ಬುಧವಾರ, ನವೆಂಬರ್ 20, 2019
21 °C

ಮೆಗನ್ ಶುಟ್‌ ‘ಡಬಲ್ ಹ್ಯಾಟ್ರಿಕ್’ ಒಡತಿ

Published:
Updated:
Prajavani

ನಾರ್ತ್ ಸೌಂಡ್, ಆಂಟಿಗಾ: ಆಸ್ಟ್ರೇಲಿಯಾದ ಮಧ್ಯಮ ವೇಗಿ ಮೆಗನ್ ಶುಟ್ ಅವರು ಏಕದಿನ ಮತ್ತು ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್ ಗಳಿಸಿದ ಮೊದಲ ಆಟಗಾರ್ತಿ ಎನಿಸಿಕೊಂಡರು. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಮೂರನೇ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದರು. ಪಂದ್ಯದಲ್ಲಿ ಆಸ್ಟ್ರೇಲಿಯಾ 8 ವಿಕೆಟ್‌ಗಳ ಜಯ ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 50 ಓವರ್‌ಗಳಲ್ಲಿ 180 ರನ್ ಗಳಿಸಿತು. ಮೆಗನ್‌ 24 ರನ್‌ಗಳಿಗೆ 3 ವಿಕೆಟ್ ಕಬಳಿಸಿದರು. ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಅಲಿಸ್‌ ಪೆರಿ (61; 32 ಎಸೆತ, 1 ಸಿಕ್ಸರ್, 11 ಬೌಂಡರಿ) ಮತ್ತು ಮೆಗ್ ಲ್ಯಾನಿಂಗ್ (58; 70 ಎ, 7 ಬೌಂಡರಿ) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ 31.1ನೇ ಓವರ್‌ನಲ್ಲಿ ಗೆಲುವು ಸಾಧಿಸಿತು. ಈ ಮೂಲಕ ಸರಣಿಯಲ್ಲಿ 3–0 ಮುನ್ನಡೆ ಗಳಿಸಿತು.

10ನೇ ಓವರ್‌ನ ಮೂರನೇ ಎಸೆತದ ವರೆಗೂ ಶುಟ್‌ ವಿಕೆಟ್ ಗಳಿಸಿರಲಿಲ್ಲ. ಆದರೆ ಕೊನೆಯ ಮೂರು ಎಸೆತಗಳಲ್ಲಿ ಕ್ರಮವಾಗಿ ಚಿನೆಲಿ ಹೆನ್ರಿ, ಕರಿಶ್ಮಾ ರಾಮ್‌ಹರಕ್‌ ಮತ್ತು ಅಫಿ ಫ್ಲೆಚರ್ ವಿಕೆಟ್ ಉರುಳಿಸಿದರು. ಶುಟ್ ತಮ್ಮ ಮೊದಲ ಹ್ಯಾಟ್ರಿಕ್ ಸಾಧನೆಯನ್ನು ಕಳೆದ ಮಾರ್ಚ್‌ನಲ್ಲಿ ಮಾಡಿದ್ದರು. ಮುಂಬೈನಲ್ಲಿ ನಡೆದಿದ್ದ ಟ್ವೆಂಟಿ–20 ಪಂದ್ಯದಲ್ಲಿ ಅವರು ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ, ನಾಯಕಿ ಮಿಥಾಲಿ ರಾಜ್ ಮತ್ತು ದೀಪ್ತಿ ಶರ್ಮಾ ವಿಕೆಟ್ ಕಬಳಿಸಿದ್ದರು.

ಸಂಕ್ಷಿಪ್ತ ಸ್ಕೋರು: ವೆಸ್ಟ್ ಇಂಡೀಸ್‌: 50 ಓವರ್‌ಗಳಲ್ಲಿ 180 (ಕಿಶೋನಾ ನೈಟ್ 40, ಸ್ಟಿಫಾನಿ ಟೇಲರ್ 23, ಚಿನೆಲಿ ಹೆನ್ರಿ 39, ಶಿನೆಟಾ ಗ್ರಿಮಾಂಡ್ 34; ಮೆಗನ್ ಶುಟ್ 24ಕ್ಕೆ3, ಎಲಿಸ್‌ ಪೆರಿ 18ಕ್ಕೆ1, ಜಾರ್ಜಿಯಾ ವಾರೆಮ್‌ 47ಕ್ಕೆ2, ಆಶ್ಲಿ ಗಾರ್ಡನರ್ 23ಕ್ಕೆ2, ಜೆಸ್ ಜಾನ್ಸನ್ 8ಕ್ಕೆ2); ಆಸ್ಟ್ರೇಲಿಯಾ: 31.1 ಓವರ್‌ಗಳಲ್ಲಿ 2ಕ್ಕೆ 182 (ಅಲಿಸಾ ಹೀಲಿ 61, ಮೆಗ್ ಲ್ಯಾನಿಂಗ್ 58).

ಫಲಿತಾಂಶ: ಆಸ್ಟ್ರೇಲಿಯಾಕ್ಕೆ 8 ವಿಕೆಟ್‌ಗಳ ಜಯ. ಪಂದ್ಯದ ಉತ್ತಮ ಆಟಗಾರ್ತಿ: ಎಲಿಸ್ ಪೆರಿ.

ಪ್ರತಿಕ್ರಿಯಿಸಿ (+)