ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರಿಯ ಕ್ರಿಕೆಟಿಗ ಮಾಧವ ಆಪ್ಟೆ ನಿಧನ

Last Updated 23 ಸೆಪ್ಟೆಂಬರ್ 2019, 16:32 IST
ಅಕ್ಷರ ಗಾತ್ರ

ಮುಂಬೈ : ಭಾರತದ ಹಿರಿಯ ಕ್ರಿಕೆಟಿಗ ಮಾಧವರಾವ್‌ ಲಕ್ಷ್ಮಣರಾವ್‌ ಆಪ್ಟೆ (86) ಅವರು ಸೋಮವಾರ ಬೆಳಿಗ್ಗೆ ಹೃದಯಸ್ಥಂಭನದಿಂದ ನಿಧನರಾದರು.

‘ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಬ್ರೀಚ್‌ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬೆಳಿಗ್ಗೆ ಆರು ಗಂಟೆಗೆ ಕೊನೆ ಉಸಿರೆಳೆದರು’ ಎಂದು ಅವರ ಮಗ ವರ್ಮನ್‌ ಆಪ್ಟೆ ತಿಳಿಸಿದ್ದಾರೆ.

ಆಪ್ಟೆ ಅವರು 1952ರಲ್ಲಿ ಪಾಕಿಸ್ತಾನದ ವಿರುದ್ಧ ಮೊದಲ ಟೆಸ್ಟ್‌ ಆಡಿದ್ದರು. ಮುಂಬೈಯ ಬ್ರೆಬೋರ್ನ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಹೋರಾಟದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಅವರು ಎರಡು ಇನಿಂಗ್ಸ್‌ಗಳಿಂದ 40ರನ್‌ ಬಾರಿಸಿದ್ದರು. ಆ ಪಂದ್ಯದಲ್ಲಿ ಭಾರತವು 10 ವಿಕೆಟ್‌ಗಳಿಂದ ಜಯಭೇರಿ ಮೊಳಗಿಸಿತ್ತು.

1953ರ ಏಪ್ರಿಲ್‌ನಲ್ಲಿ ಕಿಂಗ್ಸ್‌ಟನ್‌ನಲ್ಲಿ ನಡೆದಿದ್ದ ವೆಸ್ಟ್‌ ಇಂಡೀಸ್‌ ಎದುರಿನ ಪಂದ್ಯ ಅವರ ಪಾಲಿಗೆ ಕೊನೆಯದ್ದಾಗಿತ್ತು. ಆ ಸರಣಿಯಲ್ಲಿ ಒಟ್ಟು 460ರನ್‌ ಬಾರಿಸಿದ್ದರು. ಟೆಸ್ಟ್‌ ಸರಣಿಯೊಂದರಲ್ಲಿ 400ಕ್ಕೂ ಅಧಿಕ ರನ್‌ ಕಲೆಹಾಕಿದ ಭಾರತದ ಮೊದಲ ಆರಂಭಿಕ ಬ್ಯಾಟ್ಸ್‌ಮನ್‌ ಎಂಬ ಹಿರಿಮೆಗೂ ಭಾಜನರಾಗಿದ್ದರು.

ಒಟ್ಟು ಏಳು ಟೆಸ್ಟ್‌ ಆಡಿದ್ದ ಆಪ್ಟೆ, 542ರನ್‌ ಬಾರಿಸಿದ್ದರು. ಇದರಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕಗಳು ಸೇರಿವೆ.

ಬಲಗೈ ಬ್ಯಾಟ್ಸ್‌ಮನ್‌ ಆಗಿದ್ದ ಮಾಧವ್‌ ಅವರು ಪ್ರಥಮ ದರ್ಜೆಯಲ್ಲಿ 67 ಪಂದ್ಯಗಳನ್ನು ಆಡಿ 3,336ರನ್‌ ಗಳಿಸಿದ್ದರು. ಇದರಲ್ಲಿ ಆರು ಶತಕ ಮತ್ತು 16 ಅರ್ಧಶತಕಗಳು ಸೇರಿವೆ. ಅಪ್ಟೆ ಅವರು ಕೆಲ ಕಾಲ ಮುಂಬೈ ತಂಡದ ನಾಯಕರಾಗಿದ್ದರು.

ಭಾರತದ ಕ್ರಿಕೆಟ್‌ ದಿಗ್ಗಜರಾದ ವಿನೂ ಮಂಕಡ್‌, ಪಾಲಿ ಉಮ್ರಿಗರ್‌, ವಿಜಯ್‌ ಹಜಾರೆ ಮತ್ತು ರೂಷಿ ಮೋದಿ ಅವರೊಂದಿಗೆ ಅನೇಕ ಪಂದ್ಯಗಳಲ್ಲಿ ಆಡಿದ್ದರು.

ಆಪ್ಟೆ ಅವರ ನಿಧನಕ್ಕೆ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಮೌನ ನಮನ ಸಲ್ಲಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT