ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆದ ಬಾರಿಯ ಯಶಸ್ಸಿನ ಸೂತ್ರಕ್ಕೆ ಮೊರೆಹೋದೆ: ಮಯಂಕ್

Last Updated 19 ಏಪ್ರಿಲ್ 2021, 9:00 IST
ಅಕ್ಷರ ಗಾತ್ರ

ಮುಂಬೈ: ಮೊದಲ ಎರಡು ಪಂದ್ಯಗಳಲ್ಲಿ ನೀರಸ ಬ್ಯಾಟಿಂಗ್ ಪ್ರದರ್ಶಿಸಿದ್ದರೂ ಮೂರನೇ ಪಂದ್ಯದಲ್ಲಿ ಪುಟಿದೆದ್ದು ಮೋಹಕ ಅರ್ಧಶತಕ ಗಳಿಸಿದ ಮಯಂಕ್ ಅಗರವಾಲ್ ಕಳೆದ ಆವೃತ್ತಿಯಲ್ಲಿ ತೋರಿದ ಸಾಮರ್ಥ್ಯದ ಬೆಂಬಲ ತಮಗಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾನುವಾರ ಇಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಎದುರಿನ ಐಪಿಎಲ್‌ ಪಂದ್ಯದಲ್ಲಿ ಮಯಂಕ್ ಮತ್ತು ನಾಯಕ ಕೆ.ಎಲ್‌.ರಾಹುಲ್ ಅವರ ಅಮೋಘ ಜೊತೆಯಾಟದ ನೆರವಿನಿಂದ ಪಂಜಾಬ್ ಕಿಂಗ್ಸ್ ಉತ್ತಮ ಮೊತ್ತ ಕಲೆ ಹಾಕಿತ್ತು. ಇವರಿಬ್ಬರು ಮೊದಲ ವಿಕೆಟ್‌ಗೆ 76 ಎಸೆತಗಳಲ್ಲಿ 122 ರನ್ ಕಲೆ ಹಾಕಿದ್ದರು. ರಾಜಸ್ಥಾನ್ ರಾಯಲ್ಸ್ ಎದುರಿನ ಮೊದಲ ಪಂದ್ಯದಲ್ಲಿ 14 ರನ್ ಗಳಿಸಿದ್ದ ಮಯಂಕ್ ಅವರು ಚೆನ್ನೈ ಸೂಪರ್ ಕಿಂಗ್ಸ್ ಎದುರು ಶೂನ್ಯಕ್ಕೆ ಔಟಾಗಿದ್ದರು.

ಭಾನುವಾರ ಡೆಲ್ಲಿ ಕ್ಯಾಪಿಟಲ್ಸ್ ಬೌಲರ್‌ಗಳನ್ನು ಕಂಗೆಡಿಸಿದ ಅವರು 36 ಎಸೆತಗಳಲ್ಲಿ 69 ರನ್ ಗಳಿಸಿದ್ದರು. ಏಳು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳು ಅವರ ಬ್ಯಾಟಿನಿಂದ ಸಿಡಿದಿದ್ದವು.

ಪಂದ್ಯದ ನಂತರ ಮಾತನಾಡಿದ ಬೆಂಗಳೂರಿನ ಈ ಕಲಾತ್ಮಕ ಆಟಗಾರ ‘ಹಿಂದಿನ ಎರಡು ಪಂದ್ಯಗಳಲ್ಲಿ ಲಯ ಕಂಡುಕೊಳ್ಳಲಾಗದ್ದಕ್ಕೆ ಬೇಸರಿಸಿಕೊಳ್ಳಲಿಲ್ಲ. ಮೂರನೇ ಪಂದ್ಯದಲ್ಲಿ ನಿರಾತಂಕವಾಗಿ ಕಣಕ್ಕೆ ಇಳಿದಿದ್ದೆ. ಯುಎಇಯಲ್ಲಿ ನಡೆದ ಕಳೆದ ಆವೃತ್ತಿಯಲ್ಲಿ ಉತ್ತಮ ಆಟವಾಡಿದ್ದರಿಂದ ಭರವಸೆಯಲ್ಲಿದ್ದೆ’ ಎಂದು ಹೇಳಿದರು. ಹಿಂದಿನ ಆವೃತ್ತಿಯಲ್ಲಿ ಅವರು 424 ರನ್ ಗಳಿಸಿದ್ದರು.

‘ಎರಡು ಪಂದ್ಯಗಳ ವೈಫಲ್ಯಗಳ ಬಗ್ಗೆ ಚಿಂತೆ ಇರಲಿಲ್ಲ. ಕಳೆದ ಬಾರಿಯ ಯಶಸ್ಸಿಗೆ ಕಾರಣವಾದ ಅಂಶಗಳನ್ನು ಮೆಲುಕು ಹಾಕುತ್ತಿದ್ದೆ. ಅಂದು ಬಳಸಿದ್ದ ತಂತ್ರಗಳಿಗೆ ಮೊರೆಹೋಗಲು ನಿರ್ಧರಿಸಿದೆ. ನೆಟ್ಸ್‌ನಲ್ಲಿ ಚೆನ್ನಾಗಿ ಬ್ಯಾಟಿಂಗ್ ಮಾಡುತ್ತಿದ್ದೆ. ಆದರೆ ಪಂದ್ಯದಲ್ಲಿ ಯಾಕೆ ಅದು ಸಾಧ್ಯವಾಗುತ್ತಿಲ್ಲ ಎಂಬುದನ್ನು ಯೋಚಿಸಿದೆ. ಕೆಲವು ಬದಲಾವಣೆಗಳನ್ನು ಮಾಡಿಕೊಂಡೆ. ಇದರಿಂದ ಯಶಸ್ಸು ಕಂಡೆ. ಡೆಲ್ಲಿ ಎದುರಿನ ಪಂದ್ಯದಲ್ಲಿ ಹೆಚ್ಚು ರನ್ ಗಳಿಸಲು ಸಾಧ್ಯವಾದದ್ದು ಖುಷಿ ನೀಡಿದೆ’ ಎಂದು ಮಯಂಕ್ ಹೇಳಿದರು.

ಪಂದ್ಯದಲ್ಲಿ ಪಂಜಾಬ್ ನೀಡಿದ 196 ರನ್‌ಗಳ ಗೆಲುವಿನ ಗುರಿಯನ್ನು ಡೆಲ್ಲಿ 18.2 ಓವರ್‌ಗಳಲ್ಲಿ ದಾಟಿತು. ಇದಕ್ಕಾಗಿ ತಂಡ ನಾಲ್ಕು ವಿಕೆಟ್‌ಗಳನ್ನು ಮಾತ್ರ ಕಳೆದುಕೊಂಡಿತ್ತು. ಶಿಖರ್ ಧವನ್ 49 ಎಸೆತಗಳಲ್ಲಿ ಗಳಿಸಿದ 92 ರನ್‌ಗಳ ಬಲದಿಂದ ಡೆಲ್ಲಿ ಗೆಲುವು ಸಾಧಿಸಿತ್ತು.

‘ನಾವು ಉತ್ತಮ ಮೊತ್ತವನ್ನೇ ಗಳಿಸಿದ್ದೆವು. 12ನೇ ಓವರ್‌ ನಂತರ ಡೆಲ್ಲಿ ಬೌಲರ್‌ಗಳು ಹಿಡಿತ ಸಾಧಿಸಿದ್ದರು. ಇಲ್ಲವಾದರೆ ಇನ್ನಷ್ಟು ರನ್‌ ಕಲೆ ಹಾಕಲು ಸಾಧ್ಯವಾಗುತ್ತಿತ್ತು. ಡೆಲ್ಲಿ ಬ್ಯಾಟ್ಸ್‌ಮನ್‌ಗಳು ಕೂಡ ಚೆನ್ನಾಗಿ ಆಡಿದ್ದಾರೆ. ಎರಡನೇ ಇನಿಂಗ್ಸ್‌ ವೇಳೆ ಮಂಜಿನಿಂದಾಗಿ ನಮ್ಮ ತಂಡದ ಬೌಲರ್‌ಗಳಿಗೆ ನೈಜ ಸಾಮರ್ಥ್ಯ ಮೆರೆಯಲು ಸಾಧ್ಯವಾಗಲಿಲ್ಲ. ಸೋಲಿಗೆ ಇದೂ ಒಂದು ಕಾರಣ’ ಎಂದು ಮಯಂಕ್ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT