ಶನಿವಾರ, ಅಕ್ಟೋಬರ್ 24, 2020
18 °C
ಜಮ್ಮು–ಕಾಶ್ಮೀರ ಫುಟ್‌ಬಾಲ್ ಆಟಗಾರ್ತಿ ಅಫ್ಸಾನ್ ಆಶಿಕ್‌ಗೆ ಪ್ರಧಾನಿ ಶ್ಲಾಘನೆ

ಕೊಹ್ಲಿಯಿಂದ ಮೋದಿಗೆ ಯೋ ಯೋ ಟೆಸ್ಟ್‌ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ಕ್ರಿಕೆಟ್ ತಂಡದ ಆಟಗಾರರ ಫಿಟ್‌ನೆಸ್‌ ಮಟ್ಟವು ಉತ್ತಮವಾಗಲು ಕಾರಣವಾಗಿರುವ ಯೋ ಯೋ ಟೆಸ್ಟ್‌ ಪ್ರಧಾನಿ ನರೇಂದ್ರ ಮೋದಿಯವರ ಕುತೂಹಲವನ್ನೂ ಕೆರಳಿಸಿದೆ.

ಗುರುವಾರ ಫಿಟ್‌ ಇಂಡಿಯಾ ಅಭಿಯಾನ ಅಂಗವಾಗಿ ಕ್ರೀಡಾಪಟುಗಳು  ಮತ್ತು ಫಿಟ್‌ನೆಸ್ ಪರಿಣತರೊಂದಿಗೆ ಸಂವಾದದಲ್ಲಿ ಮೋದಿಯವರು ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರಿಂದ ಈ ಕುರಿತ ಮಾಹಿತಿ ಪಡೆದರು.

‘ಭಾರತ ತಂಡದಲ್ಲಿರುವ ಯೋ ಯೋ ಟೆಸ್ಟ್ ಕುರಿತು ಈಚೆಗಷ್ಟೇ ನಾನು ಕೇಳಿದೆ. ಅದರ ಬಗ್ಗೆ ಹೇಳಿ’ ಎಂದು ಮೋದಿಯವರು ವಿಡಿಯೊ ಸಂವಾದದಲ್ಲಿ ಕೊಹ್ಲಿಯನ್ನು ಪ್ರಶ್ನಿಸಿದರು.

ಮುಗುಳ್ನಗುತ್ತಾ ಉತ್ತರಿಸಿದ ವಿರಾಟ್, ‘ಆಟಗಾರರ ದೈಹಿಕ ಕ್ಷಮತೆಯ ದೃಷ್ಟಿಯಿಂದ ಈ ಪರೀಕ್ಷೆಯು ಅತ್ಯಂತ ಮಹತ್ವದ್ದಾಗಿದೆ. ಜಾಗತಿಕ ಫಿಟ್‌ನೆಸ್‌ ಮಟ್ಟದ ಕುರಿತು ನಾವು ಮಾತನಾಡುತ್ತೇವೆ. ವಿದೇಶಿ ತಂಡಗಳ ಆಟಗಾರರಿಗೆ ಹೋಲಿಕೆ ಮಾಡಿದರೆ ನಮ್ಮ ಫಿಟ್‌ನೆಸ್ ಮಟ್ಟ ಇನ್ನೂ ಕಡಿಮೆಯೇ ಇದೆ. ಆದರೆ ಕ್ರೀಡೆಗೆ ಫಿಟ್‌ನೆಸ್‌ ಮೂಲಾಧಾರವಾಗಿದೆ. ಇದರಲ್ಲಿ ನಾವು ಸುಧಾರಣೆಯಾಗಬೇಕಿದೆ’ ಎಂದರು. 

ಈ ಪರೀಕ್ಷೆಯಲ್ಲಿ 20 ಮೀಟರ್‌ಗಳ ಎರಡು ಸೆಟ್‌ಗಳಿರುತ್ತವೆ. ಬೀಪ್ ಶಬ್ದ ಬಂದಾಕ್ಷಣ ಆಟಗಾರ ಓಡಲು  ಆರಂಭಿಸುತ್ತಾನೆ.  ಮತ್ತೊಂದು ಬೀಪ್ ಬರುವ ಮುನ್ನವೇ ಇನ್ನೊಂದು ತುದಿಯನ್ನು  ಮುಟ್ಟಬೇಕು. ಹೀಗೆ ಕೆಲವು ಸುತ್ತುಗಳಿರುತ್ತವೆ. ಹಂತದಿಂದ ಹಂತಕ್ಕೆ ವೇಗ ಹೆಚ್ಚಬೇಕು. ಕಡಿಮೆಯಾಗುವಂತಿಲ್ಲ. 

‘ಈ ಟೆಸ್ಟ್‌ನಲ್ಲಿ ಮೊದಲು ನಾನು  ಓಡುತ್ತೇನೆ. ಆದರೆ ನಾನು ವಿಫಲನಾದರೆ ತಂಡದ ಆಯ್ಕೆಗೆ ಅನರ್ಹನಾಗುವುದು ಖಚಿತ. ಆದ್ದರಿಂದ ಈ ಟೆಸ್ಟ್‌ಗೂ ಮುನ್ನ ಸತತ ಅಭ್ಯಾಸ ಮಾಡುವ ರೂಢಿಯನ್ನು ಬೆಳೆಸಿಕೊಳ್ಳಲೇಬೇಕು. ಫಿಟ್‌ನೆಸ್‌ ಸುಧಾರಣೆಯ ಸಂಸ್ಕೃತಿ ಬೆಳೆಸಿಕೊಳ್ಳಬೇಕು’ ಎಂದು ಕೊಹ್ಲಿ ವಿವರಿಸಿದರು.

ಈ ಸಂವಾದದಲ್ಲಿ ಪ್ಯಾರಾಲಿಂಪಿಯನ್ ದೇವೇಂದ್ರ ಜಜಾರಿಯಾ, ಜಮ್ಮು ಮತ್ತು ಕಾಶ್ಮೀರ ಫುಟ್‌ಬಾಲ್ ತಂಡದ ಗೋಲ್‌ಕೀಪರ್ ಅಫ್ಸಾನ್ ಆಶೀಕ್, ಚಿತ್ರನಟ–ರೂಪದರ್ಶಿ ಮಿಲಿಂದ್ ಸೊಮನ್ ಮತ್ತು ನ್ಯೂಟ್ರಿಷಿಯನ್ ತಜ್ಞೆ ರುಜುತಾ ದಿವೇಕರ್ ಭಾಗವಹಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.