ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಂದರ್ ಸಿಂಗ್, ಚೇತನ್ ಶರ್ಮಾ ಅರ್ಜಿ

ರಾಷ್ಟ್ರೀಯ ಕ್ರಿಕೆಟ್ ಆಯ್ಕೆ ಸಮಿತಿ ಸದಸ್ಯರ ಸ್ಥಾನಗಳಿಗೆ ಪೈಪೋಟಿ
Last Updated 15 ನವೆಂಬರ್ 2020, 16:22 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯಲ್ಲಿ ತೆರವಾಗಿರುವ ಸದಸ್ಯ ಸ್ಥಾನಗಳಿಗಾಗಿ ಖ್ಯಾತನಾಮ ಮಾಜಿ ಕ್ರಿಕೆಟಿಗರು ಅರ್ಜಿ ಸಲ್ಲಿಸಿದ್ದಾರೆ.

ಅದರಲ್ಲಿ ಸ್ಪಿನ್ನರ್ ಮಣಿಂದರ್ ಸಿಂಗ್, ಮಧ್ಯಮವೇಗಿ ಚೇತನ್ ಶರ್ಮಾ ಮತ್ತು ಶಿವ ಸುಂದರ್ ದಾಸ್ ಪ್ರಮುಖರಾಗಿದ್ದಾರೆ.

ಪಶ್ಚಿಮ ವಲಯದಿಂದ ಅಜಿತ್ ಅಗರಕರ್ ಅವರು ಕೂಡ ಸದಸ್ಯ ಸ್ಥಾನಕ್ಕೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಈ ಹಿಂದೆ ಅವರು ಸಲ್ಲಿಸಿದ್ದಾಗ ಆಯ್ಕೆಯಾಗಿರಲಿಲ್ಲ. ಈ ಕುರಿತು ಪ್ರತಿಕ್ರಿಯೆಗಾಗಿ ಅವರನ್ನು ಸಂಪರ್ಕಿಸಿದಾಗ ಲಭ್ಯರಾಗಲಿಲ್ಲ.

ಈ ಬಾರಿ ಮರಳಿ ಅವರು ಅರ್ಜಿ ಹಾಕಿದರೆ ಅನುಭವದ ಆಧಾರದಲ್ಲಿ ಸಮಿತಿಯ ಮುಖ್ಯಸ್ಥ ಸ್ಥಾನಕ್ಕೇರುವ ಸಾಧ್ಯತೆ ಇದೆ. 191 ಅಂತರರಾಷ್ಟ್ರೀಯ ಏಕದಿನ, 26 ಟೆಸ್ಟ್ ಮತ್ತು ನಾಲ್ಕು ಟಿ20 ಪಂದ್ಯಗಳಲ್ಲಿ ಆಡಿದ ಅನುಭವಿಯಾಗಿದ್ದಾರೆ. ಸದ್ಯ ಮುಖ್ಯಸ್ಥರಾಗಿರುವ ದಕ್ಷಿಣ ವಲಯದ ಸುನೀಲ್ ಜೋಶಿ ಒಟ್ಟು 84 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ನಿವೃತ್ತ ನ್ಯಾಯಮೂರ್ತಿ ಆರ್‌.ಎಂ. ಲೋಧಾ ಸಮಿತಿಯ ಶಿಫಾರಸ್ಸುಗಳ ಅನ್ವಯ ಜಾರಿಯಾಗಿರುವ ನಿಯಮಾವಳಿಯ ಪ್ರಕಾರ ಅನುಭವಕ್ಕೆ ಆದ್ಯತೆ ನೀಡಬೇಕಾಗುತ್ತದೆ.

’ಸಮಿತಿಯ ಸದಸ್ಯ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಸಾಮಾನ್ಯ ಸದಸ್ಯನಾಗಿ ಕಾರ್ಯನಿರ್ವಹಿಸಲು ನನಗೆ ಯಾವುದೇ ಹಿಂಜರಿಕೆ ಇಲ್ಲ. ಭಾರತ ಕ್ರಿಕೆಟ್‌ಗೆ ಸೇವೆ ಸಲ್ಲಿಸುವುದು ಮುಖ್ಯ. ದಿಗ್ಗಜ ಆಟಗಾರರಾದ ಸುನೀಲ್ ಗಾವಸ್ಕರ್, ಕಪಿಲ್ ದೇವ್, ದಿಲೀಪ್ ವೆಂಗಸರ್ಕಾರ್ ಅವರೊಂದಿಗೆ ಭಾರತ ತಂಡದಲ್ಲಿ ಆಡಿದ್ದೇನೆ. ಅವರೆಲ್ಲರಿಂದಲೂ ಕಲಿತದ್ದು ಅಪಾರ‘ ಎಂದು ಉತ್ತರ ವಲಯದಿಂದ ಅರ್ಜಿ ಹಾಕಿರುವ ಚೇತನ್ ಶರ್ಮಾ ಹೇಳಿದ್ದಾರೆ. ಅವರು 1987ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು.

ಎಡಗೈ ಸ್ಪಿನ್ನರ್ ಮಣಿಂದರ್ ಸಿಂಗ್ ಕೂಡ ಅರ್ಜಿ ಹಾಕಿದ್ದಾರೆ. ಅವರು 35 ಟೆಸ್ಟ್ ಮತ್ತು 59 ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.

’ಹೌದು; ನಾನು ಜನವರಿಯಲ್ಲಿಯೂ ಅರ್ಜಿ ಹಾಕಿದ್ದೆ. ಈ ಸಲವೂ ಹಾಕಿದ್ದೇನೆ. ಒಂದೊಮ್ಮೆ ಅವಕಾಶ ಲಭಿಸಿದರೆ, ಉತ್ತಮವಾಗಿ ಕಾರ್ಯನಿರ್ವಹಿಸುತ್ತೇನೆ‘ ಎಂದು ಮಣಿಂದರ್ ಹೇಳಿದ್ದಾರೆ.

ಪೂರ್ವ ವಲಯದಿಂದ ಶಿವಸುಂದರ್ ದಾಸ್ ಮತ್ತು ರಣದೇವ್ ಬೋಸ್ ಅವರೂ ಅರ್ಜಿ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT