೆಂಗಳೂರು: ಕ್ರೀಡಾ ಅಕಾಡೆಮಿಗಳ ಕಾರ್ಯಾಚರಣೆಗೆ ಸರ್ಕಾರವು ಹೋದ ತಿಂಗಳು ಅನುಮತಿ ನೀಡಿದೆ. ಆದರೆ, ಕೋವಿಡ್ –19 ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ತರಬೇತಿ ಬರುತ್ತಿಲ್ಲ.

ಪ್ರತಿ ವರ್ಷ ಮಾರ್ಚ್‌ನಿಂದ ಜುಲೈ ಅವಧಿಯಲ್ಲಿ ಶಾಲಾ, ಕಾಲೇಜುಗಳು ರಜೆ ಇರುವುದರಿಂದ ಕ್ರಿಕೆಟ್‌ ಕ್ಲಬ್‌ಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಹುಡುಗರು ಬರುತ್ತಿದ್ದರು. ಆದರೆ ಈ ಬಾರಿ ಲಾಕ್‌ಡೌನ್ ಇದ್ದ ಕಾರಣ ಮಾರ್ಚ್‌ನಿಂದ ಮೇ ಕೊನೆಯವರೆಗೆ ಎಲ್ಲ ಕ್ಲಬ್‌ಗಳೂ ಬಂದ್ ಆಗಿದ್ದವು. ಬಹಳಷ್ಟು ಪಾಲಕರು ತಮ್ಮ ಮಕ್ಕಳನ್ನು ಆಟದ ತರಬೇತಿಗೆ ಕಳುಹಿಸಲು ಹಿಂಜರಿಯುತ್ತಿದ್ದಾರೆಂದು ಕ್ಲಬ್‌ಗಳ ತರಬೇತುದಾರರು ಹೇಳಿದ್ದಾರೆ.

‘ಮೊದಲು ಪ್ರತಿದಿನ 300–350 ಮಕ್ಕಳು ಇಲ್ಲಿ ತರಬೇತಿಗೆ ಬರುತ್ತಿದ್ದರು. ವಾರಾಂತ್ಯದ ದಿನಗಳಲ್ಲಿ 500ಕ್ಕೂ ಹೆಚ್ಚು ಜನರು ಇಲ್ಲಿ ಆಡುತ್ತಿದ್ದರು. ಆದರೆ, ಈಗ ಈ ಸಂಖ್ಯೆಯ ಕೇವಲ 15ರಷ್ಟು ಸಂಖ್ಯೆಯಲ್ಲಿಯೂ ಮಕ್ಕಳು ಬರುತ್ತಿಲ್ಲ. ಜೂನ್ ಮತ್ತು ಜುಲೈನಲ್ಲಿ 600ಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಳ್ಳುತ್ತಿದ್ದರು. ಇದೀಗ ಜೂನ್‌ ಮುಗಿಯುತ್ತ ಬಂದಿದೆ. ಕೇವಲ 25 ಮಕ್ಕಳಷ್ಟೇ ಹೊಸದಾಗಿ ದಾಖಲಾಗಿದ್ದಾರೆ’ ಎಂದು ಕರ್ನಾಟಕ ಇನ್ಸ್‌ಟಿಟ್ಯೂಟ್ ಆಫ್ ಕ್ರಿಕೆಟ್ ನಿರ್ದೇಶಕ ಇರ್ಫಾನ್ ಸೇಟ್ ಹೇಳಿದ್ದಾರೆ.

‘ಕೊರೊನಾಗಿಂತ ಮೊದಲು ಹುಡುಗರು ಸರದಿಯಲ್ಲಿ ನಿಂತಿರುತ್ತಿದ್ದರು. ನಾವು ನಮ್ಮ ಸ್ಥಳಾವಕಾಶ ನೋಡಿಕೊಂಡು ದಾಖಲಿಸಿಕೊಳ್ಳುತ್ತಿದ್ದೆವು. ಅಷ್ಟು ಬೇಡಿಕೆ ಇತ್ತು. ಆದರೆ ಈಗ ಪ್ರತಿದಿನ 60–70 ಮಕ್ಕಳು ಬಂದರೆ ಹೆಚ್ಚು ಎನ್ನುವಂತಹ ಪರಿಸ್ಥಿತಿ ಇದೆ. ವಾರಾಂತ್ಯದಲ್ಲಿಯೂ ಹೆಚ್ಚು ಆಟಗಾರರು ಬರುತ್ತಿಲ್ಲ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು’ ಎಂದು ಆರ್‌.ಎಕ್ಸ್‌ ಕ್ರಿಕೆಟ್ ಅಕಾಡೆಮಿಯ ತರಬೇತುದಾರ ಆರ್‌.ಎಕ್ಸ್‌. ಮುರಳಿ ಹೇಳುತ್ತಾರೆ.

ಭಾರತ ಟೆಸ್ಟ್‌ ಕ್ರಿಕೆಟ್ ತಂಡದ ಆಟಗಾರ ಮಯಂಕ್ ಅಗರವಾಲ್ ಇದೇ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಾರೆ.

‘ಈ ವರ್ಷ ನಾವು ಕ್ಲಬ್‌ಗಳ ಕಾರ್ಯಶೈಲಿಯನ್ನು ಬದಲಾವಣೆ ಮಾಡಿಕೊಳ್ಳುವ ಅಗತ್ಯವಿದೆ. ಈ ಪರಿಸ್ಥಿತಿಯಲ್ಲಿಯೂ ಕೆಲವು ಮಕ್ಕಳು ಮತ್ತು ಸೀನಿಯರ್ ಕ್ರಿಕೆಟ್ ಆಟಗಾರರು ದಿನವೂ ಬರುತ್ತಿರುವುದು ಒಳ್ಳೆಯದು. ಅವರಿಗೆ ನಾವು ಕೃತಜ್ಞರಾಗಿರಬೇಕು. ಹೆಚ್ಚಿನ ಆದಾಯವನ್ನು ನಿರೀಕ್ಷೆ ಮಾಡುವುದು ಈಗ ಅಸಾಧ್ಯ. ನಮ್ಮ ಕ್ಲಬ್‌ನಲ್ಲಿದ್ದ ಕೋಚ್‌ಗಳು ಬೇರೆ ರಾಜ್ಯದವರಾಗಿದ್ದರು. ಅವರೆಲ್ಲ ತಮ್ಮ ತವರಿಗೆ ಮರಳಿದ್ದಾರೆ. ಅವರಿಗೆ ಸಂಬಳ ಕೊಡುವುದು ಕಷ್ಟ. ಈ ಒಂದು ವರ್ಷ ಇದೇ ಸ್ಥಿತಿ ಇರಬಹುದು’ ಎಂದು ಮುರಳಿ ಹೇಳುತ್ತಾರೆ.

‘ಈ ಹಂತದಲ್ಲಿ ನಾವು ಆದಾಯ, ವಹಿವಾಟಿನ ಬಗ್ಗೆ ಯೋಚಿಸುವುದರಲ್ಲಿ ಅರ್ಥವಿಲ್ಲ. ಆರೋಗ್ಯ ಮತ್ತು ಸುರಕ್ಷತೆಗೆ ಆದ್ಯತೆ ಕೊಡಬೇಕು. ದಿನದಿಂದ ದಿನಕ್ಕೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಕ್ಲಬ್‌ ಆರಂಭಿಸುವ ಕುರಿತು ಕಾದು ನೋಡುವುದೇ ಲೇಸು’ ಎಂದು ಕರ್ನಾಟಕ ಬ್ಲ್ಯೂಸ್‌ ಕ್ರಿಕೆಟ್ ಅಕಾಡೆಮಿಯ ಮುಖ್ಯ ಕೋಚ್ ಪಿ.ವಿ. ಶಶಿಕಾಂತ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT