ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಯ ಲೆಕ್ಕಿಸದೇ ವಿಶ್ವಕಪ್‌ ಆಡಿದ್ದೆ: ಧೋನಿ ಬೆಂಬಲ ಸ್ಮರಿಸಿದ ಮೊಹಮ್ಮದ್‌ ಶಮಿ

Last Updated 17 ಏಪ್ರಿಲ್ 2020, 2:25 IST
ಅಕ್ಷರ ಗಾತ್ರ

ನವದೆಹಲಿ: ‘ಸಿಡ್ನಿ ಕ್ರಿಕೆಟ್‌ ಮೈದಾನದಲ್ಲಿ ಆಯೋಜನೆಯಾಗಿದ್ದ 2015ರ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್‌ನಲ್ಲಿ ನಾನು ಆಡುವ ಸ್ಥಿತಿಯಲ್ಲಿರಲಿಲ್ಲ. ನೋವಿನಿಂದ ನರಳುತ್ತಿರುವುದಾಗಿ ತಿಳಿಸಿದರೂ ನಾಯಕ ಮಹೇಂದ್ರ ಸಿಂಗ್‌ ಧೋನಿ ಬಿಡಲಿಲ್ಲ. ನನ್ನಲ್ಲಿ ಆತ್ಮವಿಶ್ವಾಸ ತುಂಬಿ ನೋವನ್ನೂ ಲೆಕ್ಕಿಸದೆ ಅಂಗಳಕ್ಕಿಳಿಯುವಂತೆ ಮಾಡಿದ್ದರು’ ಎಂದು ಭಾರತದ ಮಧ್ಯಮ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಹೇಳಿದ್ದಾರೆ.

ಭಾರತದ ಹಿರಿಯ ವೇಗದ ಬೌಲರ್‌ ಇರ್ಫಾನ್‌ ಪಠಾಣ್‌ ಅವರೊಂದಿಗಿನ ಇನ್‌ಸ್ಟಾಗ್ರಾಮ್‌ಸಂವಾದದಲ್ಲಿ ಶಮಿ ಅವರು ಧೋನಿ ಬೆಂಬಲವನ್ನು ಸ್ಮರಿಸಿದ್ದಾರೆ.

‘ಪಂದ್ಯದ ದಿನ ಮೊಣಕಾಲಿನಲ್ಲಿನೋವು ಉಲ್ಬಣಿಸಿತ್ತು. ಸೆಮಿಫೈನಲ್‌ನಲ್ಲಿ ಕಣಕ್ಕಿಳಿಯಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವಿಷಯವನ್ನುಸಹ ಆಟಗಾರರಿಗೆ ತಿಳಿಸಿದ್ದೆ. ತಂಡದ ಆಡಳಿತ ಮಂಡಳಿ ಜೊತೆಯೂ ಚರ್ಚಿಸಿದ್ದೆ. ಮಹಿ ಭಾಯ್‌ (ಅಣ್ಣ) ನನ್ನನ್ನು ಕರೆದರು. ಇದು ಮಹತ್ವದ ಪಂದ್ಯ, ಹೀಗಾಗಿ ಹೊಸ ಬೌಲರ್‌ಗೆಅವಕಾಶ ನೀಡುವುದಕ್ಕೆ ಆಗೋಲ್ಲ. ತಂಡಕ್ಕೆ ನಿನ್ನ ಅಗತ್ಯ ತುಂಬಾ ಇದೆ. ಹೀಗಾಗಿ ಆಡಲೇಬೇಕು ಎಂದಿದ್ದರು. ಅವರ ಮಾತಿಗೆ ಕಟ್ಟುಬಿದ್ದು ಮೈದಾನಕ್ಕಿಳಿದಿದ್ದೆ’ ಎಂದು ಆ ದಿನಗಳನ್ನು ಮೆಲುಕು ಹಾಕಿದ್ದಾರೆ.

‘ವಿಶ್ವಕಪ್‌ನ ಮೊದಲ ಪಂದ್ಯದ ವೇಳೆಯೇ ಮೊಣಕಾಲಿಗೆ ಗಾಯವಾಗಿತ್ತು. ಕ್ರಮೇಣ ಅದು ಊದಿಕೊಂಡಿತು. ತೊಡೆಗೂ ಮೊಣಕಾಲಿಗೂ ವ್ಯತ್ಯಾಸವೇ ಗೊತ್ತಾಗುತ್ತಿರಲಿಲ್ಲ. ವೈದ್ಯರು ನಿತ್ಯವೂ ಮೊಣಕಾಲಿನಲ್ಲಿ ಶೇಖರಗೊಂಡಿದ್ದ ದ್ರವವನ್ನು ಹೊರ ತೆಗೆಯುತ್ತಿದ್ದರು.ಬಳಿಕ ಮೂರು ನೋವು ನಿವಾರಕ ಚುಚ್ಚುಮದ್ದು (ಪೇನ್‌ ಕಿಲ್ಲರ್‌) ತೆಗೆದುಕೊಂಡು ಅಂಗಳಕ್ಕಿಳಿಯುತ್ತಿದ್ದೆ. ಪಂದ್ಯ ಮುಗಿದ ಬಳಿಕನಡೆದಾಡುವುದಕ್ಕೂ ಕಷ್ಟವಾಗುತ್ತಿತ್ತು’ ಎಂದಿದ್ದಾರೆ.

‘ಸೆಮಿಫೈನಲ್‌ ಪಂದ್ಯದ ಮೊದಲ ಐದು ಓವರ್‌ಗಳಲ್ಲಿ ತುಂಬಾ ಚೆನ್ನಾಗಿ ಬೌಲಿಂಗ್‌ ಮಾಡಿದೆ. ಕೇವಲ 13 ರನ್‌ ಬಿಟ್ಟುಕೊಟ್ಟಿದ್ದೆ. ಬಳಿಕ ಅಂಗಳದಿಂದ ಹೊರ ಹೋದೆ. ನೋವು ನಿವಾರಕ ಚುಚ್ಚುಮದ್ದು ತೆಗೆದುಕೊಂಡು ಅಂಗಳಕ್ಕಿಳಿದ ಬಳಿಕ ವಿಪರೀತ ನೋವು ಕಾಣಿಸಿಕೊಂಡಿತು. ನನ್ನಿಂದ ಓಡಲು ಸಾಧ್ಯವೇ ಇಲ್ಲ. ಹೀಗಾಗಿ ಬೌಲಿಂಗ್‌ ಮಾಡುವುದಿಲ್ಲ ಎಂದು ಧೋನಿ ಬಳಿ ಹೇಳಿದೆ. ಆಗ ಅವರು ಏನೂ ಆಗೋಲ್ಲ. ನೀನು ಬೌಲಿಂಗ್ ಮಾಡಬಲ್ಲೆ. ನಿನ್ನ ಮೇಲೆ ನನಗೆ ಸಂಪೂರ್ಣ ಭರವಸೆ ಇದೆ ಎಂದಿದ್ದರು. ಹೀಗಾಗಿ ನನ್ನ ಪಾಲಿನ ಹತ್ತು ಓವರ್‌ಗಳನ್ನೂ ಮುಗಿಸಲು ಸಾಧ್ಯವಾಗಿತ್ತು’ ಎಂದು ನೆನಪಿನ ಪುಟ ತಿರುವಿ ಹಾಕಿದ್ದಾರೆ.

‘10 ಓವರ್‌ಗಳಲ್ಲಿ 60ಕ್ಕಿಂತ ಹೆಚ್ಚು ರನ್‌ ಬಿಟ್ಟುಕೊಡದಿದ್ದರೆ ಸಾಕು ಎಂದೂ ಧೋನಿ ತಿಳಿಸಿದ್ದರು. ಹಿಂದೆಂದೂ,ಅಂತಹ ಕಠಿಣ ಪರಿಸ್ಥಿತಿಯಲ್ಲಿ ಬೌಲಿಂಗ್‌ ಮಾಡಿರಲಿಲ್ಲ. ವಿಶ್ವಕಪ್‌ ವೇಳೆ ಆಗಿದ್ದ ಗಾಯ ಕಂಡು ಹಲವರು ನನ್ನ ಕ್ರಿಕೆಟ್‌ ಬದುಕು ಮುಗಿದೇ ಹೋಯಿತು ಎಂದು ಷರಾ ಬರೆದುಬಿಟ್ಟಿದ್ದರು. ಹಾಗಂತ ನಾನು ಯೋಚಿಸುತ್ತಾ ಕೂರಲಿಲ್ಲ. ಫಿನಿಕ್ಸ್‌ನಂತೆ ಎದ್ದು ಬಂದೆ. ತಂಡದಲ್ಲಿ ಮರಳಿ ಸ್ಥಾನ ಪಡೆದೆ’ ಎಂದೂ ನುಡಿದಿದ್ದಾರೆ.

ವಿಶ್ವಕಪ್‌ ಬಳಿಕ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಶಮಿ, ಒಂದು ವರ್ಷ ಕ್ರಿಕೆಟ್‌ ಚಟುವಟಿಕೆಗಳಿಂದ ದೂರ ಉಳಿದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT