ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದವೀಧರ ಕ್ಷೇತ್ರದ ಚುನಾವಣೆ ಸಿದ್ಧತೆ

ಒಟ್ಟು 5,159 ಮತದಾರರು: 13 ಮತಗಟ್ಟೆಗಳಲ್ಲಿ ಮತದಾನ
Last Updated 3 ಜೂನ್ 2018, 10:47 IST
ಅಕ್ಷರ ಗಾತ್ರ

ಯಾದಗಿರಿ: ‘ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್‌ಗೆ ಜಿಲ್ಲೆಯ 13 ಮತಗಟ್ಟೆಗಳಲ್ಲಿ ಜೂನ್ 8 ರಂದು ಬೆಳಿಗ್ಗೆ 7 ರಿಂದ ಸಂಜೆ 5 ರವರೆಗೆ ಚುನಾವಣೆ ನಡೆಯಲಿದೆ’ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ತಿಳಿಸಿದರು.

ಈಶಾನ್ಯ ಪದವೀಧರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್‌ಗೆ ಚುನಾವಣೆ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಮತಗಟ್ಟೆ ಅಧ್ಯಕ್ಷಾಧಿಕಾರಿ (ಪಿಆರ್‌ಒ) ಮತ್ತು ಮತಗಟ್ಟೆ ಸಹಾಯಕ ಅಧಿಕಾರಿ (ಎಪಿಆರ್‌ಒ) ಗಳಿಗೆ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಚುನಾವಣೆಯ ಕಾರ್ಯಕ್ಕೆ ನಿಯೋಜನೆಗೊಂಡಿರುವ ಸಿಬ್ಬಂದಿ ಮತದಾನ ಪ್ರಕ್ರಿಯೆಯಲ್ಲಿ ಯಾವುದೇ ಲೋಪದೋಷ ವಾಗದಂತೆ ಕಾರ್ಯ ನಿರ್ವಹಿಸಬೇಕು. ಅಹಿತಕರ ಸಂದರ್ಭ ಮತ್ತು ಸನ್ನಿವೇಶಗಳಿಗೆ ಅವಕಾಶ ನೀಡದೆ ಚುನಾವಣೆ ಯಶಸ್ವಿಗೊಳಿಸಬೇಕು. ಮತಗಟ್ಟೆಯಲ್ಲಿ ಮೊಬೈಲ್ ಬಳಕೆ ನಿಷೇಧಿಸಲಾಗಿದೆ. ಮತದಾರರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ತರಬೇತಿ ಮತ್ತು ಚುನಾವಣಾ ವಿಷಯಗಳನ್ನು ಚೆನ್ನಾಗಿ ಅರ್ಥೈಸಿಕೊಳ್ಳಬೇಕು’ ಎಂದು ಸೂಚಿಸಿದರು.

‘ಜಿಲ್ಲೆಯಲ್ಲಿ ಒಟ್ಟು 5,159 ಮತದಾರರಿದ್ದಾರೆ. ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 12 ದಾಖಲೆಗಳಲ್ಲಿ ಯಾವುದಾದರೂ ಒಂದನ್ನು ಹಾಜರುಪಡಿಸಿ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮತಗಟ್ಟೆಯ 100 ಮೀಟರ್ ಅಂತರದಲ್ಲಿ ಚುನಾವಣಾ ಪ್ರಚಾರವನ್ನು ಮಾಡುವಂತಿಲ್ಲ. ಮತಗಟ್ಟೆಯಲ್ಲಿ ಆ ಮತಗಟ್ಟೆ ವ್ಯಾಪ್ತಿಯ ಮತದಾರ, ಚುನಾವಣಾ ವೀಕ್ಷಕರು, ಅಭ್ಯರ್ಥಿಗಳ ಏಜೆಂಟರು, ಮತದಾನ ಕಾರ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು, ಸಿಬ್ಬಂದಿಯನ್ನು ಹೊರತುಪಡಿಸಿ ಬೇರೆಯವರಿಗೆ ಪ್ರವೇಶವಿಲ್ಲ’ ಎಂದರು.

ಪ್ರಾಶಸ್ತ್ಯ ಆಧಾರಿತ ಚುನಾವಣೆ: ‘ಯಾವುದೇ ಮತದಾರ ತನಗಿಷ್ಟವಾದ ಅಭ್ಯರ್ಥಿ ಅಥವಾ ನೋಟಾಗೆ ಮೊದಲನೇ ಪ್ರಾಶಸ್ತ್ಯ ಮತವನ್ನು ನೀಡಲೇಬೇಕು. ತದ ನಂತರ ಎಷ್ಟು ಬೇಕಾದರೂ ಮತ ಚಲಾಯಿಸಬಹುದು. ಈ ಕ್ಷೇತ್ರದಲ್ಲಿ ಒಟ್ಟು 10 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಒಂದು ನೋಟಾ ಚಿಹ್ನೆ ಇರುತ್ತದೆ. ಅಭ್ಯರ್ಥಿ, ನೋಟಾ ಮುಂದೆ ಇಂಗ್ಲಿಷ್ ಅಂಕಿ (1,2,3) ಗಳಲ್ಲಿ ಸಂಖ್ಯೆ ಬರೆಯಬೇಕು. ಕನ್ನಡದಲ್ಲಿ ಒಂದು, ಎರಡು ಎಂದು ಬರೆಯುವಂತಿಲ್ಲ’ ಎಂದು ವಿವರಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ ಮಾತನಾಡಿ, ‘ಜಿಲ್ಲೆಯ 13 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಮತಗಟ್ಟೆಗಳ ಆಯಾ ತಾಲ್ಲೂಕು ತಹಶೀಲ್ದಾರ್ ಕಚೇರಿಗಳು ಮಾಸ್ಟರಿಂಗ್ ಮತ್ತು ಡಿಮಾಸ್ಟರಿಂಗ್ ಕೇಂದ್ರಗಳಾಗಿರುತ್ತವೆ’ ಎಂದರು.

ಮತಗಟ್ಟೆ ಕೇಂದ್ರಗಳು: ಗುರುಮಠಕಲ್ ಸರ್ಕಾರಿ ಬಾಲಕರ ಪದವಿಪೂರ್ವ ಕಾಲೇಜು, ಯಾದಗಿರಿಯ ಸರ್ಕಾರಿ ಪದವಿಪೂರ್ವ ಕಾಲೇಜು ಹೊಸ ಕಟ್ಟಡ, ಯಾದಗಿರಿಯ ತಹಶೀಲ್ದಾರ್ ಕಾರ್ಯಾಲಯ, ದೋರನಹಳ್ಳಿಯ ಯುಕೆಪಿ ಕ್ಯಾಂಪ್‌ನ ಸರ್ಕಾರಿ ಪ್ರೌಢಶಾಲೆ, ಗೋಗಿ ಸರ್ಕಾರಿ ಪದವಿಪೂರ್ವ ಕಾಲೇಜು, ಶಹಾಪುರ ಮಿನಿವಿಧಾನಸೌಧ ತಹಶೀಲ್ದಾರ್ ಕಾರ್ಯಾಲಯದ ಎಡಭಾಗ, ಶಹಾಪುರ ಮಿನಿವಿಧಾನಸೌಧ ತಹಶೀಲ್ದಾರ್ ಕಾರ್ಯಾಲಯದ ಬಲಭಾಗ, ವಡಗೇರಾ ಗ್ರಾಮ ಪಂಚಾಯಿತಿ ಕಾರ್ಯಾಲಯ, ಕೆಂಭಾವಿ ಸರ್ಕಾರಿ ಪದವಿಪೂರ್ವ ಕಾಲೇಜು, ಸುರಪುರ ಮಿನಿವಿಧಾನಸೌಧ ತಹಶೀಲ್ದಾರ್ ಕಾರ್ಯಾಲಯದ ಬಲಭಾಗ, ಹುಣಸಗಿ ವಿಶೇಷ ತಹಶೀಲ್ದಾರ್ ಕಾರ್ಯಾಲಯ, ಕೊಡೇಕಲ್ ನಾಡಕಚೇರಿ, ಕಕ್ಕೇರಾ ನಾಡಕಚೇರಿ ಮತಗಟ್ಟೆ ಕೇಂದ್ರಗಳಾಗಿವೆ ಎಂದು ಮಾಹಿತಿ ನೀಡಿದರು.

‘ಸಂಪನ್ಮೂಲ ವ್ಯಕ್ತಿಗಳಾದ ಹಣಮಂತ ಎಸ್.ಪೂಜಾರಿ ಅವರು ಪವರ್‌ಪಾಯಿಂಟ್ ಪ್ರಸೆಂಟೇಶನ್ ಮೂಲಕ ತರಬೇತಿ ನೀಡಿ, ಒಂದು ಮತಗಟ್ಟೆಯಲ್ಲಿ ಪಿಆರ್‌ಒ ಮತ್ತು ಎಪಿಆರ್‌ಒ, ಇಬ್ಬರು ಮತಗಟ್ಟೆ ಅಧಿಕಾರಿ, ಒಬ್ಬರು ಮೈಕ್ರೊ ಅಬ್ಸರ್ವರ್, ಒಬ್ಬರು ವಿಡಿಯೊಗ್ರಾಫರ್ ಹಾಗೂ ಅಭ್ಯರ್ಥಿಗಳ ಏಜೆಂಟರು ಇರುತ್ತಾರೆ. ಮತದಾರರು ಮತದಾನ ಮಾಡಲು ಸಿದ್ಧಪಡಿಸಿರುವ ಅಂಕಣದಲ್ಲಿ ಮತದಾನ ಮಾಡಿ, ಮತಪತ್ರವನ್ನು ಮಡಚಿ ನಂತರ ಪಿಆರ್‌ಒ ಬಳಿ ಇರುವ ಮತಪೆಟ್ಟಿಗೆಯಲ್ಲಿ ಹಾಕಬೇಕು’ ಎಂದು ಹೇಳಿದರು.

ಸಹಾಯಕ ಆಯುಕ್ತ ಜಿ.ಎನ್. ಮಂಜುನಾಥ್, ಚುನಾವಣೆ ಶಾಖೆ ತಹಶೀಲ್ದಾರ್ ಸಂಗಮೇಶ ಜಿಡಗೆ, ಮತಗಟ್ಟೆ ಅಧ್ಯಕ್ಷಾಧಿಕಾರಿಗಳು ಹಾಗೂ ಮತಗಟ್ಟೆ ಸಹಾಯಕ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

**
ವಿಧಾನ ಪರಿಷತ್‌ಗೆ ಪ್ರಾಶಸ್ತ್ಯ ಆಧಾರಿತ ಚುನಾವಣೆ ನಡೆಯಲಿದೆ. ವಿಧಾನಸಭೆ ಚುನಾವಣೆಯಂತೆ ಈ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸುವುದಿಲ್ಲ
ಜೆ.ಮಂಜುನಾಥ್, ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT