ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

WPL–2023: ಲ್ಯಾನಿಂಗ್ – ಜೆಸ್ ಮಿಂಚು, ವಾರಿಯರ್ಸ್‌ ವಿರುದ್ಧ ಡೆಲ್ಲಿಗೆ ಜಯ

Last Updated 7 ಮಾರ್ಚ್ 2023, 19:45 IST
ಅಕ್ಷರ ಗಾತ್ರ

ಮುಂಬೈ: ನಾಯಕಿ ಮೆಗ್‌ ಲ್ಯಾನಿಂಗ್‌ ಅವರ ಬಿರುಸಿನ ಬ್ಯಾಟಿಂಗ್‌ ಮತ್ತು ಜೆಸ್‌ ಜೊನಾಸೆನ್‌ ಅವರ ಆಲ್‌ರೌಂಡ್ ಆಟದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ ಮಹಿಳಾ ಪ್ರೀಮಿಯರ್‌ ಲೀಗ್ ಟಿ20 ಕ್ರಿಕೆಟ್‌ ಟೂರ್ನಿಯಲ್ಲಿ ಭರ್ಜರಿ ಜಯ ಗಳಿಸಿತು.

ಡಿ.ವೈ.ಪಾಟೀಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಡೆಲ್ಲಿ 42 ರನ್‌ಗಳಿಂದ ಯುಪಿ ವಾರಿಯರ್ಸ್‌ಗೆ ಸೋಲುಣಿಸಿತು.

ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ನಿಗದಿತ ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 211 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಯುಪಿ ನಿಗದಿತ ಓವರ್‌ಗಳಲ್ಲಿ ಐದು ವಿಕೆಟ್‌ ಕಳೆದುಕೊಂಡು 169 ರನ್ ಮಾತ್ರ ಗಳಿಸಿತು.

ಯುಪಿ ವಾರಿಯರ್ಸ್‌ನ ತಹ್ಲಿಯಾ ಮೆಕ್‌ಗ್ರಾ (90 ರನ್‌, 50ಎ, 4X11, 6X4) ಅವರ ಆಟ ವ್ಯರ್ಥ ವಾಯಿತು.

ಡೆಲ್ಲಿ ತಂಡದ ಜೆಸ್‌ ಜೋನಾಸನ್‌ 43 ರನ್‌ ನೀಡಿ ಮೂರು ವಿಕೆಟ್‌ ಕಬಳಿಸಿದರು.

ಲ್ಯಾನಿಂಗ್‌ ಆರ್ಭಟ: ಇದಕ್ಕೂ ಮೊದಲು ಟಾಸ್‌ ಗೆದ್ದ ಯುಪಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಬ್ಯಾಟರ್ ಲ್ಯಾನಿಂಗ್‌ (70 ರನ್‌, 42 ಎ., 4X10, 6X3) ಅವರು ಸೊಗಸಾದ ಆಟದ ಮೂಲಕ ಮಿಂಚಿದರು. ಜೆಸ್‌ ಜೋನಾಸೆನ್‌ (ಔಟಾಗದೆ 42, 20 ಎ., 4X3, 6X3) ಕೊನೆಯಲ್ಲಿ ಅಬ್ಬರಿಸಿದ್ದರಿಂದ ಡೆಲ್ಲಿಯ ತಂಡದ ಮೊತ್ತ 200ರ ಗಡಿ ದಾಟಿತು.

ಲ್ಯಾನಿಂಗ್‌ ಮತ್ತು ಶಫಾಲಿ ವರ್ಮಾ (17 ರನ್‌, 14 ಎ.) ಮೊದಲ ವಿಕೆಟ್‌ಗೆ 6.3 ಓವರ್‌ಗಳಲ್ಲಿ 67 ರನ್‌ ಗಳಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಶಫಾಲಿ ವಿಕೆಟ್‌ ಪಡೆದ ತಹ್ಲಿಯಾ ಮೆಕ್‌ಗ್ರಾ ಈ ಜತೆಯಾಟ ಮುರಿದರು.

ಆದರೆ ಲ್ಯಾನಿಂಗ್‌ ಅಬ್ಬರದ ಆಟಕ್ಕೆ ಕಡಿವಾಣ ಹಾಕಲು ವಾರಿಯರ್ಸ್‌ ಬೌಲರ್‌ಗಳು ವಿಫಲರಾದರು. ಮೆರಿ ಜನ್‌ ಕಾಪ್‌ (16 ರನ್‌) ಅವರೂ ನಾಯಕಿಗೆ ತಕ್ಕ ಸಾಥ್‌ ನೀಡಿದರು. 11ನೇ ಓವರ್‌ನಲ್ಲಿ ತಂಡದ ಮೊತ್ತ 100 ರನ್‌ಗಳ ಗಡಿ ದಾಟಿತು.

ಮಧ್ಯಮ ಕ್ರಮಾಂಕದ ಬ್ಯಾಟರ್‌ ಗಳೂ ಮಿಂಚಿದರು. ಅಲೈಸ್ ಕ್ಯಾಪ್ಸಿ 10 ಎಸೆತಗಳಲ್ಲಿ ಎರಡು ಸಿಕ್ಸರ್‌ಗಳ ನೆರವಿನಿಂದ 21 ರನ್‌ ಗಳಿಸಿದರು.

ಜೆಮಿಮಾ ರಾಡ್ರಿಗಸ್‌ (ಔಟಾಗದೆ 34, 22 ಎ.) ಮತ್ತು ಜೋನಾಸೆನ್‌ ಅವರು ಕೊನೆಯ ಓವರ್‌ಗಳಲ್ಲಿ ರನ್‌ರೇಟ್‌ ಹೆಚ್ಚಿಸಿದರು. ಈ ಜೋಡಿ ಮುರಿಯದ ಐದನೇ ವಿಕೆಟ್‌ಗೆ 5.4 ಓವರ್‌ಗಳಲ್ಲಿ 67 ರನ್‌ ಸೇರಿಸಿತು. ಆಸ್ಟ್ರೇಲಿಯಾದ ಆಲ್‌ರೌಂಡರ್‌ ಜೋನಾಸೆನ್‌ ಅವರು ತಲಾ ಮೂರು ಸಿಕ್ಸರ್‌ ಹಾಗೂ ಬೌಂಡರಿ ಹೊಡೆದರು.

ವಾರಿಯರ್ಸ್‌ ಬೌಲರ್‌ಗಳಲ್ಲಿ ಶಬ್ನಿಮ್‌ ಇಸ್ಮಾಯಿಲ್‌ (29ಕ್ಕೆ 1) ಹೊರತುಪಡಿಸಿ ಇತರ ಎಲ್ಲ ಬೌಲರ್‌ಗಳು 10ಕ್ಕಿಂತ ಹೆಚ್ಚು ಸರಾಸರಿಯಲ್ಲಿ ರನ್‌ ಬಿಟ್ಟುಕೊಟ್ಟರು.

ಸಂಕ್ಷಿಪ್ತ ಸ್ಕೋರ್‌: ಡೆಲ್ಲಿ ಕ್ಯಾಪಿಟಲ್ಸ್‌ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 211 (ಮೆಗ್‌ ಲ್ಯಾನಿಂಗ್‌ 70, ಶಫಾಲಿ ವರ್ಮಾ 17, ಮೆರಿಜನ್‌ ಕಾಪ್‌ 16, ಜೆಮಿಮಾ ರಾಡ್ರಿಗಸ್‌ ಔಟಾಗದೆ 34, ಅಲೈಸ್‌ ಕ್ಯಾಪ್ಸಿ 21, ಜೆಸ್‌ ಜೋನಾಸೆನ್ ಔಟಾಗದೆ 42; ಶಬ್ನಿಮ್‌ ಇಸ್ಮಾಯಿಲ್‌ 29ಕ್ಕೆ 1, ತಹ್ಲಿಯಾ ಮೆಕ್‌ಗ್ರಾ 37ಕ್ಕೆ 1, ಸೋಫಿ ಎಕ್ಸೆಲ್‌ಸ್ಟೋನ್‌ 41ಕ್ಕೆ 1). ಯುಪಿ ವಾರಿಯರ್ಸ್: 20 ಓವರ್‌ಗಳಲ್ಲಿ 5ಕ್ಕೆ 169 (ಅಲಿಸಾ ಹೀಲಿ 24, ತಹ್ಲಿಯಾ ಮೆಕ್‌ಗ್ರಾ 90, ದೇವಿಕಾ ವೈದ್ಯ 23; ಮೆರಿಜನ್ ಕಾಪ್‌ 29ಕ್ಕೆ 1, ಶಿಖಾ ಪಾಂಡೆ 18ಕ್ಕೆ 1, ಜೆಸ್‌ ಜೋನಾಸೆನ್‌ 43ಕ್ಕೆ 3). ಫಲಿತಾಂಶ: ಡೆಲ್ಲಿ ಕ್ಯಾಪಿಟಲ್ಸ್‌ಗೆ 42 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT