ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿದ ಮಯಂಕ್

Last Updated 30 ಡಿಸೆಂಬರ್ 2018, 19:45 IST
ಅಕ್ಷರ ಗಾತ್ರ

ಬೆಂಗಳೂರಿನ ಶ್ರೀಮಂತ ಉದ್ಯಮಿ ಅಗರವಾಲ್ ಅವರ ಮನೆಯಲ್ಲಿ ಎಲ್ಲವೂ ಇತ್ತು. ಹಣ, ಹೆಸರು, ಲಾಭದಾಯಕ ಉದ್ಯಮ, ಸಮಾಜದಲ್ಲಿ ಗೌರವ, ಜೀವನದಲ್ಲಿ ಅನುಭವಿಸಬೇಕೆನಿಸುವ ಎಲ್ಲವನ್ನೂ ಪಡೆಯುವ ಶಕ್ತಿಯೂ ಇತ್ತು. ಆದರೆ ಈ ಕುಟುಂಬದ ಕುಡಿ ಮಯಂಕ್ ಅಗರವಾಲ್ ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ..’ ತುಡಿದರು.

ಹೋದ ಬುಧವಾರ ಮೆಲ್ಬರ್ನ್‌ನ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮಯಂಕ್ (76 ರನ್) ಅರ್ಧಶತಕ ಹೊಡೆದು ಅಂತರರಾಷ್ಟ್ರೀಯ ಕ್ರಿಕೆಟ್‌ ಜೀವನ ಆರಂಭಿಸಿದರು. ದೇಶ, ವಿದೇಶಗಳ ಕ್ರಿಕೆಟ್‌ ಅಭಿಮಾನಿಗಳ ಗಮನ ಸೆಳೆದಿರುವ ಮಯಂಕ್ ಈ ಅವಕಾಶಕ್ಕಾಗಿ ಪಟ್ಟ ಶ್ರಮ ಸಣ್ಣದಲ್ಲ. ದೇಶಿ ಕ್ರಿಕೆಟ್‌ನಲ್ಲಿ ರನ್‌ಗಳ ರಾಶಿ ಪೇರಿಸಿದರೂ ರಾಷ್ಟ್ರೀಯ ತಂಡದ ಕದ ತೆರೆಯಲಿಲ್ಲ. ಸತತ ವೈಫಲ್ಯ ಅನುಭವಿಸಿದವರು ಸ್ಥಾನ ಪಡೆದರು. ಇದಾವುದೂ ಮಯಂಕ್ ಏಕಾಗ್ರತೆಗೆ ಭಂಗ ತರಲಿಲ್ಲ.

ಆವರ ತಾಳ್ಮೆ, ಛಲ ಮತ್ತಷ್ಟು ಪಕ್ವಗೊಂಡವು. ತನ್ನ ಲಯ, ರಾಗ, ಸ್ವರಗಳನ್ನು ಸುಶ್ರಾವ್ಯಗೊಳಿಸಲು ಗಂಟೆಗಟ್ಟಲೆ ಪಟ್ಟುಬಿಡದೇ ರಿಯಾಜ್ ಮಾಡುವ ಸಂಗೀತಗಾರನ ಮನಸ್ಥಿತಿಯನ್ನು ಮಯಂಕ್ ಬೆಳೆಸಿಕೊಂಡರು. ಅಪ್ಪ ಅನುರಾಗ್ ಅಗರವಾಲ್, ಕೋಚ್ ಆರ್‌.ಎಕ್ಸ್‌. ಮುರಳಿ ಅವರ ಅಚಲವಾದ ಬೆಂಬಲ ಇತ್ತು. ರನ್‌ ಗಳಿಕೆಯ ಹಸಿವು ನಿರಂತರವಾಗಿತ್ತು.

2013ರಲ್ಲಿ ಮೈಸೂರಿನ ಗಂಗೋತ್ರಿ ಗ್ಲೇಡ್ಸ್‌ನಲ್ಲಿ ರಣಜಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಮಯಂಕ್ ಕೇವಲ 10 ರನ್‌ಗಳಿಂದ ಶತಕ ತಪ್ಪಿಸಿಕೊಂಡಿದ್ದರು. ಆದರೆ, ಕರ್ನಾಟಕ ತಂಡಕ್ಕೆ ಮತ್ತೊಬ್ಬ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಭರವಸೆ ಮೂಡಿಸಿದ್ದರು. ಜಾರ್ಖಂಡ್ ಎದುರಿನ ಆ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಜೊತೆಗೆ ಇನಿಂಗ್ಸ್‌ ಆರಂಭಿಸಿದ್ದರು. ಈ ಟೆಸ್ಟ್‌ನಲ್ಲಿ ರಾಹುಲ್ ಬದಲಿಗೆ ಮಯಂಕ್ ಆರಂಭಿಕ ಆಟಗಾರರಾಗಿ ಇಳಿದಿದ್ದು ಬದಲಾದ ಕಾಲದ ಮಹಿಮೆ.

‘ಮಯಂಕ್ ಉತ್ತಮ ಆರಂಭ ಮಾಡಿದ್ದಾರೆ. ಅವರಿಗೆ ಒಳ್ಳೆಯ ಭವಿಷ್ಯ ಇದೆ. ಟೆಸ್ಟ್‌ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕೆ.ಎಲ್. ರಾಹುಲ್ ಒಳ್ಳೆಯ ಸಾಧನೆ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅವರು ಫಾರ್ಮ್‌ ಕಳೆದುಕೊಂಡಿದ್ದಾರೆ.ಈ
ಏರಿಳಿತಗಳು ಎಲ್ಲ ಆಟಗಾರರ ಜೀವನದಲ್ಲಿಯೂ ಬರುತ್ತವೆ. ಅವರು ಒತ್ತಡವನ್ನು ನಿಭಾಯಿಸಿ ಏಕಾಗ್ರತೆ ಗಳಿಸಿದರೆ ಮತ್ತೆ ಮಿಂಚುತ್ತಾರೆ. ಅವರು ಮತ್ತು ಮಯಂಕ್ ಇಬ್ಬರೂ ತಂಡದಲ್ಲಿ ಆಡಿದರೆ ಕನ್ನಡಿಗರಿಗೆ ಅಪಾರ ಆನಂದವಾಗುತ್ತದೆ’ ಎಂದು ಮಯಂಕ್ ಅವರ ಕೋಚ್ ಮುರಳಿ ಹೇಳುತ್ತಾರೆ.

‘ಬುದ್ಧ’ ಮಾರ್ಗದಲ್ಲಿ ಮಯಂಕ್!
ಮಯಂಕ್ ಕೂಡ ತಮ್ಮ ಜೀವನದಲ್ಲಿ ಹಿನ್ನಡೆ ಅನುಭವಿಸಿದ್ದರು. ದೇಶಿ ಕ್ರಿಕೆಟ್‌ನಲ್ಲಿ ರನ್‌ಗಳ ಬರ ಎದುರಿಸಿದ್ದರು. ಒತ್ತಡಕ್ಕೆ ಸಿಲುಕಿದ್ದರು. ಶಾಲೆಯ ದಿನಗಳಲ್ಲಿ ಜೂನಿಯರ್ ವೀರೇಂದ್ರ ಸೆಹ್ವಾಗ್ ಏಂಬ ಖ್ಯಾತಿ ಗಳಿಸಿದ್ದ ಮಯಂಕ್. 2010ರಲ್ಲಿ ರಾಜ್ಯದ ಟ್ವೆಂಟಿ–20 ಮತ್ತು ಏಕದಿನ ತಂಡದಲ್ಲಿ ಸ್ಥಾನ ಪಡೆದರು. ಆದರೆ, ನಿಗದಿಯ ಓವರ್‌ಗಳ ಕ್ರಿಕೆಟ್‌ಗೆ ಸೀಮಿತರಾದರು. ಆದರೂ ಛಲ ಬಿಡದೇ 2013ರಲ್ಲಿ ರಣಜಿ ತಂಡದಲ್ಲಿ ಸ್ಥಾನ ಪಡೆದರು. 2014–15ರ ಸಾಲಿನಲ್ಲಿ ರಾಹುಲ್ ರಾಷ್ಟ್ರೀಯ ತಂಡಕ್ಕೆ ಆಡಲು ಹೋದಾಗ ಇಲ್ಲಿ ಮಯಂಕ್ ಆರಂಭಿಕರಾಗಿ ಕಣಕ್ಕಿಳಿದರು. ಆದರೆ ರನ್‌ಗಳು ಹುಟ್ಟಲಿಲ್ಲ. ಇದರಿಂದಾಗಿ ಈ ೃತುವಿನಲ್ಲಿ ಅವರು ಬೆಂಚ್ ಕಾದಿದ್ದೇ ಹೆಚ್ಚು. ಭಾರತ ‘ಎ’ ತಂಡದಲ್ಲಿ ಸ್ಥಾನ ಲಭಿಸಿದಾಗ ಕೋಚ್ ರಾಹುಲ್ ದ್ರಾವಿಡ್ ಅವರ ಸಖ್ಯ ಹಿತಾನುಭವ ನೀಡಿತ್ತು. ಅವರ ಮಾರ್ಗದರ್ಶನ ಬಲ ತುಂಬಿತ್ತು.

ಇದೇ ಸಂದರ್ಭದಲ್ಲಿ ಅಪ್ಪ ಅನುರಾಗ್ ಅವರ ಸಲಹೆಯಂತೆ ಮಯಂಕ್ ‘ಬುದ್ಧ’ ದಾರಿಗೆ ತೆರಳಿದರು. ಗೌತಮ ಬುದ್ಧನು ಶತಮಾನಗಳ ಹಿಂದೆ ಪರಿಚಯಿಸಿದ್ದ ವಿಪಾಸನಾ ಧ್ಯಾನ ಕಲಿತ ಮಯಂಕ್ ತಮ್ಮೊಳಗಿನ ಸಾಮರ್ಥ್ಯ, ಆತ್ಮವಿಶ್ವಾಸಕ್ಕೆ ಹೊಸ ಹೊಳಪು ನೀಡಿದರು. ಅವರ ಜೀವನದ ದಿಕ್ಕು ಬದಲಾಯಿತು. ತಪ್ಪುಗಳ ಆತ್ಮಾವಲೋಕನ ಮಾಡಿಕೊಂಡರು. ತಿದ್ದಿಕೊಂಡರು. ಮನದ ಉಲ್ಲಾಸವನ್ನು ಇಮ್ಮಡಿಗೊಳಿಸಿಕೊಂಡರು. ಏಕಾಗ್ರತೆ ತಾನಾಗಿಯೇ ಒಲಿಯಿತು. ಬ್ಯಾಟ್‌ನಿಂದ ರನ್‌ಗಳು ಸರಾಗವಾಗಿ ಹರಿದವು. ಒಂದೇ ಋತುವಿನಲ್ಲಿ ಸಾವಿರಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದರು. ಅರ್ಧಶತಕ, ಶತಕ, ತ್ರಿಶತಕಗಳು ಸಾಲುಗಟ್ಟಿದವು.

ಅವರು ಮೆಲ್ಬರ್ನ್‌ನಲ್ಲಿ ಆಡಿದ ಎರಡೂ ಇನಿಂಗ್ಸ್‌ಗಳನ್ನೇ ನೋಡಿ. ಮೊದಲ ಇನಿಂಗ್ಸ್‌ನಲ್ಲಿ ತಮ್ಮೆದುರು ಬರುತ್ತಿದ್ದ ಎಸೆತಗಳಿಗೆ ಫ್ರಂಟ್‌ಫುಟ್‌ ಉತ್ತರ ಕೊಟ್ಟಿದ್ದರು. ವೇಗಿಯ ಎದೆಯತ್ತರಕ್ಕೆ ಪುಟಿದು ಬಂದ ಎಸೆತಗಳನ್ನು ಎದುರಿಸಲು ತುಸು ಕಷ್ಟಪಟ್ಟಿದ್ದರು. ಪ್ಯಾಟ್ ಕಮಿನ್ಸ್‌ ಹಾಕಿದ್ದ ಇಂತಹ ಎಸೆತವೇ ಅವರ ವಿಕೆಟ್‌ ಪಡೆದಿತ್ತು. ಆದರೆ, ಎರಡನೆ ಇನಿಂಗ್ಸ್‌ ಆರಂಭದಲ್ಲಿಯೇ ಭಾರತದ ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಪರೇಡ್ ನಡೆಸಿದರು. ಕೇವಲ 51 ರನ್‌ಗಳಿಗೆ ಐದು ವಿಕೆಟ್ ಉರುಳಿದ್ದವು. ಮೂರನೇ ದಿನದಾಟದ ಅಂತ್ಯದವರೆಗೂ 28 ರನ್ ಗಳಿಸಿ ಕ್ರೀಸ್‌ನಲ್ಲಿ ಗಟ್ಟಿಯಾಗಿ ನಿಂತಿದ್ದು ಮಯಂಕ್ ಮಾತ್ರ. ಏಕೆಂದರೆ, ಅವರು ತಮ್ಮ ತಪ್ಪುಗಳನ್ನು ತಿದ್ದಿಕೊಂಡಿದ್ದರು. ನಾಲ್ಕು ವಿಕೆಟ್ ಪಡೆದಿದ್ದ ಕಮಿನ್ಸ್‌ ಎಸೆತಗಳನ್ನು ಆತ್ಮವಿಶ್ವಾಸದಿಂದ ಎದುರಿಸಿದ್ದರು. ಇದು ಅವರು ತಮ್ಮ ಆಟದ ಕುರಿತು ಇಟ್ಟುಕೊಂಡಿರುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಮುಂದಿನ ಫೆಬ್ರುವರಿ 16ರಂದು 28 ವಸಂತಗಳನ್ನು ಪೂರೈಸಲಿರುವ ಮಯಂಕ್ ಅವರ ಅಂತರರಾಷ್ಟ್ರೀಯ ಕ್ರಿಕೆಟ್‌ ಜೀವನ ಇದೀಗ ಆರಂಭಗೊಂಡಿದೆ. ಫಿಟ್‌ನೆಸ್‌ ಮತ್ತು ಏಕಾಗ್ರತೆಯನ್ನು ಮೇಳೈಸಿಕೊಂಡು ಎಷ್ಟು ದೂರ ಸಾಗುತ್ತಾರೆ ಎನ್ನುವುದೇ ಈಗ ಉಳಿದಿರುವ ಕುತೂಹಲ.

ಕೆ.ಎಲ್. ರಾಹುಲ್ ಮತ್ತು ಮಯಂಕ್ ಅಗರವಾಲ್ -ಪ್ರಜಾವಾಣಿ ಚಿತ್ರ/ಆರ್. ಶ್ರೀಕಂಠ ಶರ್ಮಾ
ಕೆ.ಎಲ್. ರಾಹುಲ್ ಮತ್ತು ಮಯಂಕ್ ಅಗರವಾಲ್ -ಪ್ರಜಾವಾಣಿ ಚಿತ್ರ/ಆರ್. ಶ್ರೀಕಂಠ ಶರ್ಮಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT