ಬೆಂಗಳೂರು: ಅಮೋಘ ಬೌಲಿಂಗ್ ಮಾಡಿದ ಮನ್ವಂತ್ ಕುಮಾರ್ ಮತ್ತು ಅರ್ಧಶತಕ ದಾಖಲಿಸಿದ ಲವನೀತ್ ಸಿಸೊಡಿಯಾ ಅವರ ಆಟದ ಬಲದಿಂದ ಹುಬ್ಬಳ್ಳಿ ಟೈಗರ್ಸ್ ತಂಡವು ಮಹಾರಾಜ ಟ್ರೋಫಿ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಜಯಿಸಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಹುಬ್ಬಳ್ಳಿ ತಂಡವು ವೈಶಾಖ ವಿಜಯಕುಮಾರ್ ನಾಯಕತ್ವದ ಗುಲ್ಬರ್ಗ ಮಿಸ್ಟಿಕ್ಸ್ ವಿರುದ್ಧ 7 ವಿಕೆಟ್‌ಗಳಿಂದ ಗೆದ್ದಿತು.
ಟಾಸ್ ಗೆದ್ದ ಹುಬ್ಬಳ್ಳಿ ತಂಡದ ನಾಯಕ ಮನೀಷ್ ಪಾಂಡೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮನ್ವಂತ್ ಕುಮಾರ್ (21ಕ್ಕೆ3), ವೇಗಿ ವಿದ್ವತ್ ಕಾವೆರಪ್ಪ (24ಕ್ಕೆ2) ಮತ್ತು ಲವೀಶ್ ಕೌಶಲ್ (26ಕ್ಕೆ2) ಅವರ ಬೌಲಿಂಗ್ ದಾಳಿಯ ಮುಂದೆ ಗುಲ್ಬರ್ಗ ತಂಡವು 138 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು.
ಗುರಿ ಬೆನ್ನಟ್ಟಿದ ಹುಬ್ಬಳ್ಳಿ ತಂಡಕ್ಕೆ ಮೊದಲ ಓವರ್‌ನಲ್ಲಿಯೇ ಆಘಾತ ಎದುರಾಯಿತು. ಗುಲ್ಬರ್ಗ ಬೌಲರ್ ಅಭಿಲಾಷ್ ಶೆಟ್ಟಿ ಹಾಕಿದ ಇನಿಂಗ್ಸ್‌ನ ಐದನೇ ಎಸೆತದಲ್ಲಿ ಮೊಹಮ್ಮದ್ ತಾಹ ಕ್ಲೀನ್‌ಬೌಲ್ಡ್ ಆದರು.
ಆದರೆ ಇನ್ನೊಂದು ಬದಿಯಲ್ಲಿದ್ದ ಸಿಸೊಡಿಯಾ ಅವರೊಂದಿಗೆ ಸೇರಿಕೊಂಡ ಕೃಷ್ಣನ್ ಶ್ರೀಜಿತ್ ಎರಡನೇ ವಿಕೆಟ್ ಜೊತೆಯಾಟದಲ್ಲಿ 106 ರನ್ ಸೇರಿಸಿದರು. ಸಿಸೊಡಿಯಾ 40 ಎಸೆತಗಳಲ್ಲಿ 61 ರನ್ ಗಳಿಸಿದರು. ಅದರಲ್ಲಿ ಐದು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳಿದ್ದವು. ಶ್ರೀಜಿತ್ 32 ಎಸೆತಗಳಲ್ಲಿ 47 ರನ್ ಗಳಿಸಿದರು. ಅದರಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದ್ದವು.
12ನೇ ಓವರ್‌ನಲ್ಲಿ ಶ್ರೀಜಿತ್ ಮತ್ತು ನಂತರದ ಓವರ್‌ನಲ್ಲಿ ಸಿಸೊಡಿಯಾ ಔಟಾದರು. ನಾಗ ಭರತ್ (ಅಜೇಯ 10) ಮತ್ತು ಮನೀಷ್ ಪಾಂಡೆ (ಔಟಾಗದೆ 15; 10ಎ) ತಂಡವನ್ನು ಗೆಲುವಿನ ದಡ ಸೇರಿಸಿದರು.
ಸಂಕ್ಷಿಪ್ತ ಸ್ಕೋರು:
ಗುಲ್ಬರ್ಗ ಮಿಸ್ಟಿಕ್ಸ್: 19.3 ಓವರ್‌ಗಳಲ್ಲಿ 138 (ಮೆಕ್‌ನಿಲ್ ನರೋನಾ 23, ಅಮಿತ್ ವರ್ಮಾ 19, ಸೌರಭ್ ಮುತ್ತೂರ 17, ಕೆ.ವಿ. ಅನೀಶ್ 16, ಆರ್. ಸ್ಮರಣ್ 15, ವಿದ್ವತ್ ಕಾವೇರಪ್ಪ 24ಕ್ಕೆ2, ಲವೀಶ್ ಕೌಶಲ್ 26ಕ್ಕೆ2, ಮನ್ವಂತ್ ಕುಮಾರ್ 21ಕ್ಕೆ3)
ಹುಬ್ಬಳ್ಳಿ ಟೈಗರ್ಸ್: 15.2 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 141 (ಲವನೀತ್ ಸಿಸೊಡಿಯಾ 61, ಕೃಷ್ಣನ್ ಶ್ರೀಜಿತ್ 47, ಮನೀಷ್ ಪಾಂಡೆ ಔಟಾಗದೆ 15, ಅಭಿಲಾಷ್ ಶೆಟ್ಟಿ 23ಕ್ಕೆ2, ಶರಣ್ ಗೌಡ 8ಕ್ಕೆ1)
ಫಲಿತಾಂಶ: ಹುಬ್ಬಳ್ಳಿ ಟೈಗರ್ಸ್‌ಗೆ 7 ವಿಕೆಟ್‌ಗಳ ಜಯ.
ಶಿವಮೊಗ್ಗ ಲಯನ್ಸ್: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 176 (ರೋಹನ್ ಕದಂ 27, ನಿಹಾಲ್ ಉಲ್ಲಾಳ 28, ಶ್ರೇಯಸ್ ಗೋಪಾಲ್ 46, ಅಭಿನವ್ ಮನೋಹರ್ 50, ಎಂ.ಜಿ. ನವೀನ್ 19ಕ್ಕೆ4)
ಮಂಗಳೂರು ಡ್ರ್ಯಾಗನ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 167 (ಬಿ.ಆರ್. ಶರತ್ 15, ರೋಹನ್ ಪಾಟೀಲ 23, ಕೆ.ವಿ. ಸಿದ್ಧಾರ್ಥ್ ಔಟಾಗದೆ 46, ಅನಿರುದ್ಧ ಜೋಶಿ 50, ನಿಶ್ಚಿತ್ ಎನ್ ರಾವ್ 28ಕ್ಕೆ2, ಪ್ರಣವ್ ಭಾಟಿಯಾ 21ಕ್ಕೆ2)
ಫಲಿತಾಂಶ: ಶಿವಮೊಗ್ಗ ಲಯನ್ಸ್‌ಗೆ 9 ರನ್‌ಗಳ ಜಯ.
ಇಂದಿನ ಪಂದ್ಯಗಳು
ಮೈಸೂರು ವಾರಿಯರ್ಸ್–ಮಂಗಳೂರು ಡ್ರ್ಯಾಗನ್ಸ್ (ಮಧ್ಯಾಹ್ನ 1ರಿಂದ)
ಶಿವಮೊಗ್ಗ ಲಯನ್ಸ್–ಬೆಂಗಳೂರು ಬ್ಲಾಸ್ಟರ್ಸ್ (ಸಂಜೆ 5.30ರಿಂದ)
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ಕನ್ನಡ, ಫ್ಯಾನ್‌ಕೋಡ್ ಆ್ಯಪ್
ಮನೋಹರ್ ಅರ್ಧಶತಕ; ಲಯನ್ಸ್‌ಗೆ ಜಯ
ಈ ಬಾರಿಯ ಮಹಾರಾಜ ಟ್ರೋಫಿ ಟೂರ್ನಿಯ ಹರಾಜು ಪ್ರಕ್ರಿಯೆಯಲ್ಲಿ ‘ದುಬಾರಿ’ ಮೌಲ್ಯ ಗಳಿಸಿದ ಆಭಿನವ್ ಮನೋಹರ್ ಅರ್ಧಶತಕ ಹಾಗೂ ಶ್ರೇಯಸ್ ಗೋಪಾಲ್ ಬ್ಯಾಟಿಂಗ್ ಬಲದಿಂದ ಶಿವಮೊಗ್ಗ ಲಯನ್ಸ್ ತಂಡವು 9 ರನ್‌ಗಳಿಂದ ಮಂಗಳೂರು ಡ್ರ್ಯಾಗನ್ಸ್ ವಿರುದ್ಧ ಗೆದ್ದಿತು. ಟಾಸ್ ಗೆದ್ದ ಮಂಗಳೂರು ತಂಡದ ನಾಯಕ ಕೃಷ್ಣಪ್ಪ ಗೌತಮ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ರೋಹನ್ ಕದಂ (27 ರನ್) ಮತ್ತು ನಿಹಾಲ್ ಉಲ್ಲಾಳ (28 ರನ್) ಮೊದಲ ವಿಕೆಟ್ ಜೊತೆಯಾಟದಲ್ಲಿ 50 ರನ್ ಸೇರಿಸಿ ಉತ್ತಮ ಆರಂಭ ನೀಡಿದರು.
ಮಧ್ಯಮ ಕ್ರಮಾಂಕದಲ್ಲಿ ಮಿಂಚಿದ ಶ್ರೇಯಸ್ (46; 32ಎ) ಹಾಗೂ ಅಭಿನವ್ (50; 25ಎ) ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 93 ರನ್ ಸೇರಿಸಿದರು.ಇದರಿಂದಾಗಿ ತಂಡವು 20ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 176 ರನ್ ಗಳಿಸಿತು. ಮಂಗಳೂರು ತಂಡದ ಎಂ.ಜಿ. ನವೀನ್ ನಾಲ್ಕು ವಿಕೆಟ್ ಗಳಿಸಿದರು. ಗುರಿ ಬೆನ್ನಟ್ಟಿದ ಮಂಗಳೂರು ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 167 ರನ್ ಗಳಿಸಿತು. ತಂಡದ ಕೆ.ವಿ. ಸಿದ್ಧಾರ್ಥ್ (46; 35ಎ) ನಾಲ್ಕು ರನ್‌ಗಳ ಅಂತರದಿಂದ ಅರ್ಧಶತಕ ತಪ್ಪಿಸಿಕೊಂಡರು. ಆದರೆ ಆರನೇ ಕ್ರಮಾಂಕದ ಬ್ಯಾಟರ್ ಅನಿರುದ್ಧ ಜೋಶಿ 31 ಎಸೆತಗಳಲ್ಲಿ 50 ರನ್ ಗಳಿಸಿದರು. ನಾಲ್ಕು ಸಿಕ್ಸರ್ ಮತ್ತು ಮೂರು ಬೌಂಡರಿ ಬಾರಿಸಿದರು. ಆದರೆ 19ನೇ ಓವರ್‌ನಲ್ಲಿ ಅವರು ಔಟಾದ ನಂತರ ತಂಡದ ಗೆಲುವಿನ ಆಸೆಯೂ ಕಮರಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.