ಫೈನಲ್‌ ಸನಿಹ ಕರ್ನಾಟಕ

ಬುಧವಾರ, ಮಾರ್ಚ್ 27, 2019
26 °C
ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಟೂರ್ನಿ: ಮಿಂಚಿದ ರೋಹನ್‌ ಕದಂ, ಮಯಂಕ್, ಕೌಶಿಕ್

ಫೈನಲ್‌ ಸನಿಹ ಕರ್ನಾಟಕ

Published:
Updated:
Prajavani

ಇಂದೋರ್‌: ಸಾಧಾರಣ ಮೊತ್ತ ಕಲೆ ಹಾಕಿದರೂ ಎದುರಾಳಿಗಳನ್ನು ಕಟ್ಟಿ ಹಾಕಿದ ಕರ್ನಾಟಕ ತಂಡದವರು ಮುಷ್ತಾಕ್ ಅಲಿ ಟ್ರೋಫಿ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಜಯ ಸಾಧಿಸಿದರು.

ಶನಿವಾರ ಇಲ್ಲಿ ನಡೆದ ಎರಡನೇ ಸೂಪರ್ ಲೀಗ್ ಪಂದ್ಯದಲ್ಲಿ ಉತ್ತರ ಪ್ರದೇಶವನ್ನು ಕರ್ನಾಟಕ 10 ರನ್‌ಗಳಿಂದ ಮಣಿಸಿತು.

ಆರಂಭಿಕ ಬ್ಯಾಟ್ಸ್‌ಮನ್ ರೋಹನ್ ಕದಂ ಮತ್ತು ಮೂರನೇ ಕ್ರಮಾಂಕದ ಮಯಂಕ್ ಅಗರವಾಲ್ ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ 149 ರನ್‌ ಕಲೆ ಹಾಕಿದ ಕರ್ನಾಟಕ ಎದುರಾಳಿ ತಂಡವನ್ನು 139 ರನ್‌ಗಳಿಗೆ ನಿಯಂತ್ರಿಸಿತು. ಈ ಮೂಲಕ ಸೂಪರ್‌ ಲೀಗ್‌ನಲ್ಲಿ ಸತತ ಎರಡನೇ ಗೆಲುವು ಸಾಧಿಸಿತು.

ಲೀಗ್ ಹಂತದ ಎಲ್ಲ ಪಂದ್ಯಗಳನ್ನು ಗೆದ್ದಿದ್ದ ಕರ್ನಾಟಕ ಶುಕ್ರವಾರ ನಡೆದಿದ್ದ ಮೊದಲ ಸೂಪರ್ ಲೀಗ್‌ ಪಂದ್ಯದಲ್ಲಿ ಮುಂಬೈಯನ್ನು ಮಣಿಸಿತ್ತು. ‘ಬಿ’ ಗುಂಪಿನಲ್ಲಿ ಇನ್ನು ಎರಡು ಪಂದ್ಯಗಳು ಉಳಿದಿವೆ. ಆದ್ದರಿಂದ ಮನೀಷ್ ಪಾಂಡೆ ಬಳಗದ ಫೈನಲ್ ಹಾದಿ ಸುಗಮವಾಗಿದೆ.

ಶನಿವಾರ ಟಾಸ್ ಗೆದ್ದ ಉತ್ತರ ಪ್ರದೇಶ ತಂಡ ಫೀಲ್ಡಿಂಗ್ ಆಯ್ದುಕೊಂಡಿತು. ಎರಡನೇ ಓವರ್‌ನಲ್ಲೇ ಬಿ.ಆರ್.ಶರತ್ ಅವರನ್ನು ವಾ‍ಪಸ್‌ ಕಳುಹಿಸಿ ತಂಡ ಸಂಭ್ರಮಿಸಿತು. ಆದರೆ ನಂತರ ರೋಹನ್ ಕದಂ ಮತ್ತು ಮಯಂಕ್ ಅಗರವಾಲ್‌ 60 ರನ್ ಸೇರಿಸಿದರು.

ಇವರಿಬ್ಬರು ಔಟಾದ ನಂತರ ಕರುಣ್ ನಾಯರ್‌, ಮನೀಷ್ ಪಾಂಡೆ ಮತ್ತು ಮನೋಜ್ ಭಾಂಡಗೆ ಬೌಲರ್‌ಗಳನ್ನು ದಂಡಿಸಿದರು. ಹೀಗಾಗಿ ಸ್ಪರ್ಧಾತ್ಮಕ ಮೊತ್ತ ಗಳಿಸಲು ಸಾಧ್ಯವಾಯಿತು.

ನಾಥ್, ಯಾದವ್‌ ಆಟದ ಸೊಬಗು: ಗುರಿ ಬೆನ್ನತ್ತಿದ ಉತ್ತರ ಪ್ರದೇಶದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಕೆಚ್ಚೆದೆಯಿಂದ ಆಡಿದರು. ಮೊದಲ ವಿಕೆಟ್‌ಗೆ ಅಕ್ಷದೀಪ್‌ ನಾಥ್‌ ಮತ್ತು ಸಮರ್ಥ್ ಸಿಂಗ್‌ 31 ರನ್ ಸೇರಿಸಿದರು. ಸಿಂಗ್ ವಾಪಸಾದ ನಂತರ ನಾಥ್ ಜೊತೆಗೂಡಿದ ಉಪೇಂದ್ರ ಯಾದವ್‌ 60 ರನ್‌ ಸೇರಿಸಿದರು.

ಈ ಜೊತೆಯಾಟ ಮುರಿದ ನಂತರ ಕರ್ನಾಟಕದ ಬೌಲರ್‌ಗಳು ಮೇಲುಗೈ ಸಾಧಿಸಿದರು. ಅಂತಿಮ ಓವರ್‌ಗಳಲ್ಲಿ ವಿ.ಕೌಶಿಕ್ ಮತ್ತು ವಿನಯಕುಮಾರ್ ಕರಾರುವಾಕ್ ಬೌಲಿಂಗ್ ಮಾಡಿ ಎದುರಾಳಿಗಳ ಜಯದ ಕನಸಿಗೆ ತಣ್ಣೀರೆರಚಿದರು.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !