ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನೇಶ್ ದಿಟ್ಟ ಹೋರಾಟಕ್ಕೆ ಸಿಗದ ಫಲ

ನ್ಯೂಜಿಲೆಂಡ್ ಮಡಿಲಿಗೆ ಟ್ವೆಂಟಿ–20 ಸರಣಿ: ಕೊನೆಯ ಪಂದ್ಯದಲ್ಲಿ ಭಾರತಕ್ಕೆ ಸೋಲು
Last Updated 10 ಫೆಬ್ರುವರಿ 2019, 18:36 IST
ಅಕ್ಷರ ಗಾತ್ರ

ಹ್ಯಾಮಿಲ್ಟನ್: ಭಾರತ ತಂಡದ ಬೌಲರ್‌ಗಳು ಮಾಡಿದ ತಪ್ಪನ್ನು ಸರಿಪಡಿಸಲು ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಮಾಡಿದ ಹೋರಾಟಕ್ಕೆ ಗೆಲುವಿನ ಫಲ ಸಿಗಲಿಲ್ಲ.

ಅದರಿಂದಾಗಿ ನ್ಯೂಜಿಲೆಂಡ್‌ ನೆಲದಲ್ಲಿ ಟ್ವೆಂಟಿ–20 ಸರಣಿ ಗೆದ್ದ ಮತ್ತೊಂದು ‘ಪ್ರಥಮ’ ಸಾಧನೆಯ ದಾಖಲೆಯನ್ನು ನಿರ್ಮಿಸುವ ಅವಕಾಶವನ್ನು ರೋಹಿತ್ ಶರ್ಮಾ ಬಳಗವು ಕಳೆದುಕೊಂಡಿತು. ನಾಲ್ಕು ರನ್‌ಗಳಿಂದ ಸೋತ ಭಾರತ ತಂಡದ ಪರವಾಗಿ ಇಡೀ ಪಂದ್ಯದಲ್ಲಿ ದಿನೇಶ್ (ಔಟಾಗದೆ 33; 16ಎಸೆತ, 4ಸಿಕ್ಸರ್) ಆಟವೊಂದೇ ಬಹುಕಾಲ ನೆನಪಿನಲ್ಲಿ ಉಳಿಯುವಂತದ್ದು.

ಭಾರತವು ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ನಿರ್ಧಾರ ತಪ್ಪು ಎಂದು ಆತಿಥೇಯ ಬ್ಯಾಟ್ಸ್‌ಮನ್‌ಗಳು ಸಾಬೀತು ಮಾಡಿದರು. ಆರಂಭಿಕ ಬ್ಯಾಟ್ಸ್‌ಮನ್ ಟಿಮ್ ಸೆಲ್ಫರ್ಟ್ (43; 25ಎ, 3ಬೌಂ,3ಸಿ) ಮತ್ತು ಕಾಲಿನ್ ಮನ್ರೊ (72; 40ಎ, 5ಬೌಂ, 5ಸಿ) ಮೊದಲ ವಿಕೆಟ್‌ ಜೊತೆಯಾಟದಲ್ಲಿ 80 ರನ್‌ಗಳ ಗಟ್ಟಿ ಅಡಿಪಾಯ ಹಾಕಿದರು. ಅದರ ಮೇಲೆ ತಂಡವು 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 212 ರನ್‌ಗಳ ದೊಡ್ಡ ಮೊತ್ತವನ್ನು ಕಲೆಹಾಕಿತು. ಗುರಿ ಬೆನ್ನಟ್ಟಿದ ಭಾರತ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 208 ರನ್ ಗಳಿಸಿತು. ಈಚೆಗೆ ಕಿವೀಸ್ ವಿರುದ್ಧದ ಏಕದಿನ ಸರಣಿಯನ್ನು ಭಾರತವು ಗೆದ್ದುಕೊಂಡು ಇತಿಹಾಸ ಬರೆದಿತ್ತು. ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಸೋತಿದ್ದ ರೋಹಿತ್ ಪಡೆಯು ಎರಡನೇ ಪಂದ್ಯದಲ್ಲಿ ಭರ್ಜರಿ ಜಯ ಗಳಿಸಿ 1–1ರ ಸಮಬಲ ಸಾಧಿಸಿತ್ತು.

ದಿನೇಶ್ ಧಮಾಕಾ

ದಿನೇಶ್ ಕ್ರೀಸ್‌ಗೆ ಬಂದಾಗ ಗೆಲುವಿಗೆ 31 ಎಸೆತಗಳಲ್ಲಿ 68 ರನ್‌ಗಳ ಅವಶ್ಯಕತೆ ಇತ್ತು. ತಂಡವು 14.5 ಓವರ್‌ಗಳಲ್ಲಿ 145 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿತ್ತು. ಮೇಲ್ನೋಟಕ್ಕೆ ಇದು ಆಸಾಧ್ಯವೆಂಬಂತೆ ಕಂಡಿತ್ತು. ಇನ್ನೊಂದು ಬದಿಯಲ್ಲಿದ್ದ ಧೋನಿಯೊಂದಿಗೆ ಸೇರಿದ ದಿನೇಶ್ ಸಮಯ ವೃರ್ಥ ಮಾಡಲಿಲ್ಲ. ಸಿಕ್ಸರ್ ಹೊಡೆಯುವತ್ತಲೇ ಗಮನ ನೆಟ್ಟರು. ಆಂತಹದ್ದೇ ಪ್ರಯತ್ನಕ್ಕೆ ಕೈಹಾಕಿದ ಧೋನಿ ದಂಡ ತೆತ್ತರು.

ಬೌಲಿಂಗ್‌ನಲ್ಲಿ ತುಟ್ಟಿಯಾಗಿದ್ದ ಕೃಣಾಲ್ ಪಾಂಡ್ಯ (ಔಟಾಗದೆ 26; 13ಎ, 2ಬೌಂ, 2ಸಿ)ಅವರು ಬ್ಯಾಟಿಂಗ್‌ನಲ್ಲಿ ಮಿಂಚಿದರು. ದಿನೇಶ್‌ಗೆ ಉತ್ತಮ ಜೊತೆ ನೀಡಿದರು. ಇವರಿಬ್ಬರ ಆರ್ಭಟದಿಂದಾಗಿ ತಂಡವು ಗೆಲುವಿನ ಸನಿಹ ಬಂದು ನಿಂತಿತು. ಕೊನೆಯ ಒಂದು ಓವರ್‌ನಲ್ಲಿ 16 ರನ್‌ಗಳ ಅವಶ್ಯಕತೆ ಇತ್ತು. ‘ಚುಟುಕು ಕ್ರಿಕೆಟ್‌ನಲ್ಲಿ ಇದು ದೊಡ್ಡ ಸವಾಲು ಅಲ್ಲ’ ಎಂಬ ಭಾವನೆಯನ್ನು ನಿಜ ಮಾಡುವತ್ತ ಇಬ್ಬರೂ ಚಿತ್ತ ನೆಟ್ಟರು.

ಮೊದಲ ಎಸೆತವನ್ನು ಲಾಂಗ್‌ ಅನ್‌ಗೆ ಹೊಡೆದ ಕಾರ್ತಿಕ್ ಎರಡು ರನ್ ಗಳಿಸಿದರು. ಎರಡನೇ ಎಸೆತದಲ್ಲಿ ರನ್ ಹೊಡೆಯಲು ಸೌಥಿ ಬಿಡಲಿಲ್ಲ. ಮೂರನೇ ಎಸೆತದಲ್ಲಿ ಒಂದು ರನ್ ಪಡೆಯುವ ಅವಕಾಶ ಇತ್ತು ಕೃಣಾಲ್ ಬಹುತೇಕ ಅಂತರವನ್ನು ಕ್ರಮಿಸಿದ್ದರು. ಆದರೆ, ದಿನೇಶ್ ಅವರು ಕೃಣಾಲ್ ಅವರನ್ನು ವಾಪಾಸ್ ಕಳಿಸಿದರು. ನಾಲ್ಕನೇ ಎಸೆತದಲ್ಲಿ ದಿನೇಶ್ ಒಂದು ರನ್ ಗಳಿಸಿದರು. ಐದನೇ ಎಸೆತದಲ್ಲಿ ಕೃಣಾಲ್ ಒಂದು ರನ್ ಪಡೆದರು. ನಂತರದ ಎಸೆತವು ವೈಡ್ ಆಯಿತು. ಆದರೂ ಒಂದು ಎಸೆತದಲ್ಲಿ 11 ರನ್‌ಗಳ ಅಗತ್ಯ ತಂಡಕ್ಕೆ ಇತ್ತು. ಕೊನೆ ಎಸೆತವನ್ನು ದಿನೇಶ್ ಡೀಪ್‌ ಎಕ್ಸಟ್ರಾ ಕವರ್‌ಗೆ ಸಿಕ್ಸರ್‌ ಎತ್ತಿದರು. ಅದರೊಂದಿಗೆ ಭಾರತದ ಹೋರಾಟಕ್ಕೆ ತೆರೆಬಿತ್ತು. ಆತಿಥೇಯರ ಸಂಭ್ರಮ ಕುಡಿಯೊಡೆಯಿತು.

ಟ್ವೆಂಟಿ–20ಯಲ್ಲಿ ಧೋನಿ ತ್ರಿಶತಕ!

ಮಹೇಂದ್ರಸಿಂಗ್ ಧೋನಿ ಭಾನುವಾರ 300ನೇ ಟ್ವೆಂಟಿ–20 ಪಂದ್ಯ ಆಡಿದರು. ಇದರೊಂದಿಗೆ ಅತಿ ಹೆಚ್ಚು ಚುಟುಕು ಪಂದ್ಯಗಳನ್ನಾಡಿದ ಭಾರತದ ಆಟಗಾರನಾದರು. 2006ರಲ್ಲಿ ಜೋಹಾನ್ಸ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಪದಾರ್ಪಣೆ ಮಾಡಿದ್ದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರು96 ಪಂದ್ಯಗಳನ್ನು ಆಡಿದ್ದಾರೆ. ಒಟ್ಟು ಎಲ್ಲ ಪ್ರಮುಖ ಟೂರ್ನಿಗಳಲ್ಲಿ ಸೇರಿ ತ್ರಿಶತಕದ ಗಡಿ ಮುಟ್ಟಿದ್ದಾರೆ.

ರೋಹಿತ್ ಶರ್ಮಾ (298), ಸುರೇಶ್ ರೈನಾ (296) ಮತ್ತು ದಿನೇಶ್ ಕಾರ್ತಿಕ್ (260) ನಂತರದ ಸ್ಥಾನಗಳಲ್ಲಿದ್ದಾರೆ.

ಸ್ಟಂಪಿಂಗ್ ದಾಖಲೆ: ಧೋನಿ ಅವರು ಅಂತರರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಸ್ಟಂಪಿಂಗ್ ಮಾಡಿದ ದಾಖಲೆಯನ್ನು ಮಾಡಿದರು. ಪಂದ್ಯದಲ್ಲಿ ಅವರು ಕುಲದೀಪ್ ಯಾದವ್ ಎಸೆತದಲ್ಲಿ ಸೀಫರ್ಟ್‌ ಅವರನ್ನು ಮಿಂಚಿನ ವೇಗದಲ್ಲಿ ಸ್ಟಂಪಿಂಗ್ ಮಾಡಿದರು. ಅದರೊಂದಿಗೆ ಈ ಶ್ರೇಯವನ್ನು ತಮ್ಮದಾಗಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT