ಸೋಮವಾರ, ಜುಲೈ 4, 2022
21 °C

ಭಾರತ–ನ್ಯೂಜಿಲೆಂಡ್‌ ಇಲೆವನ್‌ ನಡುವಣ ಅಭ್ಯಾಸ ಪಂದ್ಯ ಡ್ರಾ: ಲಯಕ್ಕೆ ಮರಳಿದ ಮಯಂಕ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹ್ಯಾಮಿಲ್ಟನ್‌: ಸತತ ವೈಫಲ್ಯದಿಂದ ಕಂಗೆಟ್ಟಿದ ಮಯಂಕ್‌ ಅಗರವಾಲ್‌ (81; 99ಎ, 10ಬೌಂ, 3ಸಿ) ಕೊನೆಗೂ ಲಯ ಕಂಡುಕೊಂಡರು.

ಭಾನುವಾರ 29ನೇ ವಸಂತಕ್ಕೆ ಕಾಲಿಟ್ಟ ಅವರು ನ್ಯೂಜಿಲೆಂಡ್‌ ಇಲೆವನ್‌ ವಿರುದ್ಧದ ಮೂರು ದಿನಗಳ ಅಭ್ಯಾಸ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ಉಭಯ ತಂಡಗಳ ನಡುವಣ ಈ ಹಣಾಹಣಿ ಡ್ರಾ ಆಯಿತು.

ಸೆಡನ್‌ ಪಾರ್ಕ್‌ನಲ್ಲಿ ವಿಕೆಟ್‌ ನಷ್ಟವಿಲ್ಲದೆ 59ರನ್‌ಗಳಿಂದ ಅಂತಿಮ ದಿನದಾಟ ಆರಂಭಿಸಿದ ಭಾರತ ತಂಡವು ದ್ವಿತೀಯ ಇನಿಂಗ್ಸ್‌ನಲ್ಲಿ 48 ಓವರ್‌ಗಳಲ್ಲಿ 4 ವಿಕೆಟ್‌ಗೆ 252ರನ್‌ ಕಲೆಹಾಕಿತು.

ಶನಿವಾರ 35ರನ್‌ ಗಳಿಸಿ ಕ್ರೀಸ್‌ನಲ್ಲಿದ್ದ ಪೃಥ್ವಿ ಶಾ (39; 31ಎ, 6ಬೌಂ, 1ಸಿ) ಈ ಮೊತ್ತಕ್ಕೆ ನಾಲ್ಕು ರನ್‌ ಸೇರಿಸಿ ಡೆರಿಲ್‌ ಮಿಚೆಲ್‌ಗೆ ವಿಕೆಟ್‌ ನೀಡಿದರು. ಇದರ ಬೆನ್ನಲ್ಲೇ ಮಿಚೆಲ್‌, ಶುಭಮನ್‌ ಗಿಲ್‌ (8; 13ಎ, 1ಬೌಂ) ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು.‌

ನಂತರ ಮಯಂಕ್‌ ಮತ್ತು ವಿಕೆಟ್‌ ಕೀಪರ್‌ ರಿಷಭ್‌ ಪಂತ್‌ (70; 65ಎ, 4ಬೌಂ, 4ಸಿ) ಉತ್ತಮ ಆಟ ಆಡಿದರು. ವೈಫಲ್ಯದಿಂದಾಗಿ ನ್ಯೂಜಿಲೆಂಡ್‌ ಎದುರಿನ ಏಕದಿನ ಸರಣಿಯಲ್ಲಿ ಆಡುವ ಅವಕಾಶ ಕಳೆದುಕೊಂಡಿದ್ದ ಪಂತ್‌, ಸ್ಫೋಟಕ ಬ್ಯಾಟಿಂಗ್‌ ಮಾಡಿ ನೆರೆದಿದ್ದವರನ್ನು ರಂಜಿಸಿದರು. ಈ ಜೋಡಿ ಮೂರನೇ ವಿಕೆಟ್‌ ಪಾಲುದಾರಿಕೆಯಲ್ಲಿ 100ರನ್‌ ಕಲೆಹಾಕಿ ತಂಡದ ಮೊತ್ತ ಹೆಚ್ಚಿಸಿತು. 32ನೇ ಓವರ್‌ನಲ್ಲಿ ಮಯಂಕ್‌, ಸ್ವಯಂ ನಿವೃತ್ತಿ ಪಡೆದರು. ನಾಲ್ಕು ಓವರ್‌ಗಳ ತರುವಾಯ ಪಂತ್‌, ಮಿಚೆಲ್‌ಗೆ ವಿಕೆಟ್‌ ನೀಡಿ ಪೆವಿಲಿಯನ್‌ ಸೇರಿಕೊಂಡರು.

ಬಳಿಕ ವೃದ್ಧಿಮಾನ್‌ ಸಹಾ (ಔಟಾಗದೆ 30; 38ಎ, 5ಬೌಂ) ಮತ್ತು ಆರ್‌.ಅಶ್ವಿನ್‌ (ಔಟಾಗದೆ 16; 43ಎ, 2ಬೌಂ) ತಾಳ್ಮೆಯ ಇನಿಂಗ್ಸ್‌ ಕಟ್ಟಿ ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು. ಭೋಜನ ವಿರಾಮದ ನಂತರ ಒಂದು ಗಂಟೆ ಆಟ ನಡೆಯಿತು. ಬಳಿಕ ಉಭಯ ತಂಡಗಳ ನಾಯಕರು ಡ್ರಾ ಮಾಡಿಕೊಳ್ಳಲು ಸಮ್ಮತಿಸಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ; ಮೊದಲ ಇನಿಂಗ್ಸ್‌: 78.5 ಓವರ್‌ಗಳಲ್ಲಿ 263 ಮತ್ತು 48 ಓವರ್‌ಗಳಲ್ಲಿ 4 ವಿಕೆಟ್‌ಗೆ 252 (ಪೃಥ್ವಿ ಶಾ 39, ಮಯಂಕ್‌ ಅಗರವಾಲ್‌ 81, ರಿಷಭ್‌ ಪಂತ್‌ 70, ವೃದ್ಧಿಮಾನ್‌ ಸಹಾ ಔಟಾಗದೆ 30, ಆರ್‌.ಅಶ್ವಿನ್‌ ಔಟಾಗದೆ 16; ಡೆರಿಲ್‌ ಮಿಚೆಲ್‌ 33ಕ್ಕೆ3).

ನ್ಯೂಜಿಲೆಂಡ್‌ ಇಲೆವನ್‌: ಪ್ರಥಮ ಇನಿಂಗ್ಸ್‌; 74.2 ಓವರ್‌ಗಳಲ್ಲಿ 235. ಫಲಿತಾಂಶ: ಡ್ರಾ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು