ಬಡ ಹುಡುಗನ ಶ್ರೀಮಂತ ಆಟ...

7

ಬಡ ಹುಡುಗನ ಶ್ರೀಮಂತ ಆಟ...

Published:
Updated:

ಹೋದ ವರ್ಷ ರಣಜಿ ಋತು. ಅಕ್ಟೋಬರ್ ತಿಂಗಳು. ಕರ್ನಾಟಕದ ಜಂಘಾಬಲವನ್ನು ಹೈದರಾಬಾದ್ ತಂಡದ ಮಧ್ಯಮ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಪರೀಕ್ಷೆಗೆ ಒಡ್ಡುತ್ತಿದ್ದರು. ಒಳಮುಖವಾಗಿ ನುಗ್ಗುತ್ತಿದ್ದ ಅವರ ಎಸೆತಗಳನ್ನು ಅಂದಾಜು ಮಾಡಲು ಫಾರ್ಮ್‌ನಲ್ಲಿದ್ದ ಮಯಂಕ್ ಅಗರ್‌ವಾಲ್ ತರಹದ ಆಟಗಾರ ಕೂಡ ತಡಕಾಡುತ್ತಿದ್ದರು. ಆ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 15 ಓವರ್‌ಗಳಲ್ಲಿ 42 ರನ್ ನೀಡಿ 4 ವಿಕೆಟ್ ಕಿತ್ತಿದ್ದ ಸಿರಾಜ್ ಕಡೆಗೆ ಆಯ್ಕೆಗಾರರ ಗಮನ ಹರಿದಿತ್ತು. ಅವರು ಭಾರತ ಕ್ರಿಕೆಟ್ ತಂಡಕ್ಕೆ ಅದೇ ದಿನ ಆಯ್ಕೆಯಾದ ಸುದ್ದಿ ಹೊರಬಿತ್ತು. ಕೆ.ಎಲ್. ರಾಹುಲ್ ಆಯ್ಕೆಯಾಗಲಿಲ್ಲ ಎಂಬ ಕಹಿ ಸುದ್ದಿ ಕರ್ನಾಟಕದ ಪಾಲಿಗೆ. 

ಅದಕ್ಕೂ ಎಂಟು ತಿಂಗಳು ಮೊದಲು ಸಿರಾಜ್, ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಆಯ್ಕೆಯಾದಾಗಲೂ ದೊಡ್ಡ ಸುದ್ದಿ. ಬರೀ ₹ 20 ಲಕ್ಷ  ಮೂಲಬೆಲೆ ಇದ್ದ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡದ ಫ್ರಾಂಚೈಸಿಗಳು ₹ 2.6 ಕೋಟಿ ಮೊತ್ತಕ್ಕೆ ಹರಾಜಿನಲ್ಲಿ ಪಡೆದಿದ್ದರು. ಆ ಮೊತ್ತವನ್ನು ಕೇಳಿ ಸಿರಾಜ್ ತಂದೆಯ ಅಸಂಖ್ಯ ಸ್ನೇಹಿತರ ಪಂಚೇಂದ್ರಿಯಗಳಲ್ಲೆಲ್ಲ ಮಿಂಚಿನ ಸಂಚಾರ. ಯಾಕೆಂದರೆ, ಸಿರಾಜ್ ಅಪ್ಪ ಆಟೊ ಡ್ರೈವರ್. ಹೀಗಾಗಿ ಅವರ ಪರಿಚಿತ ವಲಯದವರ ಪಾಲಿಗೆ ಆ ದಿನ ದೊಡ್ಡ ಹಬ್ಬ.

ಹೈದರಾಬಾದಿನ ಸಿರಾಜ್ ಎಲ್ಲ ಹುಡುಗರಂತೆಯೇ ಕ್ರಿಕೆಟ್ ಗೀಳು ಹತ್ತಿಸಿಕೊಂಡರಾದರೂ ಅವರಿಗೆ ಕ್ಲಬ್ ಸೇರುವಷ್ಟು ಅನುಕೂಲ ಇರಲಿಲ್ಲ. ಬಂಜಾರ ಹಿಲ್ಸ್‌ನ ಬಾಡಿಗೆ ಫ್ಲ್ಯಾಟ್‌ನಲ್ಲಿ ವಾಸವಿದ್ದ ಗೌಸ್ ಮೊಹಮ್ಮದ್‌ಗೆ ಮಗನ ಕ್ರಿಕೆಟ್ ಗೀಳೇ ಮುಂದೆ ಹೆಸರು ತಂದುಕೊಟ್ಟೀತು ಎಂಬ ಕಲ್ಪನೆ ಕೂಡ ಇರಲಿಲ್ಲ.

ಗಲ್ಲಿ ಕ್ರಿಕೆಟ್‌ನಲ್ಲಿ ಟೆನಿಸ್ ಬಾಲ್‌ನಲ್ಲಿ ಕೂಡ ಒಳಮುಖವಾಗಿ ಚೆಂಡು ನುಗ್ಗುವಂತೆ ಕರಾಮತ್ತು ಮಾಡುತ್ತಿದ್ದ ಸಿರಾಜ್ ಕಷ್ಟಗಳ ಮಳೆಯಲ್ಲಿ ಮಿಂದ ನಂತರ 2015ರಲ್ಲಿ ರಣಜಿ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಶಾಸ್ತ್ರೀಯ ಕಲಿಕೆಯ ಹೆಚ್ಚುಗಾರಿಕೆ ಇರಲಿಲ್ಲವಾದರೂ ಈ ದೇಸಿ ಪ್ರತಿಭೆ ಆ ರಣಜಿ ಋತುವಿನಲ್ಲಿ 9 ಪಂದ್ಯಗಳಿಂದ 41 ವಿಕೆಟ್‌ಗಳನ್ನು ಪಡೆದು ಸದ್ದು ಮಾಡಿದರು.

ಇರಾನಿ ಕಪ್‌ಲ್ಲಿ ರೆಸ್ಟ್ ಆಫ್ ಇಂಡಿಯಾ ಪರ ಅವಕಾಶ ಸಿಗಲು ಮೆಟ್ಟಿಲಾದದ್ದೇ ಅದು. ಆಗ ಸಿರಾಜ್ ಮುಖವನ್ನು ಹಲವು ಟಿವಿ ವಾಹಿನಿಗಳ ಮೈಕುಗಳು ಸುತ್ತುವರಿದವು. ಎಲ್ಲರಿಗೂ ಅವರು ಆಗ ನೀಡಿದ ಪ್ರತಿಕ್ರಿಯೆ ಒಂದೇ: ‘ನನ್ನಪ್ಪ ಮೂವತ್ತು ವರ್ಷಗಳಿಂದ ಆಟೊರಿಕ್ಷಾ ಓಡಿಸುತ್ತಿದ್ದಾರೆ. ನಾನು ಇನ್ನಾದರೂ ಆಟೊ ಓಡಿಸುವುದನ್ನು ನಿಲ್ಲಿಸುವ ಅಂತ ಹೇಳುತ್ತಲೇ ಬಂದೆ. ಆದರೂ ಅವರಿಗೆ ನನ್ನ ಕಾಲಮೇಲೆ ನಾನಿನ್ನೂ ನಿಂತಿಲ್ಲ ಎಂದೆನಿಸಿತ್ತು. ಐಪಿಎಲ್ ಅವಕಾಶ ದೊಡ್ಡದೊಂದು ಆತ್ಮವಿಶ್ವಾಸ ನೀಡಿದೆ. ಇನ್ನು ಅವರು ಆಟೊ ಓಡಿಸುವುದನ್ನು ನಿಜಕ್ಕೂ ನಿಲ್ಲಿಸಬಹುದು. ರಣಜಿ ಕ್ರಿಕೆಟ್ ಆಡಿದಾಗ ಬಂದ ₹ 10 ಲಕ್ಷ ಸಂಭಾವನೆ ನನ್ನ ಪಾಲಿಗೆ ಆಶಾಕಿರಣ. ನನ್ನ ಅಪ್ಪ-ಅಮ್ಮನಿಗೆ ಸಣ್ಣದೊಂದು ಮನೆ ಖರೀದಿಸಬೇಕು. ವರ್ಷಗಳ ಕಾಲದ ಹಣಕಾಸಿನ ಸಮಸ್ಯೆಯನ್ನು ಮೀರಿ ನಿಲ್ಲಬೇಕು. ಅಷ್ಟಾಗಿಬಿಟ್ಟರೆ ನಾನು ನಿರಾಳವಾಗಿ ಆಟದ ಕಡೆಗೇ ಹೆಚ್ಚು ಗಮನಹರಿಸಬಹುದು’... ಎಂದು.

ದಕ್ಷಿಣ ಆಫ್ರಿಕಾ ‘ಎ’ ತಂಡದ ಪ್ರತಿಭಾವಂತ ಬ್ಯಾಟ್ಸ್‌ಮನ್‌ಗಳನ್ನು ಪೆವಿಲಿಯನ್‌ಗೆ ಕಳುಹಿಸಿ (ಕಿತ್ತ ವಿಕೆಟ್‌ಗಳು 10), ಭಾರತ ‘ಎ’ ಅಭ್ಯಾಸ ಪಂದ್ಯದಲ್ಲಿ ಗೆಲ್ಲಲು ಕಾರಣರಾದ ಅವರ ಆಟವನ್ನು ನೋಡಿದ ಮೇಲೆ ಅವರ ಬದುಕಿನ ಈ ಕಥನ ಮುಖ್ಯವೆನ್ನಿಸಿತು.  

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !