ಶುಕ್ರವಾರ, ನವೆಂಬರ್ 22, 2019
20 °C
ಕ್ರಿಕೆಟ್‌ ‘ಟೆಸ್ಟ್‌’: ದಕ್ಷಿಣ ಆಫ್ರಿಕಾ ‘ಎ’ ಮರುಹೋರಾಟ

ಮರ್ಕರಮ್‌, ಮುಲ್ಡೆರ್‌ ಶತಕ ಸಂಭ್ರಮ

Published:
Updated:
Prajavani

ಮೈಸೂರು: ಏಡನ್ ಮರ್ಕರಮ್‌ ಮತ್ತು ವಿಯಾನ್‌ ಮುಲ್ಡೆರ್‌ ಗಳಿಸಿದ ಶತಕ‌ಗಳ ನೆರವಿನಿಂದ ದಕ್ಷಿಣ ಆಫ್ರಿಕಾ ‘ಎ’ ತಂಡ ನಾಲ್ಕು ದಿನಗಳ ಕ್ರಿಕೆಟ್‌ ‘ಟೆಸ್ಟ್‌’ನಲ್ಲಿ ಭಾರತ ‘ಎ’ ತಂಡಕ್ಕೆ ದಿಟ್ಟ ಉತ್ತರ ನೀಡಿದೆ.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನದಾಟದಲ್ಲಿ ಮರ್ಕರಮ್ (161, 252 ಎಸೆತ, 20 ಬೌಂ, 2 ಸಿ.) ಮತ್ತು ಮುಲ್ಡೆರ್‌ (ಅಜೇಯ 131, 230 ಎಸೆತ, 17 ಬೌಂ, 1 ಸಿ) ಅವರು ಮಿಂಚಿದರು. ಇವರಿಬ್ಬರ ಆಟದಿಂದಾಗಿ  ಪ್ರವಾಸಿ ತಂಡ ಮೊದಲ ಇನಿಂಗ್ಸ್‌ನಲ್ಲಿ 400 ರನ್‌ ಪೇರಿಸಿತು.

ಮೊದಲ ಇನಿಂಗ್ಸ್‌ನಲ್ಲಿ 417 ರನ್‌ ಗಳಿಸಿದ್ದ ಭಾರತ ‘ಎ’ ತಂಡ ಗುರುವಾರದ ದಿನದಾಟದ ಅಂತ್ಯಕ್ಕೆ ಎರಡನೇ ಇನಿಂಗ್ಸ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೇ 14 ರನ್‌ ಗಳಿಸಿದೆ. ವೃದ್ಧಿಮಾನ್‌ ಸಹಾ ಬಳಗ ಒಟ್ಟಾರೆ 31 ರನ್‌ಗಳ ಮುನ್ನಡೆಯಲ್ಲಿದೆ. ಶುಕ್ರವಾರ ಅಂತಿಮ ದಿನವಾಗಿದ್ದು, ಪಂದ್ಯ ಡ್ರಾ ಆಗುವ ಸಾಧ್ಯತೆಯೇ ಅಧಿಕ.

ಭರ್ಜರಿ ಜತೆಯಾಟ: ಐದು ವಿಕೆಟ್‌ ನಷ್ಟಕ್ಕೆ 159 ರನ್‌ಗಳಿಂದ ಆಟ ಮುಂದುವರಿಸಿದ ದಕ್ಷಿಣ ಆಫ್ರಿಕಾ ‘ಎ’ ತಂಡವನ್ನು ಬೇಗನೇ ಕಟ್ಟಿಹಾಕಬಹುದು ಎಂದು ಭಾರತ ‘ಎ’ ತಂಡ ಲೆಕ್ಕಾಚಾರ ಹಾಕಿತ್ತು. ಆದರೆ ಅನುಭವಿ ಮರ್ಕರಮ್‌ ಮತ್ತು ಮುಲ್ಡೆರ್‌ ಆತಿಥೇಯ ಬೌಲರ್‌ಗಳ ಯೋಜನೆ ಬುಡಮೇಲುಗೊಳಿಸಿದರು. ಈ ಜೋಡಿ ಆರನೇ ವಿಕೆಟ್‌ಗೆ 155 ರನ್‌ ಸೇರಿಸಿತು.

ಅ.2 ರಿಂದ ಆರಂಭವಾಗಲಿರುವ ಭಾರತ ವಿರುದ್ಧದ ಟೆಸ್ಟ್ ಸರಣಿಗೆ ದಕ್ಷಿಣ ಆಫ್ರಿಕಾ ತಂಡದಲ್ಲಿ ಸ್ಥಾನ ಪಡೆದಿರುವ ಮರ್ಕರಮ್‌ ಆಕ್ರಮಣ ಮತ್ತು ರಕ್ಷಣೆಯನ್ನು ಮೈಗೂಡಿಸಿಕೊಂಡು ಆಡಿದರು. 83 ರನ್‌ಗಳೊಂದಿಗೆ ಆಟ ಮುಂದುವರಿಸಿದ ಅವರು ಮೊಹಮ್ಮದ್‌ ಸಿರಾಜ್‌ ಬೌಲ್‌ ಮಾಡಿದ 10ನೇ ಓವರ್‌ನಲ್ಲಿ ಕವರ್‌ ಡ್ರೈವ್‌ ಬೌಂಡರಿ ಮೂಲಕ ಶತಕ ಪೂರೈಸಿದರು. ಭೋಜನ ವಿರಾಮದ ಬಳಿಕ ಸಿರಾಜ್‌ ಅವರು ಮರ್ಕರಮ್‌ ವಿಕೆಟ್‌ ಪಡೆದರು.

ಆಲ್‌ರೌಂಡರ್‌ ಮುಲ್ಡೆರ್‌ ಕೂಡಾ ಆತಿಥೇಯ ಬೌಲರ್‌ಗಳನ್ನು ಸತಾಯಿಸಿ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ನಾಲ್ಕನೇ ಶತಕ ಪೂರೈಸಿದರು. ಅವರು ವೆರ್ನಾನ್‌ ಫಿಲಾಂಡರ್‌ (21) ಜತೆ ಏಳನೇ ವಿಕೆಟ್‌ಗೆ 59 ಹಾಗೂ ಡೇನ್‌ ಪಿಯೆಟ್ (11) ಜತೆ ಎಂಟನೇ ವಿಕೆಟ್‌ಗೆ 39 ರನ್‌ ಸೇರಿಸಿದರು. ಭಾರತ ‘ಎ’ ತಂಡದ ಪರ ನಾಲ್ಕು ವಿಕೆಟ್‌ ಪಡೆದ ಕುಲದೀಪ್‌ ಯಾದವ್‌ ಯಶಸ್ವಿ ಬೌಲರ್‌ ಎನಿಸಿಕೊಂಡರು.

ಸಂಕ್ಷಿಪ್ತ ಸ್ಕೋರ್: ಭಾರತ ‘ಎ’: 1ನೇ ಇನಿಂಗ್ಸ್ 417 ಮತ್ತು 2ನೇ ಇನಿಂಗ್ಸ್: 6 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 14 (ಪ್ರಿಯಾಂಕ್‌ ಪಾಂಚಾಲ್‌ ಬ್ಯಾಟಿಂಗ್‌ 9, ಅಭಿಮನ್ಯು ಈಶ್ವರನ್‌ ಬ್ಯಾಟಿಂಗ್ 5)

ದಕ್ಷಿಣ ಆಫ್ರಿಕಾ ‘ಎ’ ಮೊದಲ ಇನಿಂಗ್ಸ್ 109.3 ಓವರ್‌ಗಳಲ್ಲಿ 400 (ಏಡನ್‌ ಮರ್ಕರಮ್ 161, ವಿಯಾನ್‌ ಮುಲ್ಡೆರ್ ಔಟಾಗದೆ 131, ವೆರ್ನಾನ್‌ ಫಿಲಾಂಡರ್ 21; ಮೊಹಮ್ಮದ್‌ ಸಿರಾಜ್‌ 72ಕ್ಕೆ 2, ಕುಲದೀಪ್‌ ಯಾದವ್ 121ಕ್ಕೆ 4, ಶಹಬಾಜ್‌ ನದೀಮ್ 76ಕ್ಕೆ 3)

ಪ್ರತಿಕ್ರಿಯಿಸಿ (+)