ಮಂಗಳವಾರ, ಜೂನ್ 28, 2022
20 °C

Mothers Day: ಸಚಿನ್ ಸೇರಿ ಕ್ರಿಕೆಟಿಗರ ಹೃದಯ ಸ್ಪರ್ಶಿ ಪೋಸ್ಟ್‌ಗಳು ಹೀಗಿದ್ದವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರತಿಯೊಬ್ಬರ ಜೀವನದಲ್ಲೂ ತಾಯಿಗೆ ಅತ್ಯುನ್ನತ ಸ್ಥಾನವಿರುತ್ತದೆ. ಹೆತ್ತು ಹೊತ್ತು ಜೀವನದುದ್ದಕ್ಕೂ ಮಕ್ಕಳಿಗಾಗಿ ಪ್ರಾರ್ಥಿಸುವ ತಾಯಿಗೆ ಗೌರವ ಸಲ್ಲಿಸಲು ಪ್ರತೀ ವರ್ಷ ಮೇ ತಿಂಗಳ ಎರಡನೇ ಭಾನುವಾರದಂದು ‘ಮದರ್ಸ್ ಡೇ’ ಆಚರಿಸಲಾಗುತ್ತದೆ. ಕ್ರಿಕೆಟ್ ಆಟಗಾರರು ಸಹ  ತಮ್ಮ ಅಮ್ಮನಿಗೆ ಗೌರವ ಸಲ್ಲಿಸಿ ಫೋಟೊ, ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಭಾರತೀಯ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್, ಶಿಖರ್ ಧವನ್ ಮತ್ತು ಸುರೇಶ್ ರೈನಾ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಮತ್ತು ಇಂಡಿಯನ್ ಪ್ರೀಮಿಯರ್ ಲೀಗ್‌ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರು ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ಮದರ್ಸ್ ಡೇ ಶುಭಾಶಯ ತಿಳಿಸಿದ್ದಾರೆ.

‘ನಿಮಗೆ ಎಷ್ಟೇ ವಯಸ್ಸಾದರೂ ನಿಮಗಾಗಿ ಪ್ರಾರ್ಥಿಸುವವರು ತಾಯಂದಿರು. ಅವರಿಗೆ, ನೀವು ಯಾವಾಗಲೂ ಅವರ ಮಗುವೇ. ನನ್ನ ಜೀವನದಲ್ಲಿ ಇಬ್ಬರು ತಾಯಂದಿರು ನನಗೆ ಪ್ರೀತಿ ಕೊಟ್ಟು ಪೋಷಿಸಿದರು’ ಎಂದು ಸಚಿನ್ ಟ್ವೀಟ್ ಮಾಡಿದ್ದು, ಅಮ್ಮ ಮತ್ತು ಚಿಕ್ಕಮ್ಮನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ನನ್ನ ಶ್ರೇಷ್ಠ ಶಿಕ್ಷಕಿ ಮತ್ತು ನನ್ನ ಬೆಸ್ಟ್ ಫ್ರೆಂಡ್ - ಹ್ಯಾಪಿ ಮದರ್ಸ್ ಡೇ ಅಮ್ಮ ಎಂದು ಶಿಖರ್ ಧವನ್ ಇನ್‌ಸ್ಟಾಗ್ರಾಮ್‌ನಲ್ಲಿ ಫೋಟೊ ಹಂಚಿಕೊಂಡಿದ್ದಾರೆ.

ಯಾವಾಗಲೂ ನನ್ನ ಶಕ್ತಿಯ ಆಧಾರಸ್ತಂಭವಾಗಿದ್ದಕ್ಕಾಗಿ ಮತ್ತು ಸರಿಯಾದ ಮಾರ್ಗದರ್ಶನ ನೀಡಿದ್ದಕ್ಕಾಗಿ ಧನ್ಯವಾದಗಳು ಅಮ್ಮ. ನೀವು ಎಂದೆಂದಿಗೂ  ದೊಡ್ಡ ಸ್ಫೂರ್ತಿ ಎಂದು ಸುರೇಶ್ ರೈನಾ ಬರೆದುಕೊಂಡಿದ್ದು, ಅಮ್ಮನ ಜೊತೆಗಿನ ಫೋಟೊಗಳನ್ನು ಟ್ವೀಟ್ ಮಾಡಿದ್ದಾರೆ.

ನನ್ನ ಪತ್ನಿ ಕ್ಯಾಂಡಿ ವಾರ್ನರ್ ತನ್ನ ಮಕ್ಕಳಿಗೆ ಎಷ್ಟು ಒಳ್ಳೆಯ ತಾಯಿ ಎಂಬುದನ್ನು ಪದಗಳಿಂದ ವರ್ಣಿಸಲು ಅಸಾಧ್ಯ. ನಿನ್ನದು ಚಿನ್ನದಂತಹ ಹೃದಯ. ಹ್ಯಾಪಿ ಮದರ್ಸ್ ಡೇ ಡಾರ್ಲಿಂಗ್ ಎಂದು ಡೇವಿಡ್ ವಾರ್ನರ್ ಪೋಸ್ಟ್ ಮಾಡಿದ್ದಾರೆ.
 

ತಾಯಿಯ ಪ್ರೀತಿ ಮಾತ್ರವೇ ಬೇಷರತ್ತಾದುದು ಎಂದು ಶೀರ್ಷಿಕೆ ನೀಡಿರುವ ಮುಂಬೈ ಇಂಡಿಯನ್ಸ್ ತಂಡವು ವಿಡಿಯೊ ಪೋಸ್ಟ್ ಮಾಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು