ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಕ್ಸಿಂಗ್ ಡೇ ಟೆಸ್ಟ್‌: ಮಯಂಕ್‌ ಹೊಸ ಇನಿಂಗ್ಸ್ ‘ಆರಂಭ’

ರಾಹುಲ್‌–ವಿಜಯ್‌ಗೆ ಕೊಕ್‌; ವಿಹಾರಿಗೆ ಜವಾಬ್ದಾರಿ
Last Updated 25 ಡಿಸೆಂಬರ್ 2018, 17:01 IST
ಅಕ್ಷರ ಗಾತ್ರ

ಮೆಲ್ಬರ್ನ್‌: ನಾಲ್ಕು ವರ್ಷಗಳ ಹಿಂದಿನ ಮಾತು. ಭಾರತ ಟೆಸ್ಟ್ ಕ್ರಿಕೆಟ್ ತಂಡದಲ್ಲಿ ಸ್ಥಾನ ಗಳಿಸಿದ್ದ ಕನ್ನಡಿಗ ಕೆ.ಎಲ್.ರಾಹುಲ್‌ ‍ಪದಾರ್ಪಣೆಗೆ ಸಜ್ಜಾಗಿದ್ದರು. ಪಂದ್ಯ ನಡೆದದ್ದು ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ. ಅದು ಬಾಕ್ಸಿಂಗ್ ಡೇ ಟೆಸ್ಟ್ ಆಗಿತ್ತು.

ಇದೇ ಅಂಗಣದಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್‌ ಮತ್ತೊಬ್ಬ ಕನ್ನಡಿಗನ ಪದಾರ್ಪಣೆಗೆ ಇದೀಗ ವೇದಿಕೆಯಾಗಿದೆ. ದೇಶಿ ಕ್ರಿಕೆಟ್‌ನಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಿಂಚಿನ ಬ್ಯಾಟಿಂಗ್ ಮಾಡಿದ ಮಯಂಕ್ ಅಗರವಾಲ್ ಅವರ ಬಹುದಿನಗಳ ಕನಸು ಈಗ ನನಸಾಗಿದೆ. ಆಸ್ಟ್ರೇಲಿಯಾ ಎದುರಿನ ಮೂರನೇ ಟೆಸ್ಟ್ ಪಂದ್ಯಕ್ಕೆ ದಿಢೀರ್ ಕರೆ ಬಂದಾಗ ಖುಷಿಯಿಂದ ಮೆಲ್ಬರ್ನ್‌ಗೆ ‘ಹಾರಿದ’ ಮಯಂಕ್‌ಗೆ ‘ಬದಲಾದ ‍ಪರಿಸ್ಥಿತಿ’ ದೊಡ್ಡ ಜವಾಬ್ದಾರಿಯನ್ನು ನೀಡಿದೆ.

ಮೊದಲ ಎರಡು ಪಂದ್ಯಗಳಲ್ಲಿ ನಿರಾಸೆ ಕಂಡ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ಕೆ.ಎಲ್‌.ರಾಹುಲ್ ಮತ್ತು ಮುರಳಿ ವಿಜಯ್ ಅವರಿಗೆ ಕೊಕ್‌ ನೀಡಿರುವ ತಂಡದ ಆಡಳಿತ ಮಯಂಕ್ ಅಗರವಾಲ್ ಮತ್ತು ಹನುಮ ವಿಹಾರಿ ಅವರ ಹೆಗಲಿಗೆ ಹೊಸ ಜವಾಬ್ದಾರಿಯನ್ನು ಹೊರಿಸಿದೆ. ರಾಹುಲ್ ಮತ್ತು ಮುರಳಿ ನಾಲ್ಕು ಇನಿಂಗ್ಸ್‌ಗಳ ಪೈಕಿ ಒಂದರಲ್ಲಿ ಮಾತ್ರ ಎರಡಂಕಿ ಮೊತ್ತದ ಜೊತೆಯಾಟ ಆಡಿದ್ದರು.

ಕಿಬ್ಬೊಟ್ಟೆ ನೋವಿನಿಂದ ಬಳಲುತ್ತಿರುವ ಆಫ್ ಸ್ಪಿನ್ನರ್‌ ರವಿ ಚಂದ್ರನ್ ಅಶ್ವಿನ್ ಅವರನ್ನು ಕೂಡ ತಂಡದಿಂದ ಹೊರಗಿಟ್ಟಿದ್ದು ಬೌಲಿಂಗ್ ಆಲ್‌ರೌಂಡರ್‌, ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಅವರಿಗೆ ಅಂತಿಮ 11ರಲ್ಲಿ ಸ್ಥಾನ ನೀಡಲಾಗಿದೆ. ವೇಗಿ ಉಮೇಶ್ ಯಾದವ್ ಕೂಡ ಬಾಕ್ಸಿಂಗ್ ಡೇ ಪಂದ್ಯದಲ್ಲಿ ಆಡುತ್ತಿಲ್ಲ. ಆರನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿಯಲು ರೋಹಿತ್ ಶರ್ಮಾ ಸಜ್ಜಾಗಿದ್ದಾರೆ.

ಮಿಷೆಲ್ ಮಾರ್ಷ್‌ಗೆ ಅವಕಾಶ: ಆಸ್ಟ್ರೇಲಿಯಾ ತಂಡದಲ್ಲಿ ಪೀಟರ್ ಹ್ಯಾಂಡ್ಸ್‌ಕಂಬ್‌ ಬದಲಿಗೆ ಮಿಷೆಲ್ ಮಾರ್ಷ್‌ಗೆ ಅವಕಾಶ ನೀಡಲಾಗಿದೆ.

ಭಾರತ ತಂಡ ಇಂತಿದೆ: ವಿರಾಟ್ ಕೊಹ್ಲಿ (ನಾಯಕ), ಅಜಿಂಕ್ಯ ರಹಾನೆ, ಮಯಂಕ್‌ ಅಗರವಾಲ್‌, ಹನುಮ ವಿಹಾರಿ, ಚೇತೇಶ್ವರ ಪೂಜಾರ, ರೋಹಿತ್ ಶರ್ಮಾ, ರಿಷಭ್‌ ಪಂತ್‌, ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ, ಜಸ್‌ಪ್ರೀತ್ ಬೂಮ್ರಾ.

ಪಂದ್ಯ ಆರಂಭ: ಬುಧವಾರ ಬೆಳಿಗ್ಗೆ 5.00 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸೋನಿ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT