ಮುಂಬೈ ಇಂಡಿಯನ್ಸ್‌ಗೆ ‘ಸೂಪರ್’ ಜಯ

ಶುಕ್ರವಾರ, ಮೇ 24, 2019
23 °C
ಆತಿಥೇಯ ತಂಡದ ಎಡಗೈ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್, ಸನ್‌ರೈಸರ್ಸ್‌ನ ಮನೀಷ್ ಪಾಂಡೆ ಮೋಹಕ ಅರ್ಧಶತಕ

ಮುಂಬೈ ಇಂಡಿಯನ್ಸ್‌ಗೆ ‘ಸೂಪರ್’ ಜಯ

Published:
Updated:

ಮುಂಬೈ: ರೋಚಕ ಹಣಾಹಣಿಯಲ್ಲಿ ಕನ್ನಡಿಗ ಮನೀಷ್ ಪಾಂಡೆ (ಅಜೇಯ 71; 47 ಎಸೆತ, 2 ಸಿಕ್ಸರ್, 8 ಬೌಂಡರಿ) ಗಳಿಸಿದ ಅರ್ಧ ಶತಕ ವ್ಯರ್ಥವಾಯಿತು. ಸೂಪರ್ ಓವರ್‌ನಲ್ಲಿ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಪಾಯಿಂಟ್ ಪಟ್ಟಿಯ ಎರಡನೇ ಸ್ಥಾನಕ್ಕೇರಿತು.

ಗುರುವಾರ ರಾತ್ರಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆತಿಥೇಯರು ನೀಡಿದ 162 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ತಂಡ ಕೊನೆಯ ವರೆಗೂ ಛಲ ಬಿಡದೆ ಕಾದಾಡಿತು. ಮೂರನೇ ಕ್ರಮಾಂಕದ‌ಲ್ಲಿ ಕ್ರೀಸ್‌ಗೆ ಇಳಿದ ಮನೀಷ್ ಪಾಂಡೆ ಕೆಚ್ಚೆದೆಯ ಬ್ಯಾಟಿಂಗ್ ಮಾಡಿದರು. ಅಂತಿಮ ಎಸೆತದಲ್ಲಿ ಗೆಲುವಿಗೆ ಏಳು ರನ್‌ ಬೇಕಾಗಿದ್ದಾಗ ಸಿಕ್ಸರ್ ಸಿಡಿಸಿ ಪಂದ್ಯವನ್ನು ರೋಚಕವಾಗಿಸಿದರು.

ಆದರೆ ಸೂಪರ್ ಓವರ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್‌ಗೆ ಎಂಟು ರನ್‌ ಗಳಿಸಲು ಮಾತ್ರ ಸಾಧ್ಯವಾಯಿತು. ಈ ಗುರಿಯನ್ನು ರೋಹಿತ್ ಶರ್ಮಾ ಬಳಗ ಮೂರೇ ಓವರ್‌ಗಳಲ್ಲಿ ದಾಟಿತು.

ಖಲೀಲ್‌ ಅಹಮದ್ ಮಿಂಚು: ಸನ್‌ರೈಸರ್ಸ್‌ ಹೈದರಾಬಾದ್ ತಂಡದ ಮಧ್ಯಮವೇಗಿ ಖಲೀಲ್ (42ಕ್ಕೆ3) ಅವರ ಬೌಲಿಂಗ್‌ಗೆ  ಆತಿಥೇಯ ಮುಂಬೈ ತಂಡದ ಬ್ಯಾಟ್ಸ್‌ ಮನ್‌ಗಳು ಮಂಕಾದರು. ಆದರೆ ಕ್ವಿಂಟನ್ ಡಿಕಾಕ್ (ಔಟಾಗದೆ 69; 58ಎಸೆತ, 6ಬೌಂಡರಿ, 2ಸಿಕ್ಸರ್) ಅವರ ತಾಳ್ಮೆಯ ಆಟದಿಂದ ಮುಂಬೈ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 162 ರನ್‌ ಗಳಿಸಿತು.

ಟಾಸ್ ಗೆದ್ದ ಮುಂಬೈ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.  ರೋಹಿತ್ ಶರ್ಮಾ (24 ರನ್) ಮತ್ತು ಕ್ವಿಂಟನ್ ಅವರು ಉತ್ತಮ ಆರಂಭ ನೀಡಿದರು. ಆರನೇ ಓವರ್‌ನಲ್ಲಿ ಖಲೀಲ್ ಎಸೆತದಲ್ಲಿ ರೋಹಿತ್ ಔಟಾದರು.

ನಂತರ ಸೂರ್ಯಕುಮಾರ್ ಯಾದವ್ (23 ರನ್) ಮತ್ತು 20ನೇ ಓವರ್‌ನಲ್ಲಿ ಕೀರನ್ ಪೊಲಾರ್ಡ್ ಅವರಿಗೂ ಡಗ್‌ಔಟ್ ದಾರಿ ತೋರಿದ ಖಲೀಲ್ ಮಿಂಚಿದರು.

ಸ್ಫೋಟಕ ಬ್ಯಾಟ್ಸ್‌ಮನ್ ಹಾರ್ದಿಕ್ ಪಾಂಡ್ಯ  ಹತ್ತು ಎಸೆತಗಳಲ್ಲಿ 18 ರನ್‌ ಹೊಡೆದರು. ಆದರೆ ಅವರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲದಂತೆ ಭುವನೇಶ್ವರ್ ಕುಮಾರ್ ನೋಡಿಕೊಂಡರು.

16ನೇ ಓವರ್‌ನಲ್ಲಿ ಮೊಹಮ್ಮದ್ ನಬಿಗೆ ಕ್ಯಾಚ್ ಕೊಟ್ಟರು. ಆದರೆ ಇನ್ನೊಂದು ಬದಿಯಲ್ಲಿ ಕ್ವಿಂಟನ್ ಮಾತ್ರ ಗಟ್ಟಿಯಾಗಿ ಆಡುತ್ತಿದ್ದರು.

ಅವಕಾಶ ಸಿಕ್ಕಾಗ ಬೌಂಡರಿ ಗಳಿಸಿದರು. ರನ್‌ ಗಳಿಕೆಯ ವೇಗ ಹೆಚ್ಚಿಸುವ ಪ್ರಯತ್ನ ಮಾಡಿದರು. ಅದರಿಂದಾಗಿ ತಂಡದ ಮೊತ್ತ ಬೆಳೆಯಿತು.

ಮೊಹಮ್ಮದ್ ನಬಿ ಕೂಡ ಒಂದು ವಿಕೆಟ್ ಗಳಿಸಿದರು. ರಶೀದ್ ಖಾನ್ ವಿಕೆಟ್‌ ಗಳಿಸುವಲ್ಲಿ ಅವರು ಸಫಲರಾಗಲಿಲ್ಲ. ಆದರೆ, ಕಡಿಮೆ ರನ್ ಕೊಟ್ಟು ಬ್ಯಾಟ್ಸ್‌ಮನ್‌ಗಳನ್ನು ನಿಯಂತ್ರಿಸಿದರು.

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !