ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಜ ಟ್ರೋಫಿ ಕ್ರಿಕೆಟ್: ಶರತ್‌ ಅರ್ಧಶತಕ, ಶಿವಮೊಗ್ಗಕ್ಕೆ ಜಯ

ಪವನ್‌ ಹೋರಾಟ ವ್ಯರ್ಥ; ಮೈಸೂರಿಗೆ ನಿರಾಸೆ
Last Updated 14 ಆಗಸ್ಟ್ 2022, 18:18 IST
ಅಕ್ಷರ ಗಾತ್ರ

ಮೈಸೂರು: ಸುಂದರ ಅರ್ಧಶತಕ ಗಳಿಸಿದ ಬಿ.ಆರ್‌.ಶರತ್ ಬ್ಯಾಟಿಂಗ್‌ ಬಲದಿಂದ ಶಿವಮೊಗ್ಗ ಸ್ಟ್ರೈಕರ್ಸ್‌ ಇಲ್ಲಿ ನಡೆಯುತ್ತಿರುವ ಮಹಾರಾಜ ಕ್ರಿಕೆಟ್‌ ಟ್ರೋಫಿ ಕೆಎಸ್‌ಸಿಎ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಚೊಚ್ಚಲ ಜಯ ಸಾಧಿಸಿತು.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಶಿವಮೊಗ್ಗ ತಂಡವು ಮೈಸೂರು ವಾರಿಯರ್ಸ್‌ ತಂಡವನ್ನು 13 ರನ್‌ಗಳಿಂದ ಮಣಿಸಿತು.

ಟಾಸ್‌ ಗೆದ್ದ ಮೈಸೂರು ತಂಡದ ನಾಯಕ ಕರುಣ್‌ ನಾಯರ್‌ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡರು. ಶಿವಮೊಗ್ಗದ ಆರಂಭಿಕ ಜೋಡಿ ರೋಹನ್‌ ಕದಂ (18), ಬಿ.ಆರ್‌.ಶರತ್‌ (53; 35ಎ, 4x6, 6x2) ಮೊದಲ ವಿಕೆಟ್‌ಗೆ 56 ರನ್‌ ಸೇರಿಸಿದರು. ಜೋಡಿಯನ್ನು ಶುಭಾಂಗ್‌ ಹೆಗ್ಡೆ ಬೇರ್ಪಡಿಸಿದರು.

ನಂತರ ಬಂದ ಸಿದ್ಧಾರ್ಥ್‌ (36), ಅವಿನಾಶ್‌ (25) ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು. ಶಿವಮೊಗ್ಗ 20 ಓವರ್‌ಗಳಲ್ಲಿ 8ಕ್ಕೆ 174 ರನ್‌ಗಳ ಸವಾಲಿನ ಮೊತ್ತ ಕಲೆ
ಹಾಕಿತು.

ಪವನ್‌ ಏಕಾಂಗಿ ಹೋರಾಟ: ಗುರಿ ಬೆನ್ನಟ್ಟಿದ ವಾರಿಯರ್ಸ್‌ ಮೊದಲ ಎಸೆತದಲ್ಲಿಯೇ ಕರುಣ್‌ ನಾಯರ್‌ ವಿಕೆಟ್‌ ಕಳೆದುಕೊಂಡು ಆಘಾತ ಅನುಭವಿಸಿತು. ವಿಕೆಟ್‌ ಬೀಳುತ್ತಿದ್ದರೂ ಪವನ್‌ ದೇಶಪಾಂಡೆ (64; 41ಎ, 4x6, 6x2) ‘ಗೋಡೆ’ಯಾಗಿ ನಿಂತರು. ಕೆಳ ಕ್ರಮಾಂಕದಲ್ಲಿ ಶುಭಾಂಗ್‌ ಹೆಗ್ಡೆ (13), ಶಿವರಾಜ್‌ (19), ಲೋಚನ್‌ ಅಪ್ಪಣ್ಣ (27) ಹೊರತುಪಡಿಸಿ ಉಳಿದವರಿಂದ ಬೆಂಬಲ ದೊರೆಯಲಿಲ್ಲ.

ಕೊನೆಯ ಹಂತದ ಓವರ್‌ಗಳಲ್ಲಿ ಅಪ್ಪಣ್ಣ ಅಬ್ಬರಿಸಿದರೂ ‘ಮೈಸೂರು ವಾರಿಯರ್ಸ್‌’ ಗೆಲುವಿನ ದಡ ತಲುಪಲಿಲ್ಲ.ಸತತ 5 ಪಂದ್ಯ ಸೋತು ಟೀಕೆಗಳಿಗೆ ಗುರಿಯಾಗಿದ್ದ ಶಿವಮೊಗ್ಗ ನಾಯಕ ಕೆ.ಗೌತಮ್‌ ಬೌಲಿಂಗ್‌ನಲ್ಲಿ ನಡೆಸಿದ ಪ್ರಯೋಗಗಳು ‘ವಾರಿಯರ್ಸ್’ಗೆಸೋಲಿನ ಕಹಿಯುಣಿಸಿದವು.

ಅಭಿನವ್‌ ಅರ್ಧಶತಕ; ಮಂಗಳೂರಿಗೆ ಜಯ
ಮಿಂಚಿನ ಅರ್ಧಶತಕ ಗಳಿಸಿದ ಅಭಿನವ್ ಮನೋಹರ್‌ (ಅಜೇಯ 55; 25ಎ, 4x5, 6x3) ಬ್ಯಾಟಿಂಗ್ ಬಲದಿಂದ ‘ಮಂಗಳೂರು ಯುನೈಟೆಡ್‌’ ರೋಚಕ ಜಯ ಸಾಧಿಸಿತು.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಮಂಗಳೂರು ತಂಡವು ‘ಗುಲ್ಬರ್ಗಾ ಮಿಸ್ಟಿಕ್ಸ್‌’ ಅನ್ನು 3 ವಿಕೆಟ್‌ಗಳಿಂದ ಮಣಿಸಿತು.

ಟಾಸ್‌ ಗೆದ್ದ ಮಂಗಳೂರು ತಂಡದ ನಾಯಕ ಆರ್‌.ಸಮರ್ಥ್‌ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಗುಲ್ಬರ್ಗಾದ ಆರಂಭಿಕ ಜೋಡಿ ದೇವದತ್‌ ಪಡಿಕ್ಕಲ್‌ (16), ರೋಹನ್‌ ಪಾಟೀಲ (10) ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ಇರಲಿಲ್ಲ. ನಂತರ ಬಂದ ನಾಯಕ ಮನೀಷ್‌ ಪಾಂಡೆ (ಅಜೇಯ 86; 45ಎ, 4x7, 6x4) ಅಬ್ಬರಿಸಿದರು.

ಕೆ.ಎಲ್‌.ಶ್ರೀಜಿತ್‌ (36), ಮನೋಜ್ ಭಾಂಡಗೆ (29) ಅವರೊಂದಿಗೆ ಮನೀಷ್‌ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. 40 ರನ್‌ಗೆ 3 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡವು 20 ಓವರ್‌ಗಳಲ್ಲಿ 6ಕ್ಕೆ 192 ರನ್‌ಗಳ ಸವಾಲಿನ ಗುರಿ ನೀಡಿತು.

ಗುರಿ ಬೆನ್ನಟ್ಟಿದ ಮಂಗಳೂರು ಆರಂಭದಲ್ಲೇ ಸಮರ್ಥ್‌ ವಿಕೆಟ್‌ ಕಳೆದುಕೊಂಡಿತು. ಅನೀಶ್ವರ್‌ ಗೌತಮ್ (30), ಎಸ್‌.ಎಸ್‌.ಸುಜಯ್‌ (29) ಆಸರೆಯಾದರು. ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ಅಭಿನವ್ ಮನೋಹರ್‌ ಅಬ್ಬರಿಸಿದರು. ಕಡೇ ಎರಡು ಓವರ್‌ಗಳಲ್ಲಿ ಜಯವನ್ನು ಮಂಗಳೂರಿಗೆ ತಂದುಕೊಟ್ಟರು.

ಸಂಕ್ಷಿಪ್ತ ಸ್ಕೋರುಗಳು
ಶಿವಮೊಗ್ಗ ಸ್ಟ್ರೈಕರ್ಸ್‌:
20 ಓವರ್‌ಗಳಲ್ಲಿ 8ಕ್ಕೆ 174 (ಬಿ.ಆರ್.ಶರತ್ 53, ಸಿದ್ಧಾರ್ಥ್‌ 36. ವಿದ್ಯಾಧರ್‌ ಪಾಟೀಲ 39ಕ್ಕೆ 3)
ಮೈಸೂರು ವಾರಿಯರ್ಸ್: 20 ಓವರ್‌ಗಳಲ್ಲಿ 8ಕ್ಕೆ 161 (ಪವನ್‌ ದೇಶಪಾಂಡೆ 64, ಲೋಚನ್ ಅಪ್ಪಣ್ಣ 27. ಕೆ.ಗೌತಮ್‌ 22ಕ್ಕೆ 2)

ಫಲಿತಾಂಶ: ಶಿವಮೊಗ್ಗ ಸ್ಟ್ರೈಕರ್ಸ್‌ಗೆ 13 ರನ್ ಜಯ. ಪಂದ್ಯಶ್ರೇಷ್ಠ: ಬಿ.ಆರ್‌.ಶರತ್‌.

ಗುಲ್ಬರ್ಗಾ ಮಿಸ್ಟಿಕ್ಸ್‌: 20 ಓವರ್‌ಗಳಲ್ಲಿ 6ಕ್ಕೆ 192 (ಮನೀಷ್‌ ಪಾಂಡೆ 86, ಕೆ.ಎಲ್‌.ಶ್ರೀಜಿತ್‌ 36. ವೈಶಾಖ್ ವಿಜಯ್‌ ಕುಮಾರ್‌ 28ಕ್ಕೆ 3)
ಮಂಗಳೂರು ಯುನೈಟೆಡ್‌: 19.4 ಓವರ್‌ಗಳಲ್ಲಿ 7ಕ್ಕೆ 195 (ಅಭಿನವ್‌ ಮನೋಹರ್‌ 55, ಅನೀಶ್ವರ್‌ ಗೌತಮ್‌ 30. ಶ್ರೀಶ ಎಸ್‌. ಆಚಾರ್‌ 26ಕ್ಕೆ 3)

ಫಲಿತಾಂಶ: ಮಂಗಳೂರು ಯುನೈ ಟೆಡ್‌ಗೆ 3 ವಿಕೆಟ್‌ ಜಯ. ಪಂದ್ಯಶ್ರೇಷ್ಠ: ಅಭಿನವ್ ಮನೋಹರ್‌.

ಇಂದಿನ ಪಂದ್ಯಗಳು: ಮಂಗಳೂರು ಯುನೈಟೆಡ್‌– ಬೆಂಗಳೂರು ಬ್ಲಾಸ್ಟರ್ಸ್ (ಮಧ್ಯಾಹ್ನ 3ರಿಂದ), ಗುಲ್ಬರ್ಗಾ ಮಿಸ್ಟಿಕ್ಸ್– ಹುಬ್ಬಳ್ಳಿ ಟೈಗರ್ಸ್ (ರಾತ್ರಿ 7ರಿಂದ)

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT