ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಭಾರತ ರಾಜ್ಯಗಳಿಂದ ರಾಯಚೂರಿಗೆ ಲಗ್ಗೆ ಇಟ್ಟ ವ್ಯಾಪಾರಿಗಳು, ಅಗ್ಗದ ದರದ ಸೊಳ್ಳೆ ಪರದೆ

ನೆಮ್ಮದಿಯ ನಿದ್ರೆಗಾಗಿ ‘ಸೊಳ್ಳೆ ಪರದೆ ಗೂಡು’
Last Updated 2 ಏಪ್ರಿಲ್ 2018, 14:06 IST
ಅಕ್ಷರ ಗಾತ್ರ

ರಾಯಚೂರು: ನಿದ್ರೆಗೆ ಭಂಗ ತರುವ ಸೊಳ್ಳೆಗೆ ದಿಗ್ಬಂಧನ ಹಾಕುವುದಕ್ಕೆ ವಿನ್ಯಾಸಗೊಳಿಸಿರುವ ಸೊಳ್ಳೆ ಪರದೆ ಗೂಡುಗಳು ನಗರದ ಬೀದಿಗಳಲ್ಲಿ ಮಾರಾಟವಾಗುತ್ತಿದ್ದು, ಬೇಸಿಗೆಯಲ್ಲಿ ಬೇಡಿಕೆ ಹೆಚ್ಚಾಗಿದೆ.ಮನೆಯೊಳಗಿನ ಮಂಚದ ಸುತ್ತ ಅಥವಾ ಮಲಗುವ ಜಾಗದ ಸುತ್ತಲೂ ಸೊಳ್ಳೆ ಪರದೆ ಹಾಕಿಕೊಳ್ಳುವುದು ಸಾಮಾನ್ಯ. ಆದರೆ, ಯಾವ ಆಧಾರವಿಲ್ಲದೆ ಬಯಲಿನಲ್ಲೂ ಮಲಗಿ ನೆಮ್ಮದಿಯ ನಿದ್ದೆ ಮಾಡುವುದಕ್ಕೆ ಪರದೆ ಗೂಡುಗಳು ಅನುಕೂಲ. ವಿಶೇಷವಾಗಿ ವಿನ್ಯಾಸ ಮಾಡಿರುವ, ಸುಲಭವಾಗಿ ಮಡಿಕೆ ಮಾಡಿ ಇಡಬಹುದಾದ ಸೊಳ್ಳೆ ಪರದೆ ಗೂಡುಗಳನ್ನು ಉತ್ತರ ಭಾರತ ರಾಜ್ಯಗಳಿಂದ ಬಂದಿರುವ ಯುವಕರು ಅಲ್ಲಲ್ಲಿ ಮಾರಾಟ ಮಾಡುತ್ತಾ ನಿಂತಿರುವುದು ಗಮನ ಸೆಳೆಯುತ್ತದೆ.

ಬೀದಿಗಳಲ್ಲಿ ಮಾರಾಟ ಆಗುವ ಸೊಳ್ಳೆ ಪರದೆ ಗೂಡುಗಳು ಎರಡು ವಿಸ್ತಾರದಲ್ಲಿವೆ. ಬಡಕಲು ದೇಹದ ನಾಲ್ಕು ಜನರು ಹಾಗೂ ಇಬ್ಬರು ಮಲಗಿಕೊಳ್ಳಲು ಅನುವಾಗುವ ಪ್ರತ್ಯೇಕ ಪರದೆಗೂಡುಗಳಿವೆ. ನಾಲ್ಕು ಜನರು ಮಲಗಲು ಸಾಧ್ಯವಾಗುವ ಪರದೆ ವಿಸ್ತೀರ್ಣ 6.5/6.5 ಅಡಿ. ಇಬ್ಬರು ಮಲಗುವುದಕ್ಕೆ ಸಾಧ್ಯವಾಗುವ ಸೊಳ್ಳೆ ಪರದೆ ವಿಸ್ತೀರ್ಣ 7/3 ಅಡಿ.

ನಗರದ ಅಂಗಡಿಗಳಲ್ಲಿ ಚಿಕ್ಕಮಕ್ಕಳಿಗೆ ಬಳಸುವ ಸೊಳ್ಳೆ ಪರದೆ ಗೂಡುಗಳು ಸಿಗುತ್ತವೆ. ಎಲ್ಲರೂ ಸೊಳ್ಳೆ ಕಾಟದಿಂದ ಪಾರಾಗಿ ನೆಮ್ಮದಿಯಿಂದ ನಿದ್ರೆ ಮಾಡಬೇಕಾದರೆ ಪರದೆ ಗೂಡುಗಳು ಅನಿವಾರ್ಯ. ದೊಡ್ಡ ಗಾತ್ರದ ಸೊಳ್ಳೆ ಪರದೆ ಗೂಡುಗಳು ನಗರದ ಅಂಗಡಿಗಳು ಸಿಗುವುದಿಲ್ಲ.ಸೊಳ್ಳೆಕಾಟ ಎಲ್ಲ ಕಡೆಗಳಲ್ಲೂ ಇದೆ. ಆದರೆ ರಾಯಚೂರು ನಗರದಲ್ಲಿ ಸೊಳ್ಳೆ ಕಾಟ ವಿಪರೀತವಾಗಿದೆ. ಸೊಳ್ಳೆ ಉತ್ಪತ್ತಿ ತಾಣಗಳು ಯತ್ತೇಚ್ಚವಾಗಿರುವುದು ಇದಕ್ಕೆ ಕಾರಣ. ಪ್ರಮುಖವಾಗಿ ನಗರ ಮಧ್ಯೆದಲ್ಲಿರುವ ಮಾವಿನಕೆರೆಯು ಸೊಳ್ಳೆಯ ಸಂತಾನವನ್ನು ಪೋಷಿಸು ತ್ತಿದೆ. ಕೆರೆಯಿಂದ ಹೊರಬರುವ ಸೊಳ್ಳೆಯ ಕಾಟಕ್ಕೆ ಸುತ್ತಮುತ್ತಲಿನ ಜನವಸತಿಗಳು ನಲುಗುತ್ತಿವೆ. ತೋಟದ ಮನೆ, ಮನೆ ಅಂಗಳ ಹಾಗೂ ಮನೆ ಮಾಳಿಗೆಗಳ ಮೇಲೆ ತಂಪಾದ ಗಾಳಿ ಅರಿಸಿಕೊಂಡು ಮಲಗುವುದಕ್ಕೆ ಸೊಳ್ಳೆ ಪರದೆ ಗೂಡುಗಳು ಅನುಕೂಲವಾಗುತ್ತವೆ.

ನಗರದಾದ್ಯಂತ ರಾಜಕಾಲುವೆ ಹಾಗೂ ಚರಂಡಿಗಳು ಹರಿಯುವುದಿಲ್ಲ. ಹೀಗಾಗಿ ಸೊಳ್ಳೆ ಉತ್ಪತ್ತಿ ನಿರಂತರ ವಾಗಿದೆ. ರಾಯಚೂರು ನಗರಸಭೆಯು ವಾಸ್ತವದಲ್ಲಿ ಫಾಗಿಂಗ್‌ ಮಾಡಿಸುತ್ತಿಲ್ಲ. ಆದರೆ ಫಾಗಿಂಗ್‌ ನಿರಂತರವಾಗಿ ನಡೆಯುತ್ತಿದೆ ಎಂದು ಅಧಿಕಾರಿಗಳು ಕಡತಗಳನ್ನು ಹಾಗೂ ಬಿಲ್‌ ಪಾವತಿ ಮಾಡಿದ್ದನ್ನು ತೋರಿಸುತ್ತಾರೆ! ಸೊಳ್ಳೆ ಕಾಟಕ್ಕೆ ಬೇಸತ್ತು ನಗರದಲ್ಲಿ ಕೆಲವು ಶ್ರೀಮಂತರು ಇಡೀ ಮನೆಗೆ ಸೊಳ್ಳೆ ಪರದೆ ಹಾಕಿಸಿಕೊಂಡಿದ್ದಾರೆ. ಮನೆಬಾಗಿಲು ಹಾಗೂ ಮನೆಕಿಟಕಿಗಳಿಗೆ ಸೊಳ್ಳೆ ಜಾಲರಿ ಅಳವಡಿಸಿ ಸೊಳ್ಳೆ ತಾಪತ್ರಯದಿಂದ ಪಾರಾಗುವ ಉಪಾಯ ಅನೇಕರು ಮಾಡಿಕೊಂಡಿದ್ದಾರೆ.ಬೇಸಿಗೆಯಲ್ಲಿ ವಿದ್ಯುತ್‌ ಸಮಸ್ಯೆ ಆಗುವುದರಿಂದ ಸಹಜವಾಗಿ ಜನರು ಮನೆ ಮಾಳಿಗೆ ಮೇಲೆ ಮಲಗಿಕೊಳ್ಳುತ್ತಾರೆ. ಹೊರಗೆ ನೆಮ್ಮದಿಯಿಂದ ಮಲಗಿಕೊಳ್ಳಲು ಈ ಸೊಳ್ಳೆ ಪರದೆ ಗೂಡುಗಳು ನೆರವಾಗುತ್ತವೆ.

‘ಸೊಳ್ಳೆ ಪರದೆ ಗೂಡುಗಳಿಗೆ ಇಲ್ಲಿನ ಜನರು ಕನ್ನಡದಲ್ಲಿ ‘ಡಬ್ಬಿ’ ಎಂದು ಕರೆಯುತ್ತಾರೆ. ರಾಯಚೂರು ನಗರ ಹಾಗೂ ತಾಲ್ಲೂಕು ಕೇಂದ್ರಗಳಿಗೂ ಹೋಗಿ ಮಾರಾಟ ಮಾಡುತ್ತೇವೆ. ದೆಹಲಿಯಿಂದ ಒಂಭತ್ತು ಜನರು ಬಂದಿದ್ದೇವೆ. ಒಂದು ದಿನಕ್ಕೆ ಐದಾರು ಮಾರಾಟ ಆಗುತ್ತವೆ. ಮತ್ತೆ ಬೇಕಾದರೆ ದೆಹಲಿಯಿಂದ ತರಿಸಿಕೊಳ್ಳುತ್ತೇವೆ. ಗೂಡ್ಸ್‌ ಟ್ರಾನ್ಸ್‌ಪೋರ್ಟ್‌ ಮೂಲಕ ಬಾಕ್ಸ್‌ ಹಾಕಿ ಕಳುಹಿಸುತ್ತಾರೆ’ ಎಂದು ಜಿಲ್ಲಾ ಕ್ರೀಡಾಂಗಣದ ಎದುರು ಬೀದಿಯಲ್ಲಿ ಸೊಳ್ಳೆ ಪರದೆ ಮಾರಾಟ ಮಾಡುತ್ತಿದ್ದ ದೆಹಲಿಯ ಸೊಹೆಲ್‌ಖಾನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರತಿ ತಿಂಗಳಿನ ಆರಂಭದಲ್ಲಿ ಪರದೆ ಗೂಡು ಹೆಚ್ಚು ಮಾರಾಟ ಆಗುತ್ತವೆ. ಸಂಬಳ ಪಡೆಯುವ ನೌಕರರು ವಿಚಾರಿಸಿ, ಖರೀದಿಸುತ್ತಾರೆ. ಆದರೆ ತಿಂಗಳಿನ ಕೊನೆಯ ವಾರ, ವ್ಯಾಪಾರವಿಲ್ಲದೆ ಊಟಕ್ಕೂ ತಾಪತ್ರಯ ಅನುಭಸಬೇಕಾಗುತ್ತದೆ. ಮಾನ್ವಿ, ಸಿಂಧನೂರು ಕಡೆಗೂ ಹೋಗಿ ಮಾರಾಟ ಮಾಡಿಕೊಂಡು ಬರುತ್ತೇವೆ. ರಾಯಚೂರು ನಗರದಲ್ಲಿ ರೂಮ್‌ ಬಾಡಿಗೆ ಮಾಡಿಕೊಂಡಿದ್ದು, ವರ್ಷಪೂರ್ತಿ ಸೊಳ್ಳೆ ಪರದೆ ವ್ಯಾಪಾರವನ್ನೆ ಮಾಡುತ್ತೇವೆ’ ಎಂದರು.

ಆನ್‌ಲೈನ್‌ನಲ್ಲಿ ಲಭ್ಯ

ಫ್ಲಿಪ್‌ಕಾರ್ಟ್‌ನಂತರ ಆನ್‌ಲೈನ್‌ ವ್ಯಾಪಾರಿ ತಾಣಗಳಲ್ಲಿ ಪರದೆ ಗೂಡುಗಳು ಮಾರಾಟಕ್ಕೆ ಸಿಗುತ್ತವೆ. ಆದರೆ ನಗರದ ಬೀದಿಗಳಲ್ಲಿ ಮಾರಾಟ ಮಾಡುವ ಗೂಡುಗಳಿಗಿಂತ ಸ್ವಲ್ಪ ಹೆಚ್ಚಿನ ಮೊತ್ತವನ್ನು ಅನ್‌ಲೈನ್‌ನಲ್ಲಿ ಸಿಗುವ ಪರದೆಗಳಿಗೆ ಕೊಡಬೇಕಾಗುತ್ತದೆ.

ದುಬಾರಿ ಏನಲ್ಲ!

ಬೀದಿಗಳಲ್ಲಿ ಮಾರಾಟ ಮಾಡುವ ಸೊಳ್ಳೆ ಪರಧೆ ಗೂಡುಗಳ ದರ ದುಬಾರಿಯಿಲ್ಲ. ದರ ಎಷ್ಟೇ ಹೇಳಿದರೂ ಜನರು ಚೌಕಾಸಿ ಮಾಡುವುದನ್ನು ಬಿಡುವುದಿಲ್ಲ ಎನ್ನುವುದು ವ್ಯಾಪಾರಿಗಳು ಅನುಭವ.ನಾಲ್ಕು ಜನರು ಮಲಗಬಹುದಾದ ಪರಧೆ ಗೂಡಿಗೆ ₹600 ಹಾಗೂ ಇಬ್ಬರು ಮಲಗಬಹುದಾಗ ಗೂಡಿಗೆ ₹400. ವ್ಯಾಪಾರ ಆರಂಭಿಸುವ (ಬೊಣಗಿ) ಸಂದರ್ಭದಲ್ಲಿ ಇನ್ನೂ ಸ್ವಲ್ಪ ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಾರೆ.

**

ರಾಯಚೂರು ಜಿಲ್ಲೆಯಲ್ಲಿ ಸೊಳ್ಳೆ ಸಮಸ್ಯೆ ವಿಪರೀತ ಇರುವುದರಿಂದ ‘ಸೊಳ್ಳೆ ಪರದೆ ಗೂಡು’ಗಳನ್ನು ಜನರು ಖರೀದಿಸುತ್ತಾರೆ – ಸೊಹೆಲ್‌ಖಾನ್‌, ಸೊಳ್ಳೆ ಪರದೆ ವ್ಯಾಪಾರಿ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT