ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫಿಟ್‌ನೆಸ್‌ ‘ಮಹಿ’ಮೆ!

Last Updated 21 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

‘ಧೋನಿಗೆ 37 ವರ್ಷ ವಯಸ್ಸಾಯ್ತು. ಕ್ರಿಕೆಟ್‌ನಿಂದ ನಿವೃತ್ತಿಯಾಗುವುದು ಒಳಿತು’ ಎಂಬ ಸಲಹೆಗಳು ಹಲವಾರು ಬಾರಿ ವ್ಯಕ್ತವಾಗುತ್ತಿವೆ. ಆದರೆ, ಅಂತಹ ಟೀಕೆಗಳಿಗೆ ಅವರು ತಮ್ಮ ಆಟದ ಮೂಲಕವೇ ಉತ್ತರಿಸಿದ್ದಾರೆ. ಇದೀಗ ವಿಶ್ವಕಪ್‌ ನಲ್ಲಿ ಆಡುವ ತಂಡದಲ್ಲಿಯೂ ಸ್ಥಾನ ಪಡದುಕೊಂಡಿದ್ದಾರೆ. ಅಲ್ಲದೇ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಲ್ಲಿ ಅವರು ಮಿಂಚುತ್ತಿರುವ ರೀತಿ ಎಲ್ಲ ಹಿರಿ–ಕಿರಿಯ ಆಟಗಾರರನ್ನು ದಂಗುಬಡಿಸಿದೆ.

2014ರಲ್ಲಿ ಟೆಸ್ಟ್‌ ಕ್ರಿಕೆಟ್‌ನಿಂದ ನಿವೃತ್ತಿ ಪಡೆದಿದ್ದರು. ಅದರ ನಂತರವೂ ಅವರು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ತಮ್ಮ ಕೀಪಿಂಗ್ ಮತ್ತು ಬ್ಯಾಟಿಂಗ್ ಮೂಲಕ ಮಿಂಚುತ್ತಿದ್ದಾರೆ. ಹಲವು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. ಅವರ ಚುರುಕಿನ ಓಟವನ್ನು ಸರಿಗಟ್ಟಲು ಕೊಹ್ಲಿ ಕೂಡ ಏದುಸಿರು ಬಿಡುತ್ತಿದ್ದಾರೆ. ಇದೆಲ್ಲದರ ಹಿಂದೆ ಅವರ ಗಟ್ಟಿಮುಟ್ಟಾದ ದೈಹಿಕ ಮತ್ತು ಮಾನಸಿಕ ಕ್ಷಮತೆಯೇ ಕಾರಣ.ಇದರ ಹಿಂದಿನ ಗುಟ್ಟೇನು?

ಅವರೇ ಹೇಳಿಕೊಳ್ಳುವಂತೆ ‘ಬ್ಯಾಡ್ಮಿಂಟನ್’. ಅವರು ಬಾಲ್ಯದಲ್ಲಿ ಫುಟ್‌ಬಾಲ್ ಗೋಲ್‌ಕೀಪರ್ ಆಗಿದ್ದು ಬಹಳಷ್ಟು ಜನರಿಗೆ ಗೊತ್ತಿದೆ. ಅವರ ಕುರಿತ ಚಲನಚಿತ್ರದಲ್ಲಿಯೂ ಅದನ್ನು ತೋರಿಸಲಾಗಿದೆ. ಆದರೆ ಇವತ್ತಿಗೂ ಕ್ರಿಕೆಟ್‌ ಅಂಗಳದಿಂದ ಹೊರಗುಳಿದಾಗ ಮಹಿ ಕೈಗೆತ್ತಿಕೊಳ್ಳುವುದು ಬ್ಯಾಡ್ಮಿಂಟನ್ ರ‍್ಯಾಕೆಟ್.

ರಾಂಚಿಯಲ್ಲಿದ್ದಾಗಲಂತೂ ತಮ್ಮ ಹಳೆಯ ಸ್ನೇಹಿತ ಚೋಟು, ಬಾಲ್ಯದ ಕೋಚ್ ಕೇಶವ್‌ ರಂಜನ್ ಬ್ಯಾನರ್ಜಿ ಅವರೊಂದಿಗೆ ಪ್ರತಿದಿನ 2–3 ತಾಸು ಬ್ಯಾಡ್ಮಿಂಟನ್ ಆಡುವುದು ಕಡ್ಡಾಯ ದಿನಚರಿ. ಚುರುಕಾದ ಪಾದಚಲನೆ, ಮೊನಚಾದ ದೃಷ್ಟಿಯನ್ನು ವೃದ್ಧಿಸಲು ಬ್ಯಾಡ್ಮಿಂಟನ್ ಆಟ ಸಹಾಯಕ ಎಂಬುದು ಅವರ ನಂಬಿಕೆ.

‘ಕ್ರೀಡಾಪಟುಗಳಿಗೆ ವಯಸ್ಸು ಹೆಚ್ಚಾದಂತೆ ದೈಹಿಕ ಕ್ಷಮತೆ ಕಡಿಮೆಯಾಗುವುದು ಸಹಜ. ಆದರೆ, ಮಹಿ ಫಿಟ್‌ನೆಸ್ ಕಾಯ್ದುಕೊಂಡಿದ್ದಾರೆ. ಅವರಲ್ಲಿ ಒಬ್ಬ ಒಳ್ಳೆಯ ಕ್ರೀಡಾಪಟುವಿನ ಸಾಮರ್ಥ್ಯ ಇದೆ. ಅವರು ಬ್ಯಾಡ್ಮಿಂಟನ್ ಆಟಗಾರ ಕೂಡ ಹೌದು. ಇಲ್ಲಿಗೆ ಬಂದಾಗಲೆಲ್ಲ ಜೆಎಸ್‌ಸಿಎನಲ್ಲಿ ನಾವು ಬ್ಯಾಡ್ಮಿಂಟನ್ ಆಡಲು ಜೊತೆಗೂಡುತ್ತೇವೆ’ ಎಂದು ಬ್ಯಾನರ್ಜಿ ಸಂತಸ ವ್ಯಕ್ತಪಡಿಸುತ್ತಾರೆ. ಅವರು ಗಾಯದ ಸಮಸ್ಯೆಯಿಂದ ವಿಶ್ರಾಂತಿ ಪಡೆದಿರುವುದು ತೀರಾ ಕಡಿಮೆ. 2010ರ ನಂತರ ಅವರು ಈಚೆಗೆ ನಡೆದ ಎರಡು ಐಪಿ
ಎಲ್‌ ಪಂದ್ಯಗಳಲ್ಲಿ ವಿಶ್ರಾಂತಿ ಪಡೆದಿದ್ದರು. ಬೆನ್ನುನೋವಿನಿಂದ ಅವರು ಆಟದಿಂದ ದೂರ ಉಳಿದಿದ್ದರು.

ವಿಕೆಟ್‌ ಕೀಪಿಂಗ್‌ನಂತಹ ಅತಿ ಕ್ಲಿಷ್ಟಕರವಾದ ಜವಾಬ್ದಾರಿಯನ್ನು ತಣ್ಣನೆಯ ಮುಗುಳ್ನಗೆಯೊಂದಿಗೆ ನಿರ್ವಹಿಸುತ್ತಿದ್ದಾರೆ. ವಯಸ್ಸು ಹೆಚ್ಚಿದಂತೆ ಅವರ ಕಾಲುಗಳು ಸೋತಿಲ್ಲ. ಬದಲಿಗೆ ಮತ್ತಷ್ಟು ಚುರುಕಾಗಿವೆ. ಅವರ ಕೈಚಳಕ ಮತ್ತು ಹದ್ದಿನ ಕಣ್ಣಿನ ನೋಟಕ್ಕೆ ಹಲವು ಬ್ಯಾಟ್ಸ್‌ಮನ್‌ಗಳು ಪೆವಿಲಿಯನ್ ಸೇರುತ್ತಲೇ ಇದ್ದಾರೆ.

ಆಹಾರ ಸೇವನೆ ವಿಷಯದಲ್ಲಿಯೂ ಅತ್ಯಂತ ಕಟ್ಟುನಿಟ್ಟಿನ ಕ್ರಮ ಅನುಸರಿಸುವ ಅವರಿಗೆ ಪ್ರತಿದಿನವೂ ಚಿಕನ್‌ ಬೇಕಂತೆ. ಅದರೊಂದಿಗೆ ದಾಲ್‌ ಚಾವಲ್ (ಬೇಳೆ ಸಾರು, ಅನ್ನ) ಇದ್ದರೆ ತುಂಬ ಇಷ್ಟ ಎಂದು ಅವರು ಕ್ರಿಕೆಟ್‌ ವೆಬ್‌ಸೈಟ್‌ಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದರು.

ಫುಟ್‌ಬಾಲ್, ಟೆನಿಸ್‌ನಲ್ಲಿಯೂ ಅವರದ್ದು ಎತ್ತಿದ ಕೈ. ಯುವ ಆಟಗಾರರೊಂದಿಗೆ ಪೈಪೋಟಿ ನಡೆಸುತ್ತ ತಮ್ಮ ಛಾಪು ಉಳಿಸಿಕೊಂಡಿರುವ ಧೋನಿ ಫಿಟ್‌ನೆಸ್‌ ಕೂಡ ಉಳಿದವರಿಗೆ ಒಂದು ಮೈಲುಗಲ್ಲು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT