ಗುರುವಾರ , ಡಿಸೆಂಬರ್ 2, 2021
20 °C
ಸೂಪರ್ 12ರ ಹಂತದ ಕೊನೆಯ ಪಂದ್ಯ: ಸ್ಕಾಟ್ಲೆಂಡ್ ಎದುರು ಪಾಕಿಸ್ತಾನ ಸವಾಲಿನ ಮೊತ್ತ

DNP ಆಜಂ, ಮಲಿಕ್ ಬ್ಯಾಟಿಂಗ್‌ ವೈಭವ; ಪಾಕಿಸ್ತಾನಕ್ಕೆ ಭರ್ಜರಿ ಜಯ

ಎಎಫ್‌ಪಿ Updated:

ಅಕ್ಷರ ಗಾತ್ರ : | |

Prajavani

ಶಾರ್ಜಾ (ಎಎಫ್‌ಪಿ): ಸೆಮಿಫೈನಲ್‌ನಲ್ಲಿ ಸ್ಥಾನ ಭದ್ರಪಡಿಸಿಕೊಂಡಿರುವ ಪಾಕಿಸ್ತಾನ ಸೂಪರ್ 12ರ ಹಂತದ ತನ್ನ ಕೊನೆಯ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿತು. ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ತಂಡ 72 ರನ್‌ಗಳಿಂದ ಸ್ಕಾಟ್ಲೆಂಡ್‌ಗೆ ಸೋಲುಣಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ನಾಲ್ಕು ವಿಕೆಟ್‌ಗಳಿಗೆ 189 ರನ್ ಗಳಿಸಿತು. ಗುರಿ ಬೆನ್ನತ್ತಿದ ಸ್ಕಾಟ್ಲೆಂಡ್ ಆರು ವಿಕೆಟ್‌ಗಳಿಗೆ 117 ರನ್ ಗಳಿಸಿ ಸೋಲೊಪ್ಪಿಕೊಂಡಿತು. ರಿಚಿ ಬೆರಿಂಗ್ಟನ್ (54; 37 ಎಸೆತ, 4 ಬೌಂಡರಿ, 1 ಸಿಕ್ಸರ್‌) ಒಬ್ಬರೇ ದಿಟ್ಟ ಆಟವಾಡಿದರು. ಈ ಗೆಲುವಿನೊಂದಿಗೆ ಪಾಕಿಸ್ತಾನ ಈ ಬಾರಿ ಟೂರ್ನಿಯ ಸೂಪರ್ 12 ಹಂತದ ಎಲ್ಲ ಪಂದ್ಯಗಳನ್ನು ಗೆದ್ದ ಮೊದಲ ತಂಡ ಎನಿಸಿಕೊಂಡಿತು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ತಂಡದ ಆರಂಭಿಕ ಬ್ಯಾಟರ್ ಮೊಹಮ್ಮದ್ ರಿಜ್ವಾನ್ ಬೇಗನೇ ಮರಳಿದರು. ತಂಡದ ಮೊತ್ತ 35 ರನ್ ಆಗಿದ್ದಾಗ ಹಂಜ ತಾಹಿರ್ ಎಸೆತದಲ್ಲಿ ರಿಜ್ವಾನ್ ಔಟಾದರು. ಫಕ್ರ್ ಜಮಾನ್ ಅವರಿಗೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಆಗಲಿಲ್ಲ.

ಈ ಸಂದರ್ಭದಲ್ಲಿ ಇನಿಂಗ್ಸ್‌ ಮುನ್ನಡೆಸುವ ಹೊಣೆ ಹೊತ್ತ ನಾಯಕ ಬಾಬರ್ ಆಜಂ (66; 47 ಎಸೆತ, 5 ಬೌಂಡರಿ, 3 ಸಿಕ್ಸರ್‌) ಅವರು ಮೊಹಮ್ಮದ್ ಹಫೀಜ್ ಜೊತೆಗೂಡಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಮೂರನೇ ವಿಕೆಟ್‌ಗೆ ಅವರಿಬ್ಬರು 53 ರನ್‌ಗಳನ್ನು ಸೇರಿಸಿದರು.

ಹಫೀಜ್ ಔಟಾದ ನಂತರ ನಾಯಕನ ಜೊತೆಗೂಡಿದ ಶೋಯೆಬ್ ಮಲಿಕ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 18 ಎಸೆತಗಳಲ್ಲಿ 54 ರನ್ ಗಳಿಸಿದ ಅವರ ಇನಿಂಗ್ಸ್‌ನಲ್ಲಿ ಆರು ಸಿಕ್ಸರ್‌ಗಳಿದ್ದವು. ಬೌಲರ್‌ಗಳನ್ನು ಸತತವಾಗಿ ಕಾಡಿದರು. ಸ್ಟ್ಯಾಂಡ್‌ನಲ್ಲಿದ್ದ ಪತ್ನಿ ಸಾನಿಯಾ ಮಿರ್ಜಾ ಸಂಭ್ರಮಿಸಿದರು.

ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ: 20 ಓವರ್‌ಗಳಲ್ಲಿ 4ಕ್ಕೆ 189 (ಮೊಹಮ್ಮದ್ ರಿಜ್ವಾನ್ 15, ಬಾಬರ್ ಆಜಂ 66, ಫಕ್ರ್ ಜಮಾನ್ 8, ಮೊಹಮ್ಮದ್ ಹಫೀಜ್ 31, ಶೋಯೆಬ್ ಮಲಿಕ್ ಔಟಾಗದೆ 54, ಆಸಿಫ್ ಅಲಿ ಔಟಾಗದೆ 5; ಹಂಜ ತಾಹಿರ್ 24ಕ್ಕೆ1, ಶಫಿಯಾನ್ ಷರೀಫ್ 41ಕ್ಕೆ1, ಕ್ರಿಸ್ ಗ್ರೀವ್ಸ್‌ 43ಕ್ಕೆ2); ಸ್ಕಾಟ್ಲೆಂಡ್‌: 20 ಓವರ್‌ಗಳಲ್ಲಿ 6ಕ್ಕೆ 117 (ಜಾರ್ಜ್ ಮುನ್ಸಿ 17, ರಿಚಿ ಬೆರಿಂಗ್ಟನ್‌ 54, ಮೈಕೆಲ್ ಲೀಸ್ಕ್ 14; ಶಹೀನ್ ಶಾ ಅಫ್ರಿದಿ 24ಕ್ಕೆ1, ಹ್ಯಾರಿಸ್ ರವೂಫ್‌ 27ಕ್ಕೆ1, ಹಸನ್ ಅಲಿ 33ಕ್ಕೆ1, ಶಾದಬ್ ಖಾನ್ 34ಕ್ಕೆ2). ಫಲಿತಾಂಶ: ಪಾಕಿಸ್ತಾನಕ್ಕೆ 72 ರನ್‌ಗಳ ಜಯ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.