ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟೂರ್ನಿ | ಸಂಗೀತ ಪ್ರತಿಭೆ ಕ್ರಿಕೆಟಿಗನಾಗಿದ್ದು..

ಮೊದಲ ಪಂದ್ಯದಲ್ಲೇ 5 ವಿಕೆಟ್ ಪಡೆದ ವೆಂಕಟೇಶ್
Last Updated 1 ಫೆಬ್ರುವರಿ 2023, 4:14 IST
ಅಕ್ಷರ ಗಾತ್ರ

ಕರ್ನಾಟಕದ ಪ್ರಮುಖ ಸಂಗೀತಗಾರರಲ್ಲಿ ವಿದುಷಿ ಜಿ. ಸರೋಜಾ ಅವರೂ ಒಬ್ಬರು. ಅವರ ಮೊಮ್ಮಗ ಮುರಳೀಧರ ವೆಂಕಟೇಶ್ ಕೂಡ ಬಾಲ್ಯದಲ್ಲಿ ಸಂಗೀತದತ್ತ ಒಲವು ತೋರಿದವರು. ಕರ್ನಾಟಕ ಸಂಗೀತದಲ್ಲಿ ಜೂನಿಯರ್ ಪರೀಕ್ಷೆ ಪಾಸಾದ ವೆಂಕಟೇಶ್ ತಮ್ಮ ತಂದೆಯ ಸಲಹೆಯಂತೆ ಕ್ರಿಕೆಟ್‌ಗೆ ತಮ್ಮನ್ನು ಸಮರ್ಪಿಸಿಕೊಂಡರು.

‘ನಮ್ಮ ಕುಟುಂಬವು ಶಾಸ್ತ್ರೀಯ ಸಂಗೀತ ಮತ್ತು ನೃತ್ಯಕಲಾವಿದರದ್ದು. ಹಿರಿಮಗ ವೆಂಕಟೇಶ್ ಮತ್ತು ಎರಡನೇ ಮಗ ಯೋಗೇಶ್ವರ್ ಕೂಡ ಸಂಗೀತ ಜೂನಿಯರ್ ಪರೀಕ್ಷೆ ಪಾಸಾದರು. ಯೋಗೇಶ್ವರ್ ಕನ್ನಡ ಟಿವಿ ಕಾರ್ಯಕ್ರಮಗಳಲ್ಲಿ ಮಿಂಚುತ್ತಿದ್ದಾರೆ. ಆರನೇ ವಯಸ್ಸಿನಿಂದಲೇ ಕ್ರಿಕೆಟ್ ಆಡುತ್ತಿದ್ದ ವೆಂಕಟೇಶ್ ಮಾತ್ರ ಆಟಕ್ಕೆ ಹೆಚ್ಚು ಆದ್ಯತೆ ಕೊಟ್ಟರು. ಬಹಳ ಶ್ರಮಪಟ್ಟು ಇಲ್ಲಿಯವರೆಗೆ ಬೆಳೆದಿದ್ದು ಸಂತಸ ತಂದಿದೆ’ ಎಂದು ವೆಂಕಟೇಶ್ ತಾಯಿ ದಾಕ್ಷಾಯಿಣಿ ಮುರಳೀಧರ್ ‘ಪ್ರಜಾವಾಣಿ’ಗೆ ಹೇಳಿದರು. ಶಾಸ್ತ್ರೀಯ ನೃತ್ಯ ಕಲಾವಿದೆಯಾಗಿರುವ ಅವರು ತರಬೇತಿ ನೀಡುತ್ತಿದ್ದರು.

‘ವೆಂಕಟೇಶ್ ಬಾಲ್ಯದಲ್ಲಿ ಕ್ರಿಕೆಟ್ ಆಸಕ್ತಿ ತೋರಿದ್ದರಿಂದ ಮೈಸೂರು ವಿಶ್ವವಿದ್ಯಾಲಯದಲ್ಲಿ ಮನ್ಸೂರ್ ಅಹಮದ್ ಅವರ ಬಳಿ ತರಬೇತಿ ಕೊಡಿಸಿದೆವು. ನಂತರ ಕೋಚ್ ಸುರೇಂದ್ರ ಅವರಲ್ಲಿ ತರಬೇತಿ ಪಡೆದ ವೆಂಕಟೇಶ್ ಪ್ರತಿಭೆಯನ್ನು ಗುರುತಿಸಿದವರು ಮೈಸೂರು ವಲಯದ ಮಾಜಿ ನಿಮಂತ್ರಕ ಬಾಲಚಂದರ್ ಅವರು. ವೆಂಕಟೇಶ್ ಮೊದಲು ಎಡಗೈ ಬ್ಯಾಟರ್‌ ಆಗಿದ್ದು, ಲೀಗ್‌ನ ಒಂದು ಪಂದ್ಯದಲ್ಲಿ ಶತಕ ಹೊಡೆದಿದ್ದರು. ನಂತರ ಬಲಗೈ ಮಧ್ಯಮವೇಗಿಯಾಗಿಯೂ ಗುರುತಿಸಿಕೊಂಡ ವೆಂಕಟೇಶ್ ವಿನೂ ಮಂಕಡ್ ಟ್ರೋಫಿ ಮತ್ತು ಕೂಚ್ ಬಿಹಾರ್ ಟ್ರೋಫಿ ಟೂರ್ನಿಯಲ್ಲಿ ಒಟ್ಟು 50 ವಿಕೆಟ್‌ಗಳನ್ನು ಗಳಿಸಿದರು. ಮೈಸೂರು ಜೊಜೊ ತಂಡದಲ್ಲಿಯೂ ತರಬೇತಿ ಪಡೆದಿದ್ದಾರೆ’ ಎಂದು ದಾಕ್ಷಾಯಿಣಿ ಹೇಳುತ್ತಾರೆ. ‘ಆಲ್‌ರೌಂಡರ್ ಆಗಿರುವ ವೆಂಕಟೇಶ್‌ಗೆ ಭಾರತ ತಂಡದ ನೀಲಿ ಪೋಷಾಕು ಧರಿಸುವ ಗುರಿ ಇದೆ’ ಎಂದೂ ಅವರು ಹೇಳಿದರು.

ಚಾಲೆಂಜರ್ ಟ್ರೋಫಿ ಟೂರ್ನಿಯಲ್ಲಿ ಇಂಡಿಯಾ ರೆಡ್ ತಂಡಕ್ಕೂ ಅವರು ಆಯ್ಕೆಯಾಗಿದ್ದರು. ಆದರೆ ಕಣಕ್ಕಿಳಿಯುವ ಅವಕಾಶ ಲಭಿಸಿರಲಿಲ್ಲ.

‘ಬ್ಯಾಟರ್‌ನಿಂದ ಬೌಲರ್ ಆಗಿ ಬೆಳೆಯಲು ಬಿಯುಸಿಸಿಯಲ್ಲಿ ಕೋಚ್ ಲಿಯಾನ್ ಖಾನ್ ಕಾರಣರಾದರು. ಅವರು ನನ್ನ ಪ್ರತಿಭೆಯನ್ನು ಗುರುತಿಸಿದರು. ಅದರಿಂದಾಗಿ ನನಗೆ ಬೆಳೆಯಲು ಸಾಧ್ಯವಾಗುತ್ತಿದೆ’ ಎಂದು ವೆಂಕಟೇಶ್ ತಿಳಿಸಿದರು.

ಎರಡನೇ ಮೈಸೂರಿಗ..
ಪ್ರಸಕ್ತ ರಣಜಿ ಟೂರ್ನಿಯಲ್ಲಿ ಮೈಸೂರಿನ ಇಬ್ಬರು ಆಟಗಾರರು ರಾಜ್ಯ ತಂಡಕ್ಕೆ ಪದಾರ್ಪಣೆ ಮಾಡಿದ್ದು ವಿಶೇಷ. ಟೂರ್ನಿಯ ಆರಂಭದಲ್ಲಿ ಬ್ಯಾಟರ್ ನಿಕಿನ್ ಜೋಸ್ ಪದಾರ್ಪಣೆ ಮಾಡಿ ಯಶಸ್ವಿಯಾಗಿದ್ದಾರೆ. ಬ್ಯಾಟಿಂಗ್ ಮತ್ತು ಫೀಲ್ಡಿಂಗ್‌ನಲ್ಲಿ ಉತ್ತಮ ಕಾಣಿಕೆ ನೀಡುತ್ತಿದ್ದಾರೆ. ಇದೀಗ ವೆಂಕಟೇಶ್ ಕೂಡ ಪದಾರ್ಪಣೆ ಮಾಡಿದರು. 22 ವರ್ಷದ ವೆಂಕಟೇಶ್ ಚೊಚ್ಚಲ ವಿಕೆಟ್ ಗಳಿಸಲು ನಿಕಿನ್ ಪಡೆದ ಕ್ಯಾಚ್ ನೆರವಾಗಿದ್ದು ಕಾಕತಾಳೀಯ.

ಕರ್ನಾಟಕ್ಕೆ ಮುನ್ನಡೆ
ಪದಾರ್ಪಣೆಯ ಪಂದ್ಯದಲ್ಲಿ ಐದು ವಿಕೆಟ್ ಗೊಂಚಲು ಗಳಿಸಿದ ಮುರಳೀಧರ್ ವೆಂಕಟೇಶ್ ದಾಳಿಗೆ ಉತ್ತರಾಖಂಡ ತಂಡವು ದೂಳೀಪಟವಾಯಿತು. ಮಂಗಳವಾರ ಆರಂಭವಾದ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್‌ಫೈನಲ್ ಪಂದ್ಯದ ಮೊದಲ ದಿನವೇ ಆತಿಥೇಯ ಕರ್ನಾಟಕ ಪ್ರಥಮ ಇನಿಂಗ್ಸ್ ಮುನ್ನಡೆ ಸಾಧಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮಯಂಕ್ ಅಗರವಾಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ವಾಸುಕಿ ಕೌಶಿಕ್ ಗಾಯಗೊಂಡಿದ್ದ ಕಾರಣ ವಿಶ್ರಾಂತಿ ಪಡೆದರು. ಅವರ ಬದಲಿಗೆ ಮೈಸೂರಿನ ಹುಡುಗ ವೆಂಕಟೇಶ್‌ ಸ್ಥಾನ ಪಡೆದರು. ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು.

ವೆಂಕಟೇಶ್ (14–3–36–5) ದಾಳಿಯ ಮುಂದೆ ಉತ್ತರಾಖಂಡ ತಂಡವು 55.4 ಓವರ್‌ಗಳಲ್ಲಿ 116 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಕರ್ನಾಟಕ ತಂಡವು ದಿನದಾಟದ ಮುಕ್ತಾಯಕ್ಕೆ 26 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 123 ರನ್ ಗಳಿಸಿ, 7 ರನ್‌ ಮುನ್ನಡೆ ಸಾಧಿಸಿದೆ. ಆರ್. ಸಮರ್ಥ್ (ಬ್ಯಾಟಿಂಗ್ 54) ಮತ್ತು ಮಯಂಕ್ (ಬ್ಯಾಟಿಂಗ್ 65) ಕ್ರೀಸ್‌ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT