ಶುಕ್ರವಾರ, ಡಿಸೆಂಬರ್ 13, 2019
26 °C
ಐಸಿಸಿ ರ‍್ಯಾಂಕಿಂಗ್‌: 790 ರೇಟಿಂಗ್ ಪಾಯಿಂಟ್‌ ಕಲೆ ಹಾಕಿದ ವೇಗದ ಬೌಲರ್

ಮಯಂಕ್‌, ಶಮಿ ಜೀವನಶ್ರೇಷ್ಠ ಸಾಧನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ದುಬೈ: ಬಾಂಗ್ಲಾದೇಶ ಎದುರಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಅಮೋಘ ಸಾಮರ್ಥ್ಯ ತೋರಿದ ಆರಂಭಿಕ ಬ್ಯಾಟ್ಸ್‌ಮನ್ ಮಯಂಕ್ ಅಗರವಾಲ್ ಮತ್ತು ವೇಗಿ ಮೊಹಮ್ಮದ್ ಶಮಿ ಅವರು ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ ಸಾಧನೆ ಮಾಡಿದರು. 

ಇಂದೋರ್‌ನಲ್ಲಿ ಶನಿವಾರ ಮುಕ್ತಾಯಗೊಂಡ ಟೆಸ್ಟ್‌ನಲ್ಲಿ ಒಟ್ಟು 7 ವಿಕೆಟ್ ಉರುಳಿಸಿದ ಶಮಿ ರ‍್ಯಾಂಕಿಂಗ್‌ನಲ್ಲಿ 8 ಸ್ಥಾನಗಳ ಏರಿಕೆ ಕಂಡಿದ್ದು 7ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಅವರು ಒಟ್ಟು 790 ರೇಟಿಂಗ್ ಪಾಯಿಂಟ್‌ಗಳನ್ನು ಗಳಿಸಿದ್ದಾರೆ. ಇದು ಭಾರತದ ವೇಗದ ಬೌಲರ್ ಒಬ್ಬನ ಮೂರನೇ ಗರಿಷ್ಠ ಸಾಧನೆಯಾಗಿದೆ. ಕಪಿಲ್ ದೇವ್‌ 877 ಮತ್ತು ಜಸ್‌ಪ್ರೀತ್ ಬೂಮ್ರಾ 832 ಪಾಯಿಂಟ್‌ಗಳನ್ನು ಕಲೆ ಹಾಕಿದ್ದರು.

ಮೊದಲ ಟೆಸ್ಟ್‌ನಲ್ಲಿ ದ್ವಿಶತಕ ಸಿಡಿಸಿದ್ದ ಮಯಂಕ್ ಅಗರವಾಲ್, ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ 11ನೇ ಸ್ಥಾನಕ್ಕೇರಿದ್ದಾರೆ. 28 ವರ್ಷದ ಅಗರವಾಲ್ ಖಾತೆಯಲ್ಲಿ ಈಗ 691 ರೇಟಿಂಗ್ ಪಾಯಿಂಟ್ಸ್ ಇವೆ.

ಆಲ್‌ರೌಂಡರ್ ರವೀಂದ್ರ ಜಡೇಜ 4 ಸ್ಥಾನಗಳ ಬಡ್ತಿಯೊಂದಿಗೆ 35ಕ್ಕೆ ಏರಿದ್ದರೆ, ವೇಗಿ ಇಶಾಂತ್ ಶರ್ಮಾ (20ನೇ ಸ್ಥಾನ) ಮತ್ತು ಉಮೇಶ್ ಯಾದವ್ (22) ತಲಾ ಒಂದೊಂದು ಸ್ಥಾನಗಳ ಏರಿಕೆ ಕಂಡಿದ್ದಾರೆ.  ಆಫ್‌ ಸ್ಪಿನ್ನರ್  ರವಿಚಂದ್ರನ್ ಅಶ್ವಿನ್  ಅಗ್ರ 10ರಲ್ಲಿ ಸ್ಥಾನ ಗಳಿಸಿದ್ದಾರೆ.

ಪ್ರತಿಕ್ರಿಯಿಸಿ (+)