ಮಹಿ ‘ಚುಟುಕು’ ನಿವೃತ್ತಿ ?

7

ಮಹಿ ‘ಚುಟುಕು’ ನಿವೃತ್ತಿ ?

Published:
Updated:

‘ಮಹೇಂದ್ರಸಿಂಗ್ ಧೋನಿ ಅವರು ನನ್ನ ತಂಡದಲ್ಲಿ ಆಡುತ್ತಿದ್ದಿದ್ದರೆ, ಅವರಿಗೆ 80 ವರ್ಷ ವಯಸ್ಸಾದಾಗಲೂ ಕೈಬಿಡುತ್ತಿರಲಿಲ್ಲ. ಏಕೆಂದರೆ, ಅವರಷ್ಟು ನಿರಂತರವಾಗಿ ಉತ್ತಮ ಫಿಟ್‌ನೆಸ್‌ ಉಳಿಸಿಕೊಂಡು ವಿಕೆಟ್‌ಕೀಪಿಂಗ್‌ ಮಾಡುವ ಮತ್ತೊಬ್ಬ ಆಟಗಾರರನನ್ನು ನಾನು ನೋಡಿಲ್ಲ. ಯುವ ಆಟಗಾರರಿಗೆ ಅವರು ಮಾದರಿ’–

ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌ ಅವರ ಮಾತುಗಳಿವು. ಎಬಿಡಿ ಈ ಮಾತುಗಳನ್ನು ಹೇಳಿ ಹೆಚ್ಚು ಕಮ್ಮಿ ಒಂದು ವಾರ ಕಳೆದಿತ್ತು. ಆಗ ಬಂದ ಸುದ್ದಿ ಭಾರತದ ಕ್ರಿಕೆಟ್‌ ಲೋಕದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ವೆಸ್ಟ್‌ ಇಂಡೀಸ್ ಎದುರಿನ ಟ್ವೆಂಟಿ–20 ಕ್ರಿಕೆಟ್ ಸರಣಿಗೆ ಆಯ್ಕೆಯಾದ ಭಾರತ ತಂಡದಿಂದ ಧೋನಿಯವರನ್ನು ಕೈಬಿಡಲಾಗಿತ್ತು. ಅವರನ್ನು ಇದೇ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಚುಟುಕು ಸರಣಿಗೂ ಆಯ್ಕೆ ಮಾಡಿಲ್ಲ. ದೆಹಲಿಯ ಯುವ ವಿಕೆಟ್‌ಕೀಪರ್ ರಿಷಭ್ ಪಂತ್ ಅವಕಾಶ ಪಡೆದುಕೊಂಡಿದ್ದಾರೆ. ಇದರಿಂದಾಗಿ ಧೋನಿ ಟ್ವೆಂಟಿ–20 ಕ್ರಿಕೆಟ್‌ನಿಂದ ನಿವೃತ್ತರಾದಂತೆಯೇ ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿವೆ. ಇದರೊಂದಿಗೆ 2019ರ ಏಕದಿನ ವಿಶ್ವಕಪ್ ಟೂರ್ನಿಯ ನಂತರ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ‘ಗುಡ್ ಬೈ’ ಹೇಳುವುದು ಬಹುತೇಕ ಖಚಿತವಾದಂತಾಗಿದೆ.  ಆದರೆ ಯಥಾಪ್ರಕಾರ ಅಚ್ಚರಿ ಹುಟ್ಟಿಸುವಂತಹ ನಿರ್ಧಾರ ಕೈಗೊಳ್ಳುವ ಮಹಿ ಈ ವಿಷಯದಲ್ಲಿ ಏನು ಮಾಡಲಿದ್ದಾರೆ ಎನ್ನುವುದೂ ಈಗ ಕುತೂಹಲದ ವಿಷಯ.

ನಿವೃತ್ತಿ ಏಕಿಷ್ಟು ಕುತೂಹಲ?

ಜಾರ್ಖಂಡ್‌ನ ರಾಂಚಿಯ ಅಂಗಳದಲ್ಲಿ ಫುಟ್‌ಬಾಲ್ ಆಡಿಕೊಂಡಿದ್ದ ಬಾಲಕನೊಬ್ಬ ಆಕಸ್ಮಿಕವಾಗಿ ಕ್ರಿಕೆಟ್‌ಗೆ ಬಂದು ಭಾರತ ತಂಡದ ನಾಯಕನಾಗಿ ಬೆಳೆದ ಮಹೇಂದ್ರಸಿಂಗ್ ಧೋನಿಯ ರೋಚಕ ಕತೆ ಬೆಳ್ಳಿತೆರೆಯಲ್ಲಿಯೂ ಸೂಪರ್ ಹಿಟ್ ಆಗಿದೆ. ಕ್ರಿಕೆಟ್‌ನ ಮೂರು ಮಾದರಿಗಳು ಮತ್ತು ಐಪಿಎಲ್‌ನಲ್ಲಿ ದೊಡ್ಡ ದಾಖಲೆಗಳನ್ನು ಬರೆದಿರುವ ಧೋನಿ ‘ಆಲ್‌ರೌಂಡ್’ ಸಾಧಕ. ಆದರೆ 2013ರಲ್ಲಿ ಸಚಿನ್ ತೆಂಡೂಲ್ಕರ್  ನಿವೃತ್ತಿಯ ಕೆಲಕಾಲದ ನಂತರ ಧೋನಿ ನಿವೃತ್ತಿಯ ವಿಷಯ ಹೆಚ್ಚು ಸುದ್ದಿಯಾಗುತ್ತಿದೆ.

ಇವತ್ತಿನ ಸ್ಪರ್ಧಾತ್ಮಕ ಕ್ರಿಕೆಟ್‌ನಲ್ಲಿ ಒಬ್ಬ ಆಟಗಾರ ಭಾರತ ತಂಡಕ್ಕೆ ಆಯ್ಕೆಯಾದ ಕೂಡಲೇ ಆತನಿಂದ ರನ್‌ಗಳ ಹೊಳೆ ಅಥವಾ ವಿಕೆಟ್‌ ಗಳಿಕೆಯನ್ನು ನಿರೀಕ್ಷಿಸಲಾಗುತ್ತದೆ. ಪ್ರಮುಖ ಟೂರ್ನಿಗಳಲ್ಲಿ ಪ್ರಶಸ್ತಿ ಗೆಲ್ಲಿಸಿಕೊಡುವಲ್ಲಿ ಆತನ ಯೋಗದಾನವನ್ನು ಲೆಕ್ಕ ಹಾಕಲಾಗುತ್ತದೆ. ಕೋಟ್ಯಂತರ ಕ್ರಿಕೆಟ್ ಆರಾಧಕರು ಇರುವ ಈ ದೇಶದಲ್ಲಿ ಆಟಗಾರ ಸದಾ ಒತ್ತಡದಲ್ಲಿಯೇ ಆಡಬೇಕಾಗುತ್ತದೆ. ಆದರೆ ಅದೇ ಆಟಗಾರ 10–15 ವರ್ಷ ಯಶಸ್ಸಿನ ಉತ್ತುಂಗದಲ್ಲಿದ್ದು, ಕೆಲ ಪಂದ್ಯಗಳಲ್ಲಿ ಸ್ವಲ್ಪ ಎಡವಿದರೂ ಜನರ ಕೆಂಗಣ್ಣಿಗೆ ಗುರಿಯಾಗುತ್ತಾನೆ. ಅದರಲ್ಲೂ ಇಂದಿನ ಡಿಜಿಟಲ್ ಯುಗದಲ್ಲಿ ಅದು ಕಾಡ್ಗಿಚ್ಚಿನಂತೆ ಹಬ್ಬುತ್ತದೆ. ಧೋನಿ ವಿಷಯದಲ್ಲಿ ಇದು ಕಳೆದ ನಾಲ್ಕೈದು ವರ್ಷಗಳಿಂದ ನಡೆಯುತ್ತಲೇ ಇದೆ. ಈ ಹಿಂದೆ ದಿಗ್ಗಜ ಸಚಿನ್ ತೆಂಡೂಲ್ಕರ್ ಕೂಡ ಇದೇ ಪರಿಸ್ಥಿತಿಯನ್ನು ಎದುರಿಸಿದ್ದರು.

2015ರ ಏಕದಿನ ವಿಶ್ವಕಪ್ ಟೂರ್ನಿ, 2016ರ ವಿಶ್ವ ಟ್ವೆಂಟಿ–20 ಟೂರ್ನಿಯ ನಂತರವಂತೂ ಅವರು ನಿವೃತ್ತರಾಗುವ ಕುರಿತ ಚರ್ಚೆಗಳು ಗರಿಗೆದರಿದ್ದವು. ಪಂದ್ಯವೊಂದರ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮ ಪ್ರತಿನಿಧಿಯೊಬ್ಬರು ಧೋನಿಯವರನ್ನೇ ಪರೋಕ್ಷವಾಗಿ ನಿವೃತ್ತಿ ವಿಷಯ ಕೇಳಿದ್ದರು. ಅ ಪ್ರತಿನಿಧಿಯನ್ನು ಕರೆದು ತಮ್ಮ ಪಕ್ಕಕ್ಕೆ ಕೂರಿಸಿಕೊಂಡಿದ್ದ ಧೋನಿ ತಾವೇಕೆ ನಿವೃತ್ತರಾಗಬೇಕು ಎಂದು ಹೇಳಿ ಕೇಳಿದ್ದರು. ಈ ಘಟನೆಯನ್ನು ಅವರು ಬಹಳ ಲಘುಹಾಸ್ಯದ ಮಾದರಿಯಲ್ಲಿ ನಿಭಾಯಿಸಿದ್ದು ಅವರ ‘ಕೂಲ್‌ ಕ್ಯಾಪ್ಟನ್‌’ ಖ್ಯಾತಿಯನ್ನು ಬಿಂಬಿಸಿತ್ತು. ಆದರೆ ಅವರು 2014ರಲ್ಲಿ ಆಸ್ಟ್ರೇಲಿಯಾದಲ್ಲಿ ಸರಣಿ ಮಧ್ಯೆಯೇ ಠೆಸ್ಟ್‌ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಅದನ್ನು ಯಾರೂ ನಿರೀಕ್ಷೆ ಮಾಡಿರಲಿಲ್ಲ. 2017ರಲ್ಲಿ ಏಕದಿನ–ಟ್ವೆಂಟಿ–20 ಕ್ರಿಕೆಟ್‌ ತಂಡದ ನಾಯಕತ್ವಕ್ಕೆ ವಿದಾಯ ಹೇಳಿ ವಿರಾಟ್ ಕೊಹ್ಲಿಗೆ ಪಟ್ಟ ಕಟ್ಟಿದ್ದರು. ಅದು ಕೂಡ ಅನಿರೀಕ್ಷಿತವೇ ಆಗಿತ್ತು. 

ಆದರೆ ಅವರ ವಿಕೆಟ್‌ಕೀಪಿಂಗ್‌ನಲ್ಲಿ ಮಾತ್ರ ಬದಲಾವಣೆಯಾಗಲಿಲ್ಲ. ವಯಸ್ಸು ಮಾಗಿದಂತೆ ಅವರ ಕೀಪಿಂಗ್ ಕೌಶಲಗಳು ಮೊನಚಾಗುತ್ತಿವೆ. ಲೈಟ್ನಿಂಗ್ ಸ್ಪಿಡ್‌ನಲ್ಲಿ ಅವರು ಮಾಡುವ ಸ್ಪಂಪಿಂಗ್‌ ಅನ್ನು ಸರಿಗಟ್ಟಲು ಇವತ್ತು ಬೇರೆ ದೇಶಗಳ ಯುವ ವಿಕೆಟ್‌ಕೀಪರ್‌ಗಳು ಹರಸಾಹಸ ಪಡುತ್ತಿದ್ದಾರೆ. ತಿರುವನಂತಪುರದಲ್ಲಿ ನಡೆದ ವೆಸ್ಟ್‌ ಇಂಡೀಸ್ ಎದುರಿನ ಏಕದಿನ ಪಂದ್ಯದಲ್ಲಿ ಅವರು ತಮ್ಮ ವ್ಯಾಪ್ತಿಯಿಂದ ದೂರ ಇದ್ದ ಕ್ಯಾಚ್‌ ಅನ್ನು ಡೈವ್ ಮಾಡಿ ಪಡೆದ ರೀತಿ ನೋಡುಗರನ್ನು ನಿಬ್ಬೆರಗಾಗಿಸಿತ್ತು.  ಧೋನಿಗೆ 37 ವರ್ಷ ತುಂಬಿದೆಯೇ ಎಂಬ ಅನುಮಾನ ಮೂಡಿದ್ದು ಸಹಜವೇ.

2004ರಿಂದ ವಿಕೆಟ್‌ ಹಿಂದೆ ’ಗೋಡೆ’ಯಂತೆ ಕಾರ್ಯನಿರ್ವಹಿಸುತ್ತಿರುವ ಧೋನಿ ಸದ್ಯ ತಂಡಕ್ಕೆ ಬರುತ್ತಿರುವ ಯುವ  ಆಟಗಾರರಿಗೆ ‘ಹಿರಿಯಣ್ಣ’ನಂತೆ ಮಾರ್ಗದರ್ಶನ ನೀಡುತ್ತಿದ್ದಾರೆ. ಒತ್ತಡ ನಿಭಾಯಿಸುವ ಕಲೆಯನ್ನು ಅವರಿಗಿಂತ ಚೆನ್ನಾಗಿ ಯಾರು ಹೇಳಿಕೊಡಲು ಸಾಧ್ಯ?

‘ಮುಂದಿನ ವಿಶ್ವಕಪ್ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ಯಶಸ್ಸು ಸಾಧಿಸಬೇಕಾದರೆ ಧೋನಿ ತಂಡದಲ್ಲಿರುವುದು ಅವಶ್ಯಕ. ಇಂಗ್ಲೆಂಡ್‌ನಲ್ಲಿ ಆಡುವಾಗ ಧೋನಿಯ ಸಲಹಗಳು ಅತ್ಯಮೂಲ್ಯವಾಗುತ್ತವೆ. ಈ ಕುರಿತು ಆಯ್ಕೆದಾರರು ಎಚ್ಚರ ವಹಿಸಬೇಕು’ ಎಂದು ಹಿರಿಯ ಕ್ರಿಕೆಟಿಗ ಸುನಿಲ್ ಗಾವಸ್ಕರ್ ಹೇಳಿದ್ದಾರೆ.

ಯುಡಿಆರ್‌ಎಸ್ ತೆಗೆದುಕೊಳ್ಳುವಾಗ, ಫೀಲ್ಡ್‌ ಪ್ಲೇಸ್‌ಮೆಂಟ್, ಬೌಲರ್‌ಗಳನ್ನು ನಿಯೋಜಿಸುವ ಕುರಿತು ಧೋನಿ ತಂಡಕ್ಕೆ ನೀಡುತ್ತಿರುವ ಸಲಹೆಗಳು ಕೊಹ್ಲಿ ನಾಯಕತ್ವದ ಯಶಸ್ಸಿಗೆ ಕಾರಣವಾಗುತ್ತಿವೆ ಎನ್ನುವುದು ಸುಳ್ಳೇನಲ್ಲ.

ಆದರೆ ಅವರು ಬ್ಯಾಟಿಂಗ್‌ನಲ್ಲಿ ಮಿಂಚುತ್ತಿಲ್ಲ. ‘ಫಿನಿಷರ್‌’ ಖ್ಯಾತಿಗೆ ತಕ್ಕಂತೆ ಆಡುತ್ತಿಲ್ಲ ಎಂಬ ಟೀಕೆಗಳು ಕೇಳಿಬರುತ್ತಿವೆ. ಈ ಕಾರಣಕ್ಕಾಗಿಯೇ ವಿರಾಟ್ ಮತ್ತು ರೋಹಿತ್ ಶರ್ಮಾ ಅವರು ಧೋನಿಯವರನ್ನು ಕೈಬಿಡಲು ಆಯ್ಕೆದಾರರಿಗೆ ಸಮ್ಮತಿ ಸೂಚಿಸಿದ್ದರು  ಎಂದು ಹೇಳಲಾಗಿತ್ತು. ಆದರೆ ಇದಕ್ಕೆ ಕೊಹ್ಲಿ ಸಮಜಾಯಿಷಿ ನೀಡಿದ್ದಾರೆ. ‘ಧೋನಿ ನಮ್ಮ ತಂಡದ ಅವಿಭಾಜ್ಯ ಅಂಗ. ಟ್ವೆಂಟಿ–20 ತಂಡದಲ್ಲಿ ಆಡುವುದರಿಂದ ಅವರೇ ಹಿಂದೆ ಸರಿದಿದ್ದಾರೆ. ರಿಷಭ್ ಪಂತ್ ಅವರಂತಹ ಯುವ ವಿಕೆಟ್‌ಕೀಪರ್‌ ಬೆಳೆಯಲು ಅವಕಾಶ ನೀಡಬೇಕು ಎಂಬುದು ಅವರ ಆಶಯ. ಇದು ಅವರ ತೀರ್ಮಾನ. ಇದರಲ್ಲಿ ನಮ್ಮ ಪಾತ್ರ ಇಲ್ಲ’ ಎಂದು ಹೇಳಿದ್ದಾರೆ.

ತಂಡವನ್ನು ಮುನ್ನಡೆಸುವ ಸಮರ್ಥರು ಇದ್ದಾರೆ ಎಂದು ತಿಳಿದಾಗ ನಾಯಕತ್ವವನ್ನು ಬಿಟ್ಟುಕೊಟ್ಟ ಧೋನಿ ಈ ಕಾರ್ಯ ಮಾಡಿರುವುದರಲ್ಲಿ ಅನುಮಾನವೇನೂ ಇಲ್ಲ. ಆದರೆ ಭಾರತದ ಆಧುನಿಕ ಕ್ರಿಕೆಟ್‌ನಲ್ಲಿ ’ವಿಜಯಯಾತ್ರೆಯ ಯುಗ’ವನ್ನು ಹುಟ್ಟುಹಾಕಿದ ಖ್ಯಾತಿ ಧೋನಿಯದ್ದು.  ಅವರ ಆಟ ನೋಡುವ ಅವಕಾಶ ಇನ್ನು ಕೆಲವು ದಿನಗಳಷ್ಟೇ ಎನ್ನುವುದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !