ಮಂಗಳವಾರ, ಜೂನ್ 22, 2021
29 °C
ಸಿಪಿಎಲ್‌ ಆರಂಭ: ಕೆರಿಬಿಯನ್‌ ನಾಡಿನಲ್ಲಿ ಕ್ರಿಕೆಟ್‌ ಕಲರವ

ರಶೀದ್‌, ನಾರಾಯಣ್‌‌ ಆಲ್‌ರೌಂಡ್‌ ಆಟ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತರೋಬಾ, ವೆಸ್ಟ್‌ ಇಂಡೀಸ್‌: ಸುನಿಲ್‌ ನಾರಾಯಣ್‌‌ ಹಾಗೂ ರಶೀದ್ ಖಾನ್ ಅವರು ಖಾಲಿ ಕ್ರೀಡಾಂಗಣದಲ್ಲಿ‌ ಆಲ್‌ರೌಂಡ್‌ ಆಟದ ಮೂಲಕ ಮಿಂಚಿದರು. ಇವರಿಬ್ಬರ ಆಟದ ನೆರವಿನಿಂದ ಮಂಗಳವಾರ ಆರಂಭವಾದ ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ (ಸಿಪಿಎಲ್‌) ಕ್ರಿಕೆಟ್‌ ಟೂರ್ನಿಯಲ್ಲಿ ಟ್ರಿನ್‌ಬ್ಯಾಗೊ ನೈಟ್ ರೈಡರ್ಸ್‌ ಹಾಗೂ ಬಾರ್ಬಡೀಸ್‌ ಟ್ರೈಡೆಂಟ್ಸ್‌ ತಂಡಗಳು ಶುಭಾರಂಭ ಮಾಡಿದವು.

ಮೊದಲ ಪಂದ್ಯದಲ್ಲಿ ಟ್ರಿನ್‌ಬ್ಯಾಗೊ ನೈಟ್‌ ರೈಡರ್ಸ್‌ (ಟಿಕೆಆರ್‌) ತಂಡವು ನಾಲ್ಕು ವಿಕೆಟ್‌ಗಳಿಂದ ಗಯಾನ ಅಮೆಜಾನ್‌ ವಾರಿಯರ್ಸ್‌ ಎದುರು ಗೆಲುವಿನ ನಗೆ ಬೀರಿತು. ಮತ್ತೊಂದು ಹಣಾಹಣಿಯಲ್ಲಿ ಬಾರ್ಬಡೀಸ್‌ ಟ್ರೈಡೆಂಟ್ಸ್‌ ತಂಡ ಆರು ರನ್‌ಗಳಿಂದ ಸೇಂಟ್‌ ಕಿಟ್ಸ್‌ ಆ್ಯಂಡ್‌ ನೆವಿಸ್‌ ಪೆಟ್ರಿಯೋಟ್ಸ್‌ ತಂಡವನ್ನು ಮಣಿಸಿತು. ಎರಡೂ ಪಂದ್ಯಗಳು ಬ್ರಯಾನ್‌ ಲಾರಾ ಅಕಾಡೆಮಿ ಕ್ರೀಡಾಂಗಣದಲ್ಲಿ ಆಯೋಜನೆಯಾಗಿದ್ದವು.

ಮಳೆಯಿಂದಾಗಿ 17 ಓವರ್‌ಗಳಿಗೆ ಕಡಿತಗೊಂಡ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಗಯಾನ ವಾರಿಯರ್ಸ್,‌ ಶಿಮ್ರಾನ್‌ ಹೆಟ್ಮೆಯರ್ ಅವರ ಅರ್ಧಶತಕದ‌ (ಔಟಾಗದೆ 63, 44 ಎಸೆತ) ಬಲದಿಂದ 5 ವಿಕೆಟ್‌ ಕಳೆದುಕೊಂಡು 144 ರನ್‌ ಕಲೆಹಾಕಿತು. ರಾಸ್‌ ಟೇಲರ್‌ (33) ಕಾಣಿಕೆ ನೀಡಿದರು.

ಗುರಿ ಬೆನ್ನತ್ತಿದ ಟ್ರಿನ್‌ಬ್ಯಾಗೊ ಕೊನೆಯ ಓವರ್‌ನಲ್ಲಿ ಗೆಲುವಿನ ದಡ ತಲುಪಿತು. ತಂಡದ ನಾರಾಯಣ್ ಅರ್ಧಶತಕ (50, 28 ಎಸೆತ, 2 ಬೌಂಡರಿ, 4 ಸಿಕ್ಸರ್‌) ಬಾರಿಸಿದರು. ಶಿಸ್ತಿನ ದಾಳಿ ಸಂಘಟಿಸಿ ಎರಡು (19ಕ್ಕೆ 2) ವಿಕೆಟ್‌ ಕೂಡ ಕಿತ್ತರು.

ಮತ್ತೊಂದು ಪಂದ್ಯದಲ್ಲಿ ಮಿಚೆಲ್‌ ಸ್ಯಾಂಟನರ್‌‌ (20 ರನ್‌,  18ಕ್ಕೆ 2 ವಿಕೆಟ್‌‌) ಹಾಗೂ ರಶೀದ್‌ ಖಾನ್‌ (ಔಟಾಗದೆ 26 ರನ್‌, 27ಕ್ಕೆ 2 ವಿಕೆಟ್‌) ಅವರು ಹಾಲಿ ಚಾಂಪಿಯನ್‌ ಬಾರ್ಬಡೀಸ್‌ ಟ್ರೈಡೆಂಟ್ಸ್‌ ತಂಡದ ಗೆಲುವಿಗೆ ಕಾರಣರಾದರು. ಮೊದಲು ಬ್ಯಾಟ್‌ ಮಾಡಿದ ಬಾರ್ಬಡೀಸ್‌ 20 ಓವರ್‌ಗಳಲ್ಲಿ 153 ರನ್‌ ಕಲೆಹಾಕಿತು. ನಾಯಕ ಜೇಸನ್‌ ಹೋಲ್ಡರ್‌ (38, 22 ಎ, 2 ಬೌಂ, 3 ಸಿ.) ಹಾಗೂ ಕೈಲ್‌ ಮಯರ್ಸ್‌ (37, 20 ಎ, 2 ಬೌಂ, 3 ಸಿ.) ತಂಡದ ಪರ ಬ್ಯಾಟಿಂಗ್‌ನಲ್ಲಿ ಮಿಂಚಿದರು.

ಎದುರಾಳಿ ಸೇಂಟ್‌ ಕಿಟ್ಸ್‌ ತಂಡವು ಪ್ರಬಲ ಪೈಪೋಟಿ ನೀಡಿದರೂ ಸೋಲು ತಪ್ಪಿಸಿಕೊಳ್ಳಲಾಗಲಿಲ್ಲ.

ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌, ಕೋವಿಡ್‌–19 ಕಾಲದಲ್ಲಿ ಆರಂಭಗೊಂಡ ಮೊದಲ ಪ್ರಮುಖ ಟ್ವೆಂಟಿ–20 ಲೀಗ್‌ ಎನಿಸಿಕೊಂಡಿತು. 

ಸಂಕ್ಷಿಪ್ತ ಸ್ಕೋರ್‌: ಗಯಾನ ಅಮೆಜಾನ್‌ ವಾರಿಯರ್ಸ್: 17 ಓವರ್‌ಗಳಲ್ಲಿ 5 ವಿಕೆಟ್‌ಗೆ 144 (ಶಿಮ್ರಾನ್‌ ಹೆಟ್ಮೆಯರ್‌ ಔಟಾಗದೆ 63, ರಾಸ್‌ ಟೇಲರ್‌ 33, ನಿಕೋಲಸ್‌ ಪೂರನ್‌ 18; ಸುನಿಲ್‌ ನಾರಾಯಣ್‌ 19ಕ್ಕೆ 2, ಅಲಿ ಖಾನ್‌ 21ಕ್ಕೆ 1, ಜೇಡನ್ ಸೀಲ್ಸ್‌ 24ಕ್ಕೆ 1). ಟ್ರಿನ್‌ಬ್ಯಾಗೊ ನೈಟ್‌ ರೈಡರ್ಸ್: 16.4 ಓವರ್‌ಗಳಲ್ಲಿ 6 ವಿಕೆಟ್‌ಗೆ 147 (ಸುನಿಲ್‌ ನಾರಾಯಣ್‌ 50, ಡರೆನ್‌ ಬ್ರಾವೊ 30, ಲೆಂಡ್ಲ್‌ ಸಿಮನ್ಸ್ 17; ನವೀನ್‌ ಉಲ್‌ ಹಕ್‌ 21ಕ್ಕೆ 2; ಇಮ್ರಾನ್‌ ತಾಹೀರ್‌ 40ಕ್ಕೆ 2). ಫಲಿತಾಂಶ: ಟ್ರಿನ್‌ಬ್ಯಾಗೊ ನೈಟ್‌ ರೈಡರ್ಸ್‌ ತಂಡಕ್ಕೆ 4 ವಿಕೆಟ್‌ಗಳ ಗೆಲುವು.

ಬಾರ್ಬಡೀಸ್‌ ಟ್ರೈಡೆಂಟ್ಸ್:‌ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 153 (ಜೇಸನ್‌ ಹೋಲ್ಡರ್‌ 38, ಕೈಲ್‌ ಮಯರ್ಸ್ 37, ಮಿಚೆಲ್‌ ಸ್ಯಾಂಟನರ್‌ 20, ರಶೀದ್‌ ಖಾನ್‌ 26; ಶೆಲ್ಡನ್‌ ಕಾಟ್ರೆಲ್‌ 16ಕ್ಕೆ 2, ಸೋಹೈಲ್‌ ತನ್ವೀರ್‌ 25ಕ್ಕೆ 2, ರಯಾತ್‌ ಎಮ್ರಿತ್‌ 16ಕ್ಕೆ 2). ಸೇಂಟ್‌ ಕಿಟ್ಸ್ ಆ್ಯಂಡ್‌ ನೆವಿಸ್‌ ಪೆಟ್ರಿಯೋಟ್ಸ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 147 (ಜೋಷುವಾ ಡ ಸಿಲ್ವಾ 41, ಬೆನ್‌ ಡಂಕ್‌ 34, ಕ್ರಿಸ್‌ ಲಿನ್‌ 19; ಮಿಚೆಲ್‌ ಸ್ಯಾಂಟನರ್‌ 18ಕ್ಕೆ 2, ರಶೀದ್‌ ಖಾನ್‌ 27ಕ್ಕೆ 2): ಫಲಿತಾಂಶ: ಬಾರ್ಬಡೀಸ್‌ ಟ್ರೈಡೆಂಟ್ಸ್‌ಗೆ 6 ರನ್‌ಗಳ ಜಯ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು