ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ: ರೈಲ್ವೇಸ್ ಹಳಿ ಮೇಲೆ ಕರ್ನಾಟಕದ ರನ್ ಮಳೆ

ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ: 10 ಸಿಕ್ಸರ್ ಸಿಡಿಸಿ ಮೂರಂಕಿ ದಾಟಿದ ಮನೀಷ್‌; ಸಿದ್ಧಾರ್ಥ್‌ ಶತಕ
Last Updated 17 ಫೆಬ್ರುವರಿ 2022, 14:43 IST
ಅಕ್ಷರ ಗಾತ್ರ

ಚೆನ್ನೈ: ಆರಂಭಿಕ ಬ್ಯಾಟರ್‌ಗಳು ವೈಫಲ್ಯ ಕಂಡರೂ ನಾಯಕ ಮನೀಷ್ ಪಾಂಡೆ ಮತ್ತು ಮಧ್ಯಮ ಕ್ರಮಾಂಕದ ಕೆ.ವಿ.ಸಿದ್ಧಾರ್ಥ್ ಅವರು ಕರ್ನಾಟಕ ತಂಡದ ಕೈ ಹಿಡಿದರು.

ಇಲ್ಲಿನ ಗುರುನಾನಕ್ ಕಾಲೇಜು ಮೈದಾನದಲ್ಲಿ ಆರಂಭಗೊಂಡ ರಣಜಿ ಟೂರ್ನಿಯ ಎಲೀಟ್ ’ಸಿ‘ ಗುಂಪಿನ ಪಂದ್ಯದಲ್ಲಿ ಸಿದ್ಧಾರ್ಥ್ (140; 221 ಎಸೆತ, 17 ಬೌಂಡರಿ, 2 ಸಿಕ್ಸರ್‌) ಮತ್ತುಮನೀಷ್ (156; 121 ಎ, 12 ಬೌಂ, 10 ಸಿ) 267 ರನ್‌ಗಳ ಜೊತೆಯಾಟವಾಡಿ ರೈಲ್ವೇಸ್ ಬೌಲರ್‌ಗಳನ್ನು ಕಾಡಿದರು.

ಇವರಿಬ್ಬರ ಅಬ್ಬರದ ಬ್ಯಾಟಿಂಗ್ ಪರಿಣಾಮ ಮೊದಲ ದಿನದಾಟದ ಮುಕ್ತಾಯಕ್ಕೆ ಕರ್ನಾಟಕ 90 ಓವರ್‌ಗಳಲ್ಲಿ 5ಕ್ಕೆ 392 ರನ್ ಕಲೆ ಹಾಕಿದೆ.

ಟಾಸ್ ಗೆದ್ದ ರೈಲ್ವೇಸ್ ತಂಡ ಕರ್ನಾಟಕವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತು. 12ನೇ ಓವರ್‌ನಲ್ಲಿ ಮಯಂಕ್ ಅಗರವಾಲ್ ರನೌಟ್‌ ಆಗಿ ಮರಳಿದರು. 20ನೇ ಓವರ್‌ನಲ್ಲಿ ದೇವದತ್ತ ಪಡಿಕ್ಕಲ್ ಅವರು ಯುವರಾಜ್ ಸಿಂಗ್‌ ಎಸೆತದಲ್ಲಿ ಔಟಾದರು. ಮೂರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಆರ್‌.ಸಮರ್ಥ್ ಅರ್ಧಶತಕದ ಅಂಚಿನಲ್ಲಿ ಎಡವಿದರು.

ಈ ಸಂದರ್ಭದಲ್ಲಿ ಜೊತೆಗೂಡಿದ ಸಿದ್ಧಾರ್ಥ್‌ ಮತ್ತು ಮನೀಷ್‌ ಜೋಡಿ ಮನಮೋಹಕ ಆಟವಾಡಿದರು. ಬೌಲರ್‌ಗಳನ್ನು ಲೀಲಾಜಾಲವಾಗಿ ಎದುರಿಸಿದ ಇವರಿಬ್ಬರು ರನ್‌ಗಳ ಹೊಳೆ ಹರಿಸಿದರು. ದಿನದಾಟದ ಮುಕ್ತಾಯಕ್ಕೆ ಆರು ಓವರ್ ಬಾಕಿ ಇರುವ ವರೆಗೂ ಇವರ ಜೊತೆಯಾಟ ಮುಂದುವರಿಯಿತು.

10 ಸಿಕ್ಸರ್ ಮತ್ತು 12 ಬೌಂಡರಿ ಸಿಡಿಸಿದ ಮನೀಷ್‌ ಟ್ವೆಂಟಿ20 ಮಾದರಿಯಲ್ಲಿ ಬ್ಯಾಟ್ ಬೀಸಿ ಕೇವಲ 121 ಎಸೆತಗಳಲ್ಲಿ 156 ರನ್ ಸಿಡಿಸಿದರು. ಅವರ ವಿಕೆಟ್ ಪಡೆದ ಶಿವಂ ಚೌಧರಿ ಸಂಜೆ ವೇಳೆ ರೈಲ್ವೇಸ್ ಪಾಳಯದಲ್ಲಿ ಕೊಂಚ ಸಮಾಧಾನ ಮೂಡಿಸಿದರು. ಆದರೆ ಅಷ್ಟರಲ್ಲಿ ಕರ್ನಾಟಕದ ಸ್ಕೋರ್‌ ಬೋರ್ಡ್‌ನಲ್ಲಿ ಧಾರಾಳ ರನ್ ಸೇರಿತ್ತು.

ಎಸ್‌.ಶರತ್ ವಿಕೆಟ್ ಪಡೆದು ಚೌಧರಿ ಮತ್ತೊಂದು ಪೆಟ್ಟು ನೀಡಿದರು. ಆದರೆ ಶ್ರೇಯಸ್ ಗೋಪಾಲ್ 17 ಎಸೆತ ಎದುರಿಸಿ ವಿಕೆಟ್ ಉರುಳದಂತೆ ನೋಡಿಕೊಂಡರು.

ಯಶ್ ಧೂಳ್ ಶತಕದ ವೈಭವ

ಈ ತಿಂಗಳ ಮೊದಲ ವಾರದಲ್ಲಿ ಮುಕ್ತಾಯಗೊಂಡ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡಕ್ಕೆ ಪ್ರಶಸ್ತಿ ಗೆದ್ದುಕೊಟ್ಟ ಯಶ್ ಧೂಳ್ ರಣಜಿ ಟೂರ್ನಿಯ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿ ಮಿಂಚಿದರು.

ಗುವಾಹಟಿಯಲ್ಲಿ ನಡೆಯುತ್ತಿರುವ ತಮಿಳುನಾಡು ಎದುರಿನ ಎಲೀಟ್ ‘ಎಚ್‌’ ಗುಂಪಿನ ಪಂದ್ಯದಲ್ಲಿ ದೆಹಲಿ ತಂಡದ ಪರ ಆರಂಭಿಕ ಬ್ಯಾಟರ್ ಆಗಿ ಕಣಕ್ಕೆ ಇಳಿದ ಯಶ್‌113 ರನ್ ಗಳಿಸಿ ಔಟಾದರು. 150 ಎಸೆತ ಎದುರಿಸಿದ ಅವರು 18 ಬೌಂಡರಿ ಗಳಿಸಿದ್ದರು. ಜಾಂಟಿ ಸಿಧು (71; 179 ಎ, 8 ಬೌಂ, 2 ಸಿ) ಅರ್ಧಶತಕ ಗಳಿಸಿದರು.

ದಿನದಾಟದ ಮುಕ್ತಾಯಕ್ಕೆ ದೆಹಲಿ 90 ಓವರ್‌ಗಳಲ್ಲಿ 7ಕ್ಕೆ 291 ರನ್ ಗಳಿಸಿದೆ. 45 ರನ್ ಗಳಿಸಿದ ಲಲಿತ್ ಯಾದವ್ ಮತ್ತು 16 ರನ್‌ಗಳೊಂದಿಗೆ ಸಮರ್‌ಜೀತ್ ಸಿಂಗ್ ಕಣದಲ್ಲಿದ್ದಾರೆ.

ಸ್ಕೋರ್ ಕಾರ್ಡ್‌

ಕರ್ನಾಟಕ 5ಕ್ಕೆ 392 (90 ಓವರ್‌)

ಮಯಂಕ್ ರನೌಟ್ (ದೇವ್‌ಧರ್‌) 16 (38 ಎ, 4x3), ದೇವದತ್ತ ಸಿ ಯಾದವ್‌ ಬಿ ಯುವರಾಜ್‌ 21 (56 ಎ, 4x3), ಸಮರ್ಥ್‌ ಸಿ ಚೌಧರಿ ಬಿ ಅವಿನಾಶ್‌ 47 (79 ಎ, 4x8), ಸಿದ್ಧಾರ್ಥ್‌ ಬ್ಯಾಟಿಂಗ್‌ 140 (221 ಎ, 4x17, 6x2), ಮನೀಷ್‌ ಸಿ ಯುವರಾಜ್ ಬಿ ಚೌಧರಿ 156 (121 ಎ, 4x12, 6x10), ಶರತ್‌ ಸ್ಟಂಪ್ಡ್‌ ಯಾದವ್ ಬಿ ಚೌಧರಿ 5 (9 ಎ 4x1), ಶ್ರೇಯಸ್ ಬ್ಯಾಟಿಂಗ್ 1 (17 ಎ)

ಇತರೆ (ಲೆಗ್‌ಬೈ 4, ನೋಬಾಲ್ 1, ವೈಡ್ 1) 6

ವಿಕೆಟ್ ಪತನ

1-27 (ಮಯಂಕ್ ಅಗರವಾಲ್‌, 11.4), 2-50 (ದೇವದತ್ತ ಪಡಿಕ್ಕಲ್, 19.1), 3-110 (ಆರ್. ಸಮರ್ಥ್, 36.2‌), 4-377 (ಮನೀಷ್ ಪಾಂಡೆ, 83.2), 5-384 (ಶ್ರೀನಿವಾಸ್ ಶರತ್‌, 85.1)

ಬೌಲಿಂಗ್‌

ಅಮಿತ್ ಮಿಶ್ರಾ 19–4–74–0, ಹಿಮಾಂಶು ಸಾಂಗ್ವಾನ್ 2.1–0–7–0, ಯುವರಾಜ್ ಸಿಂಗ್ 18–4–52–1, ಅವಿನಾಶ್ ಯಾದವ್25.5–2–132–1, ಕರ್ಣ ಶರ್ಮಾ14–1–75–0, ಶಿವಂ ಚೌಧರಿ6.5–1–22–2, ಮೊಹಮ್ಮದ್ ಸೈಫ್‌4.1–0–26–0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT