ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚೆಪಾಕ್ ಪಿಚ್‌ ಮರ್ಮ ತಿಳಿದ ಮುಂಬೈ’

ಚೆನ್ನೈ ಸೂಪರ್ ಕಿಂಗ್ಸ್‌ ತಂಡದ ಕೋಚ್‌ ಸ್ಟೀಫನ್ ಫ್ಲೆಮಿಂಗ್ ಅಭಿಮತ
Last Updated 8 ಮೇ 2019, 19:04 IST
ಅಕ್ಷರ ಗಾತ್ರ

ಚೆನ್ನೈ: ‘ಎದುರಾಳಿ ಮುಂಬೈ ಇಂಡಿಯನ್ಸ್ ತಂಡದವರು ಚೆಪಾಕ್‌ ಪಿಚ್‌ನ ಮರ್ಮವನ್ನು ಚೆನ್ನಾಗಿ ತಿಳಿದುಕೊಂಡಿದ್ದರು. ಹೀಗಾಗಿ ಸುಲಭವಾಗಿ ಗೆದ್ದು ಫೈನಲ್ ಪ್ರವೇಶಿಸಿದರು...’

ಮಂಗಳವಾರ ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಂಬೈ ಎದುರು ಆರು ವಿಕೆಟ್‌ಗಳಿಂದ ಸೋತ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್‌ನ ಕೋಚ್ ಸ್ಟೀಫನ್ ಫ್ಲೆಮಿಂಗ್ ಆಡಿದ ಮಾತುಗಳು ಇವು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆತಿಥೇಯರು ನಾಲ್ಕು ವಿಕೆಟ್‌ ಕಳೆದುಕೊಂಡು ಕೇವಲ 131 ರನ್ ಗಳಿಸಿತ್ತು. ಆರಂಭಿಕ ಆಟಗಾರರಾದ ಫಾಫ್ ಡುಪ್ಲೆಸಿ ಮತ್ತು ಶೇನ್‌ ವ್ಯಾಟ್ಸನ್‌ ಬೆನ್ನಲ್ಲೇ ಸುರೇಶ್‌ ರೈನಾ ಕೂಡ ಬೇಗನೇ ಡಗ್‌ ಔಟ್‌ಗೆ ವಾಪಸಾಗಿದ್ದರು. ಮುರಳಿ ವಿಜಯ್‌ (26), ಅಂಬಟಿ ರಾಯುಡು (42) ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ (37) ಅವರು ತಂಡದ ಮೊತ್ತ ಮೂರಂಕಿ ದಾಟಲು ನೆರವಾಗಿದ್ದರು.

ಗುರಿ ಬೆನ್ನತ್ತಿದ ಮುಂಬೈ 21 ರನ್‌ ಗಳಿಸುಷ್ಟರಲ್ಲಿ ನಾಯಕ ರೋಹಿತ್ ಶರ್ಮಾ (4) ಮತ್ತು ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ (8) ಅವರ ವಿಕೆಟ್ ಕಳೆದುಕೊಂಡಿತ್ತು. ಸೂರ್ಯಕುಮಾರ್ ಯಾದವ್ (71; 54 ಎಸೆತ, 10 ಬೌಂಡರಿ) ಅವರ ಅಜೇಯ ಅರ್ಧಶತಕದ ನೆರವಿನಿಂದ ತಂಡ ಸುಲಭ ಜಯ ಗಳಿಸಿತ್ತು.

ಸೂರ್ಯಕುಮಾರ್ ಮತ್ತು ಇಶಾನ್ ಕಿಶನ್‌ ಮೂರನೇ ವಿಕೆಟ್‌ಗೆ 80 ರನ್‌ಗಳ ಜೊತೆಯಾಟ ಆಡಿದ್ದರು. ತಂಡ 18.3 ಓವರ್‌ಗಳಲ್ಲಿ ಗೆಲುವಿನ ದಡ ಸೇರಿತ್ತು. ಈ ಮೂಲಕ ಐದನೇ ಬಾರಿ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿತ್ತು.

‘ಚೆಪಾಕ್‌ ಕ್ರೀಡಾಂಗಣದ ಪಿಚ್‌ಗೆ ಮುಂಬೈ ತಂಡ ಚೆನ್ನಾಗಿ ಹೊಂದಿಕೊಂಡಿದೆ. ಭರವಸೆಯಿಂದಲೇ ಕಣಕ್ಕೆ ಇಳಿದ ತಂಡ ಸಿಎಸ್‌ಕೆಯ ಮೇಲೆ ಸತತ ಒತ್ತಡ ಹೇರುವಲ್ಲಿ ಯಶಸ್ವಿಯಾಗಿತ್ತು. ಆಟದ ಎಲ್ಲ ವಿಭಾಗಗಳಲ್ಲೂ ಉತ್ತಮ ಸಾಮರ್ಥ್ಯ ಮೆರೆಯಿತು’ ಎಂದು ಫ್ಲೆಮಿಂಗ್ ಹೇಳಿದರು.

‘ಪವರ್ ಪ್ಲೇ ಅವಧಿಯಲ್ಲಿ ತಂಡ ಸತತವಾಗಿ ಹಿನ್ನಡೆ ಅನುಭವಿಸುತ್ತಿದೆ. ಆರನೇ ಓವರ್ ನಂತರ ತಂಡದ ಸಾಧನೆ ಚೆನ್ನಾಗಿದೆ. ಆದರೆ ಕ್ವಾಲಿಫೈಯರ್ ಪಂದ್ಯದಲ್ಲಿ ಈ ಅವಧಿಯಲ್ಲೂ ನಿರೀಕ್ಷಿತ ರನ್ ಗಳಿಸಲು ಆಗಲಿಲ್ಲ. ಎರಡನೇ ಕ್ವಾಲಿಫೈಯರ್‌ನಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT