ಶುಕ್ರವಾರ, ಮೇ 7, 2021
26 °C

IPL 2021- RCB VS SRH| ಪಂದ್ಯ ಗೆಲ್ಲಿಸಿದ ಮ್ಯಾಕ್ಸ್‌ವೆಲ್‌ಗೆ ಕೋಚ್‌ ಮೆಚ್ಚುಗೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಚೆನ್ನೈ: ರಾಯಲ್ ಚಾಲೆಂಜರ್ಸ್ ತಂಡವು ಬುಧವಾರ ಐಪಿಎಲ್‌ ಪಂದ್ಯದಲ್ಲಿ ಜಯಿಸಲು ಪ್ರಮುಖ ಪಾತ್ರ ವಹಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ ಅವರನ್ನು ತಂಡದ ಮುಖ್ಯ ಕೋಚ್ ಸೈಮನ್ ಕ್ಯಾಟಿಚ್ ಶ್ಲಾಘಿಸಿದ್ದಾರೆ.

‘ಅವರ ಆಟದಲ್ಲಿ ಪ್ರಬುದ್ಧತೆ ಇದೆ. ಸನ್‌ರೈಸರ್ಸ್‌ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಅವರ ಆಟವು ಅಮೋಘವಾಗಿತ್ತು. ಪರಿಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಆಡಿದರು. ತಮ್ಮ ಅನುಭವವನ್ನು ಚೆನ್ನಾಗಿ ಬಳಸಿಕೊಂಡ ಅವರು ಇನಿಂಗ್ಸ್‌ನ ಕೊನೆಯಲ್ಲಿ ಚುರುಕಾಗಿ ರನ್‌ ಗಳಿಸಿದರು‘ ಎಂದು ಕ್ಯಾಟಿಚ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸನ್‌ರೈಸರ್ಸ್‌ ವಿರುದ್ಧದ ಪಂದ್ಯದಲ್ಲಿ ಮ್ಯಾಕ್ಸ್‌ವೆಲ್ ಅರ್ಧಶತಕ ಹೊಡೆದಿದ್ದರು. ಹೋದ ವರ್ಷ ಪಂಜಾಬ್ ಕಿಂಗ್ಸ್‌ ತಂಡದಲ್ಲಿದ್ದ ಅವರು ಲಯ ಕಂಡುಕೊಳ್ಳಲು ಪರದಾಡಿದ್ದರು.  ಆದ್ದರಿಂದಾಗಿ ಬಹಳಷ್ಟು ಟೀಕೆಗಳಿಗೂ ಒಳಗಾಗಿದ್ದರು. ಅವರನ್ನು ತಂಡವು  ಕೈಬಿಟ್ಟಿತ್ತು. ಆದರೆ, ಹೋದ ಹರಾಜು ಪ್ರಕ್ರಿಯೆಯಲ್ಲಿ ಆರ್‌ಸಿಬಿಯು ಅವರನ್ನು ₹ 14.25 ಕೋಟಿಗೆ ಖರೀದಿಸಿತ್ತು.

‘ಗ್ಲೆನ್ ಸೇರ್ಪಡೆಯಿಂದಾಗಿ ತಂಡದ ಬಲ ಹೆಚ್ಚಾಗಿದೆ. ಅವರು  ಫೀಲ್ಡಿಂಗ್ ಸಂಯೋಜನೆಯಲ್ಲಿಯೂ ವಿರಾಟ್‌ಗೆ ನೆರವಾಗುತ್ತಿದ್ದಾರೆ. ತಂಡದಲ್ಲಿರುವ ಯುವ ಆಟಗಾರರಿಗೆ ಕೌಶಲಗಳನ್ನು ಹೇಳಿಕೊಡುತ್ತ ಮಾರ್ಗದರ್ಶಕರಂತೆ ಕೆಲಸ ಮಾಡುತ್ತಿದ್ದಾರೆ. ಇದು ತಂಡದಲ್ಲಿ ಒಂದು ರೀತಿಯ ಉಲ್ಲಾಸವನ್ನು ಮೂಡಿಸಿದೆ‘ ಎಂದು ಹೇಳಿದರು.

‘ಟೂರ್ನಿಯ ಎರಡೂ ಪಂದ್ಯಗಳಲ್ಲಿ  ಪರಿಸ್ಥಿತಿ ಏನೇ ಇದ್ದರೂ ಗೆಲುವಿನ ಛಲದಿಂದ ಆಡಿದ್ದು ಫಲ ನೀಡಿದೆ. ಫಲಿತಾಂಶ ಏನೇ ಇರಲಿ. ಆಟಗಾರರ ಮನೋಭಾವ ಮತ್ತು ದಿಟ್ಟ ಆಟ ಮುಖ್ಯವಾಗುತ್ತದೆ. ಒಂದು ತಂಡವಾಗಿ ಆಡುತ್ತಿರುವುದು ದೊಡ್ಡ ಭರವಸೆ ಮೂಡಿಸಿದೆ‘ ಎಂದು ಕ್ಯಾಟಿಚ್ ಹೇಳಿದರು.

ಆರ್‌ಸಿಬಿಯು ಸತತ ಎರಡೂ ಪಂದ್ಯಗಳನ್ನು ಗೆದ್ದಿದೆ. ಬುಧವಾರದ ಪಂದ್ಯದಲ್ಲಿ ತಂಡವು 6 ರನ್‌ಗಳಿಂದ ಜಯಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು