ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಮಹಾರಾಜ: ಮೊದಲ ಆವೃತ್ತಿಯಲ್ಲೇ ಚಾಂಪಿಯನ್‌

Last Updated 2 ಮಾರ್ಚ್ 2022, 23:30 IST
ಅಕ್ಷರ ಗಾತ್ರ

ಮೊದಲ ಆವೃತ್ತಿಯಲ್ಲೇ ಚಾಂಪಿಯನ್‌. ನಂತರ ಟೂರ್ನಿಯುದ್ದಕ್ಕೂ ಆಧಿಪತ್ಯ. ಈಚೆಗೆ ಎರಡು ಆವೃತ್ತಿಗಳಲ್ಲಿ ನಿರಾಸೆ.

ದೇಶಿ ಕ್ರಿಕೆಟ್‌ನ ಮಹಾರಾಜ ಆಗಿರುವ ಮುಂಬೈ ತಂಡ ನಾಲ್ಕು ದಿನಗಳ ಟೂರ್ನಿಯಾದ ರಣಜಿಯಲ್ಲೂ ಅಮೋಘ ಸಾಧನೆ ಮಾಡಿದೆ. 41 ಬಾರಿ ಚಾಂಪಿಯನ್ ಅಗಿ ಮೆರೆದಿದೆ. ಈವರೆಗೆ 86 ಆವೃತ್ತಿಗಳಲ್ಲಿ ಟೂರ್ನಿ ನಡೆದಿದ್ದು ಐದು ಬಾರಿ ಮಾತ್ರ ತಂಡ ಫೈನಲ್‌ನಲ್ಲಿ ಸೋತಿದೆ. ಕರ್ನಾಟಕವೂ ಟೂರ್ನಿಯಲ್ಲಿ ಪಾರಮ್ಯ ಮರೆದಿದ್ದು ಅತಿ ಹೆಚ್ಚು ಚಾಂಪಿಯನ್ ಆದ ತಂಡಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

1934-35ರ ಮೊದಲ ಸಾಲಿನಲ್ಲೇ ಮುಂಬೈ ತಂಡ ಪ್ರಶಸ್ತಿ ಗಳಿಸಿತ್ತು. ಮುಂದಿನ ವರ್ಷವೂ ಪ್ರಶಸ್ತಿ ಈ ತಂಡದ ಮುಡಿಯನ್ನೇ ಅಲಂಕರಿಸಿತು. ನಂತರದ ಐದು ಆವೃತ್ತಿಗಳಲ್ಲಿ (1940–41ರ ವರೆಗೆ) ತಂಡಕ್ಕೆ ಪ್ರಶಸ್ತಿ ಗೆಲ್ಲಲು ಆಗಲಿಲ್ಲ. ಮುಂದಿನ ವರ್ಷ ಚೇತರಿಸಿಕೊಂಡು ಮೈಸೂರು ತಂಡವನ್ನು ಮಣಿಸಿ ಮತ್ತೆ ಮುನ್ನೆಲೆಗೆ ಬಂತು.

1956–57ರ ಆವೃತ್ತಿವರೆಗೆ ಆಗೊಮ್ಮೆ ಈಗೊಮ್ಮೆ ಚಾಂಪಿಯನ್ ಆಗುತ್ತಿದ್ದ ತಂಡ ನಂತರ ಬೃಹತ್ ಶಕ್ತಿಯಾಗಿ ಬೆಳೆಯಿತು. 1958–59ನೇ ಅವಧಿಯಿಂದ ಸತತ 15 ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡು ಸಂಭ್ರಮಿಸಿತು. ಈ ನಾಗಾಲೋಟಕ್ಕೆ ಕರ್ನಾಟಕ ತಡೆ ಹಾಕಿತು. ನಂತರ ಮುಂಬೈ ಪಾರಮ್ಯಕ್ಕೆ ಪೆಟ್ಟು ಬಿತ್ತು. ದೆಹಲಿ, ತಮಿಳುನಾಡು, ಹೈದರಾಬಾದ್‌, ಬೆಂಗಾಲ್ ಮಾತ್ರವಲ್ಲದೆ ಹರಿಯಾಣ, ಪಂಜಾಬ್‌ನಂಥ ತಂಡಗಳು ಕೂಡ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡವು.

ಮುಂಬೈ ತಂಡ ಆರು ಬಾರಿ ಸತತ ಎರಡು ಆವೃತ್ತಿಗಳಲ್ಲಿ ಚಾಂಪಿಯನ್‌ ಆಗಿದೆ. ಇದರಲ್ಲಿ ಒಂದು ಹ್ಯಾಟ್ರಿಕ್ ಕೂಡ ಒಳಗೊಂಡಿದೆ.

ಸುನಿಲ್ ಗಾವಸ್ಕರ್, ಪಾಲಿ ಉಮ್ರಿಗರ್‌, ದಿಲೀಪ್ ವೆಂಗಸರ್ಕಾರ್, ವಿಜಯ್‌ ಮರ್ಚಂಟ್‌, ಸಚಿನ್ ತೆಂಡೂಲ್ಕರ್‌, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ ಮುಂತಾದವರು ತಂಡದ ಜೈತ್ರಯಾತ್ರೆಯಲ್ಲಿ ಭಾಗಿಯಾಗಿ ಸರ್ಫರಾಜ್ ಖಾನ್ ಅವರಂಥ ಯುವ ಆಟಗಾರರು ಭವಿಷ್ಯದ ಭರವಸೆ ಎನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT