ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟಿಗರ ವಲಸೆ.. ಎರಡನೇ ತಂಡದ ಆಸೆ..

Last Updated 8 ಸೆಪ್ಟೆಂಬರ್ 2019, 19:45 IST
ಅಕ್ಷರ ಗಾತ್ರ

ಈ ಕ್ರಿಕೆಟ್ ಋತುವಿನ ಪಂದ್ಯಗಳನ್ನು ಫಾಲೋ ಮಾಡುವ ಕನ್ನಡಿಗರು ಕರ್ನಾಟಕದ ಜೊತೆಗೆ ವಿದರ್ಭ, ಪುದುಚೇರಿ, ನಾಗಾಲ್ಯಾಂಡ್, ಕೇರಳ ಮತ್ತು ಗೋವಾ ತಂಡಗಳತ್ತಲ್ಲೂ ಚಿತ್ತ ನೆಡುವುದು ಖಚಿತ.

ಏಕೆಂದರೆ, ಆ ತಂಡಗಳಲ್ಲಿಯೂ ಕನ್ನಡಿಗರ ಆಟ ನಡೆಯಲಿದೆ. ದೇಶಿ ಕ್ರಿಕೆಟ್‌ನ ಎಲ್ಲ ಪ್ರತಿಷ್ಠಿತ ಟ್ರೋಫಿಗಳನ್ನು ಸತತ ಎರಡು ಋತುಗಳಲ್ಲಿ ಗೆದ್ದು ‘ಡಬಲ್ ಟ್ರಿಪಲ್’ ಕರ್ನಾಟಕ ತಂಡದ ನಾಯಕತ್ವ ವಹಿಸಿದ್ದ ಆರ್. ವಿನಯಕುಮಾರ್ ಈ ಬಾರಿ ಪುದುಚೇರಿ ತಂಡದಲ್ಲಿ ಆಡಲಿದ್ದಾರೆ. ಅದೇ ಸಂದರ್ಭದಲ್ಲಿ ಅವರೊಂದಿಗೆ ವಿಕೆಟ್‌ಕೀಪರ್ ಆಗಿ ಆಡಿದ್ದ ಸಿ.ಎಂ. ಗೌತಮ್ ಗೋವಾ ತಂಡ ಸೇರಿದ್ದಾರೆ. ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಕೇರಳ ತಂಡಕ್ಕೆ ನಾಯಕತ್ವ ವಹಿಸಲಿದ್ದಾರೆ. ಹೋದ ಮೂರು ಋತುಗಳಿಂದ ವಿದರ್ಭದಲ್ಲಿ ಆಡುತ್ತಿರುವ ಗಣೇಶ್ ಸತೀಶ್ ಈ ಬಾರಿಯೂ ಅಲ್ಲಿಯೇ ಮುಂದುವರಿಯುವರು. ಸ್ಪಿನ್ನರ್ ಅಬ್ರಾರ್ ಖಾಜಿ ನಾಗಾಲ್ಯಾಂಡ್ ತಂಡದಲ್ಲಿಯೇ ಮುಂದುವರಿಯುವ ಸಾಧ್ಯತೆ ಇದೆ. ಅಲ್‌ರೌಂಡರ್ ಸ್ಟುವರ್ಟ್ ಬಿನ್ನಿ ಕೂಡ ಹೊರರಾಜ್ಯದ ತಂಡ ಸೇರುವ ಸಿದ್ಧತೆಯಲ್ಲಿದ್ದಾರೆ. ಇನ್ನೊಂದೆರಡು ವರ್ಷ ಕಳೆದರೆ ಇನ್ನಷ್ಟು ತಂಡಗಳಲ್ಲಿ ಕನ್ನಡಿಗರ ಪಾರಮ್ಯ ಕಾಣಬಹುದೇನೋ?

ಈ ವರ್ಷ ವಿನಯಕುಮಾರ್, ಸಿ.ಎಂ. ಗೌತಮ್ ಮತ್ತು ಸ್ಟುವರ್ಟ್‌ ಬಿನ್ನಿ ಅವರಂತಹ ಅನುಭವಿಗಳು ಮತ್ತು ಪ್ರಮುಖ ಆಟಗಾರರು ವಲಸೆ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಬಹುದು.

ಹಾಗಾದರೆ; ಕರ್ನಾಟಕಕ್ಕೆ ಸೀನಿಯರ್ ವಿಭಾಗದಲ್ಲಿ ಒಂದೇ ತಂಡ ಸಾಕೆ? ಇನ್ನೊಂದು ತಂಡ ಕಟ್ಟಬಹುದೇ? ಎಂಬ ಪ್ರಶ್ನೆಗಳ ಸುತ್ತ ಚರ್ಚೆ ಗರಿಗೆದರುತ್ತಿದೆ. ಈ ಬೇಡಿಕೆ ಇಂದು ನಿನ್ನೆಯದಲ್ಲ. ದಶಕಗಳ ಹಿಂದೆಯೇ ಇತ್ತು. ಆಗ ಮಾಡಿದ್ದರೆ ಈಗ ಸರಳವಾಗುತ್ತಿತ್ತೇನೋ. ಈಗಿನ ನಿಯಮಾವಳಿಯ ಪ್ರಕಾರ ರಾಜ್ಯದ ಎರಡನೇ ತಂಡಕ್ಕೆ ಬಿಸಿಸಿಐ ಮಾನ್ಯತೆ ಮತ್ತು ಮತದಾನ ಹಕ್ಕು ಪಡೆಯುವುದು ಸುಲಭಸಾಧ್ಯವಲ್ಲ. ‘ಒಂದು ರಾಜ್ಯ ಒಂದು ಮತ’ ನಿಯಮವನ್ನು ಪಾಲಿಸಬೇಕು. ಈ ಕುರಿತು ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿ ಕೆಲವು ರಾಜ್ಯ ಸಂಸ್ಥೆಗಳು ಆಕ್ಷೇಪಣೆ ಸಲ್ಲಿಸಿವೆ. ಅದರ ವಿಚಾರಣೆ ಕೂಡ ನಡೆಯುತ್ತಿದೆ.

ಆದರೆ ಮತದಾನದ ಹಕ್ಕು ಇಲ್ಲದಿದ್ದರೂ, ಆಟಗಾರರಿಗೆ ಎರಡನೇ ಆಯ್ಕೆಯಾದರೂ ಇರುತ್ತಿತ್ತು. ಈ ವಿಷಯದಲ್ಲಿ ದಶಕಗಳ ಹಿಂದೆಯೇ ಕೆಲವು ರಾಜ್ಯಗಳು ಜಾಣತನದ ಹೆಜ್ಜೆ ಇಟ್ಟವು. ಮಹಾರಾಷ್ಟ್ರದ ಆಟಗಾರರಿಗೆ ಮುಂಬೈ, ವಿದರ್ಭ ಮತ್ತು ಮಹಾರಾಷ್ಟ್ರ ತಂಡಗಳಿವೆ. ಗುಜರಾತ್‌ನಲ್ಲಿ ರಾಜ್ಯ ತಂಡದ ಜೊತೆಗೆ ಬರೋಡಾ ಮತ್ತು ಸೌರಾಷ್ಟ್ರ ತಂಡಗಳಿವೆ. ವಿಭಜನೆಪೂರ್ವ ಆಂಧ್ರ ಪ್ರದೇಶದಲ್ಲಿ ರಾಜ್ಯ ತಂಡದ ಜೊತೆಗೆ ಹೈದರಾಬಾದ್ ಇತ್ತು.

ಆದರೆ ಇವತ್ತು ಆ ಎಲ್ಲ ರಾಜ್ಯಗಳಿಗೂ ಹೋಲಿಸಿದರೆ, ಕರ್ನಾಟಕವು ದೇಶದ ಕ್ರಿಕೆಟ್‌ನ ‘ಶಕ್ತಿ ಕೇಂದ್ರ’ವಾಗಿ ಬೆಳೆದಿದೆ. ಮೂಲಸೌಲಭ್ಯಗಳು, ಆಟಗಾರರ ಬೆಳವಣಿಗೆಗೆ ಸಿಗುತ್ತಿರುವ ಪ್ರೋತ್ಸಾಹ ಯೋಜನೆಗಳು, ಟೂರ್ನಿಗಳು ಮತ್ತು ಕೋಚಿಂಗ್ ಸೌಲಭ್ಯಗಳು ಇದಕ್ಕೆ ಕಾರಣ ಎನ್ನಬಹುದು. ಅದರಿಂದಾಗಿ ಬೆಂಚ್ ಶಕ್ತಿ ಹೆಚ್ಚುತ್ತಿದೆ. ಯುವ ಪ್ರತಿಭಾವಂತ ಆಟಗಾರರು ರಾಜ್ಯ ತಂಡದಲ್ಲಿ ಸ್ಥಾನ ಪಡೆಯಲು ತುದಿಗಾಲಿನಲ್ಲಿ ನಿಂತಿದ್ದಾರೆ. ಉತ್ತರ ಕರ್ನಾಟಕದ ಹುಬ್ಬಳ್ಳಿ, ಬೆಳಗಾವಿಯಲ್ಲಿ ಸುಸಜ್ಜಿತ ಮೈದಾನಗಳು ನಿರ್ಮಾಣವಾಗಿವೆ. ಮುಂದಿನ ಹಂತದಲ್ಲಿ ಇನ್ನಷ್ಟು ಜಿಲ್ಲೆಗಳಲ್ಲಿ ಕ್ರೀಡಾಂಗಣಗಳು ತಲೆ ಎತ್ತಲಿವೆ. ಅದರೊಂದಿಗೆ ಆಧುನಿಕ ಸೌಲಭ್ಯಗಳು ಸಿಗುತ್ತಿವೆ. ಆದ್ದರಿಂದ ಉತ್ತರ ಭಾಗದಿಂದಲೂ ಸಾಕಷ್ಟು ಆಟಗಾರರು ಬರುತ್ತಿದ್ದಾರೆ. ಆದರೆ ಅವರು ಬೆಂಗಳೂರಿನ ಕ್ಲಬ್‌ಗಳಲ್ಲಿ ಆಡುವ ಮೂಲಕ ರಾಜ್ಯ ತಂಡದ ಗಮನ ಸೆಳೆಯುತ್ತಿದ್ದಾರೆ. ಸದ್ಯದ ತಂಡದಲ್ಲಿ ಆಡುತ್ತಿರುವ ರೋನಿತ್ ಮೋರೆ, ಪವನ್ ದೇಶಪಾಂಡೆ, ಶಿಶಿರ್ ಭವಾನೆ ಅವರೆಲ್ಲ ಹುಬ್ಬಳ್ಳಿ, ಧಾರವಾಡ, ಬೆಳಗಾವಿಯವರು.

ಅಭಿವೃದ್ಧಿಯಾದ ಸೌಲಭ್ಯಗಳಿಂದಾಗಿ ಪ್ರವರ್ಧಮಾನಕ್ಕೆ ಬರುತ್ತಿರುವ ಗ್ರಾಮಾಂತರ ಪ್ರತಿಭೆಗಳಿಗೆ ರಾಜ್ಯ, ರಾಷ್ಟ್ರ ತಂಡಗಳಲ್ಲಿ ಆಡುವ ಗುರಿ ಇದ್ದೇ ಇರುತ್ತದೆ. ಅದಕ್ಕಾಗಿ ಅವಕಾಶ ಸೃಷ್ಟಿಸುವುದು ಕೂಡ ಅವಶ್ಯಕ. ಆಟಗಾರರ ಸಂಖ್ಯೆ ಹೆಚ್ಚಿದಂತೆ ಆಯ್ಕೆಗಾರರಿಗೂ ಸವಾಲು ಎದುರಾಗಿದೆ. ಆದ್ದರಿಂದ ಹಿರಿಯ ಆಟಗಾರರಿಗೆ ವಿದಾಯದ ದಾರಿ ಅನಿವಾರ್ಯವಾಗುತ್ತಿದೆ. ಹೋದ ರಣಜಿ ಋತುವಿನ ಉದಾ ಹರಣೆಯನ್ನೇ ತೆಗೆದುಕೊಂಡರೆ, ಒಂಬತ್ತು ಆಟಗಾರರು ಪದಾರ್ಪಣೆ ಮಾಡಿದ್ದರು. ಹೊಸ ಪ್ರತಿಭೆಗಳ ಪೈಪೋಟಿಯನ್ನು ಎದುರಿಸಿ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವ ಒತ್ತಡ ಹಿರಿಯರ ಮೇಲೆ ಇರುವುದು ಸುಳ್ಳಲ್ಲ.ಇದು ಉತ್ತಮ ಬೆಳವಣಿಗೆ. ಇದರಿಂದಾಗಿ ತಂಡಕ್ಕೆ ಲಾಭವಾಗುತ್ತಿದೆ.

ತಿರುಗುಬಾಣವಾಗುವ ವಲಸೆ

ಆದರೆ ಒಂದೊಮ್ಮೆ ಇಲ್ಲಿಯ ಅನುಭವಿ ಆಟಗಾರರು ಬೇರೆ ರಾಜ್ಯಗಳ ತಂಡಕ್ಕೆ ಹೋದಾಗ ನಮ್ಮ ತಂಡಕ್ಕೇ ‘ತಿರುಗುಬಾಣ’ವಾಗುತ್ತಾರೆ. 2014ರಲ್ಲಿ ಕರ್ನಾಟಕ ತಂಡದ ಪ್ರಮುಖ ಬ್ಯಾಟ್ಸ್‌ಮನ್ ದಾವಣಗೆರೆ ಹುಡುಗ ಗಣೇಶ್ ಸತೀಶ್ ವಿದರ್ಭ ತಂಡ ಸೇರಿಕೊಂಡಿದ್ದರು. ಈ ಮೊದಲಿನ ಋತುಗಳಲ್ಲಿ ಅವರು ಕರ್ನಾಟಕಕ್ಕೆ ಉತ್ತಮವಾಗಿಯೇ ಆಡಿದ್ದರು. ಆದರೂ ಕೆಲವು ಪಂದ್ಯಗಳಲ್ಲಿ ಮಿಂಚದ ಕಾರಣ ಸ್ಥಾನ ಕಳೆದುಕೊಂಡಿದ್ದರು. ವಿದರ್ಭಕ್ಕೆ ಕಾಲಿಟ್ಟ ನಂತರ ಅವರ ಆಟ ಮತ್ತಷ್ಟು ಪರಿಪಕ್ವಗೊಂಡಿತು.

ಆ ತಂಡವು ಎರಡು ಬಾರಿ ರಣಜಿ ಟ್ರೋಫಿ ಜಯಿಸಲು ಗಣೇಶ್ ಕಾಣಿಕೆಯೂ ಮಹತ್ವದ್ದಾಗಿತ್ತು. ಆ ತಂಡದಲ್ಲಿರುವ ಮುಂಬೈನಿಂದ ವಲಸೆ ಬಂದ ಆಟಗಾರ ವಾಸೀಂ ಜಾಫರ್ ಕೂಡ ಮಿಂಚಿದ್ದರು. ಸ್ಥಳಿಯ ಮತ್ತು ಹೊರಗಿನ ಆಟಗಾರರ ಈ ಮಿಶ್ರಣವನ್ನು ನಾಗಪುರ ಮೂಲದ ತಂಡಕ್ಕೆ ಲಾಭ ತಂದುಕೊಟ್ಟಿತು.

ಕರ್ನಾಟಕದ ಕ್ರಿಕೆಟಿಗರು ಇಲ್ಲಿ ಅವಕಾಶ ಸಿಗದಿರುವಾಗ ಬೇರೆ ರಾಜ್ಯಗಲ ತಂಡಕ್ಕೆ ವಲಸೆ ಹೋಗುವುದು ಮೊದಲಿನಿಂದಲೂ ಇದೆ. ಆದರೆ ಈಗ ಅದು ಇನ್ನೊಂದು ರೂಪ ಪಡೆದುಕೊಂಡಿದೆ. ಇಲ್ಲಿ ಸಾಕಷ್ಟು ಆಡಿದ ನಂತರವೂ ಬೇರೆ ತಂಡಗಳು ಅವರನ್ನು ಕೈಬೀಸಿ ಕರೆಯುತ್ತಿವೆ. ನಿವೃತ್ತಿ ಪಡೆಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಅದಕ್ಕೆ ಕಾರಣ ಆಟಗಾರರು ತಮ್ಮ ಫಿಟ್‌ನೆಸ್‌ ಬಗ್ಗೆ ಹೆಚ್ಚು ಗಮನ ಕೊಡುತ್ತಿರುವುದು. ಇನ್ನೊಂದು ದೇಶಿ ಋತುಗಳಲ್ಲಿ ಆಡುವುದರಿಂದ ಸಿಗುತ್ತಿರುವ ಉತ್ತಮ ಸಂಭಾವನೆ ಮತ್ತು ಖ್ಯಾತಿಯೂ ಕಾರಣವಾಗಿವೆ.

ಅದಕ್ಕಾಗಿಯೇ ಭಾರತ ತಂಡವನ್ನು ಪ್ರತಿನಿಧಿಸಿರುವ ಕರ್ನಾಟಕದ ಆಟಗಾರ ರಾಬಿನ್ ಉತ್ತಪ್ಪ ಮೂರು ವರ್ಷಗಳ ಹಿಂದೆ ಇಲ್ಲಿಂದ ಸೌರಾಷ್ಟ್ರಕ್ಕೆ ಹೋಗಿ ಆಡಿದರು. ಇದೀಗ ಕೇರಳಕ್ಕೆ ಜಿಗಿದಿದ್ಧಾರೆ. ಮೂರು ವರ್ಷಗಳ ಹಿಂದೆ ಬೆಳಗಾವಿ ಮಧ್ಯಮವೇಗಿ ರೋನಿತ್ ಮೋರೆ ಇಲ್ಲಿ ಅವಕಾಶಗಳು ಸಿಗದೇ ಹಿಮಾಚಲ ಪ್ರದೇಶ ತಂಡಕ್ಕೆ ಆಡಿದ್ದರು. ನಂತರ ಮತ್ತೆ ತವರಿಗೆ ಮರಳಿದರು. ಹೋದ ವರ್ಷ ಎಸ್. ಅರವಿಂದ್ ನಿವೃತ್ತಿ ಘೋಷಿಸಿದಾಗ ಅವರ ಸ್ಥಾನಕ್ಕೆ ಬಂದ ರೋನಿತ್ ರಣಜಿ ಟೂರ್ನಿಯಲ್ಲಿ 37 ವಿಕೆಟ್ ಗಳಿಸಿ ಮಿಂಚಿದರು. ಅವರೊಂದಿಗೆ ತಂಡದಲ್ಲಿ ಸ್ಥಾನ ಪಡೆ ಯಲು ಪೈಪೋಟಿ ನಡೆಸುತ್ತಿರುವ ಪ್ರಸಿದ್ಧ ಕೃಷ್ಣ, ಪ್ರತೀಕ್ ಜೈನ್ ಮತ್ತು ಟಿ. ಪ್ರದೀಪ್ ಅವರಿಗೆ ಅವಕಾಶ ನೀಡಲು ಕೆಎಸ್‌ಸಿಎ ಪ್ರಯತ್ನಿಸುತ್ತಿದೆ.

‘ಬಹಳಷ್ಟು ಯುವ ಬೌಲರ್‌ಗಳು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅವರಿಗೆ ದಾರಿ ಮಾಡಿಕೊಡುವುದು ನಮ್ಮ ಕರ್ತವ್ಯ. 20ರಿಂದ 24 ವಯಸ್ಸಿನೊಳಗಿನ ಪ್ರತಿಭಾವಂತರು ತಂಡದಲ್ಲಿ ಅವಕಾಶ ಪಡೆದು ಮಿಂಚಿದರೆ ರಾಷ್ಟ್ರೀಯ ತಂಡಕ್ಕೂ ಜಿಗಿಯಬಹುದು. ಆದ್ದರಿಂದ ನಾನು ಪುದುಚೇರಿ ತಂಡಕ್ಕೆ ಆಡಲು ಹೋಗುತ್ತಿದ್ದೇನೆ’ ಎಂದು ಈಚೆಗೆ ವಿನಯಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು.

ವಿಕೆಟ್‌ಕೀಪರ್ ಸಿ.ಎಂ. ಗೌತಮ್ ಅವರನ್ನು ಹೋದ ವರ್ಷವೇ ತಂಡದಿಂದ ಕೈಬಿಡಲಾಗಿತ್ತು. ಅವರ ಬದಲಿಗೆ ಇಬ್ಬರು ವಿಕೆಟ್‌ ಕೀಪರ್‌ಗಳಾದ ಬಿ.ಆರ್. ಶರತ್ ಮತ್ತು ಶ್ರೀನಿವಾಸ್ ಶರತ್ ಅವರನ್ನು ಆಡಿಸಲಾಗಿತ್ತು. ಈ ಬಾರಿಯೂ ತಮ್ಮನ್ನು ಆಯ್ಕೆ ಪರಿಗಣಿಸುವುದಿಲ್ಲ ಎಂದುಕೊಂಡ ಗೌತಮ್ ಗೋವಾದತ್ತ ಮುಖ ಮಾಡಿದ್ದಾರೆ. ಬಿನ್ನಿ ಕೂಡ ಬಹುತೇಕ ಕರ್ನಾಟಕದಿಂದ ಹೊರಗೆ ಹೆಜ್ಜೆ ಇಟ್ಟಾಗಿದೆ.

ನಾಗಾಲ್ಯಾಂಡ್ ತಂಡದಲ್ಲಿಯೂ ಕರ್ನಾಟಕ ಮೂಲದ ಆಟಗಾರರಿದ್ದಾರೆ. ಪುದುಚೇರಿ ಮತ್ತು ಈಶಾನ್ಯ ರಾಜ್ಯಗಳ ತಂಡಗಳಿಗೆ ಕರ್ನಾಟಕದ ಅಟಗಾರರಿಂದಾಗಿ ಒಳ್ಳೆಯ ಲಾಭ ಸಿಗಲಿದೆ. ಅಲ್ಲಿಯ ಹೊಸ ಹುಡುಗರಿಗೆ ಕಲಿಯುವ ಅವಕಾಶ ಹೆಚ್ಚಲಿದೆ. ಆದರೆ ರಾಜ್ಯ ತಂಡಕ್ಕೆ ಆಡುವ ಅವಕಾಶವೂ ಸಿಗದೇ ಹೊರಗೆ ಹೋಗಲು ಆಗದೇ ಪರದಾಡುವ ಹಲವಾರು ಹುಡುಗರು ಇದ್ದಾರೆ. ಅಂತಹ ಪ್ರತಿಭೆಗಳು ಕಮರದಂತೆ ನೋಡಿಕೊಳ್ಳಲು ಕರ್ನಾಟಕವು ಬಿಸಿಸಿಐ ಮೇಲೆ ಪ್ರಭಾವ ಬೀರಿ ಮತ್ತೊಂದು ತಂಡಕ್ಕೆ ಅನುಮತಿ ಪಡೆಯಬೇಕು ಎಂದು ಬಹಳಷ್ಟು ಸದಸ್ಯರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT