ಭಾನುವಾರ, ಅಕ್ಟೋಬರ್ 25, 2020
21 °C

ನೀತು ಡೇವಿಡ್ ಮಹಿಳಾ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥೆ?

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪ್ರತಿಭಾಶಾಲಿ ಎಡಗೈ ಸ್ಪಿನ್ನರ್ ನೀತು ಡೇವಿಡ್ ಅವರು ಭಾರತ ಮಹಿಳಾ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥೆಯಾಗುವ ಸಾಧ್ಯತೆಗಳು ನಿಚ್ಚಳವಾಗಿವೆ. 

ಹೇಮಲತಾ ಕಲಾ ಅವರು ಈಗ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಅವರ ನಾಲ್ಕು ವರ್ಷಗಳ ಅವಧಿ ಮಾರ್ಚ್ ತಿಂಗಳಲ್ಲಿ ಮುಕ್ತಾಯಗೊಂಡಿದೆ. ಸುಧಾ ಶಾ, ಅಂಜಲಿ ಪೆಂದಾರ್ಕರ್, ಶಶಿ ಗುಪ್ತಾ ಮತ್ತು ಲೋಪಮುದ್ರ ಬ್ಯಾನರ್ಜಿ ಸದಸ್ಯರಾಗಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ–20 ವಿಶ್ವಕಪ್‌ಗೆ ತಂಡವನ್ನು ಆ ಸಮಿತಿ ಆರಿಸಿತ್ತು. ಅದರ ನಂತರ ಕೋವಿಡ್‌–19ರಿಂದಾಗಿ ಕ್ರಿಕೆಟ್ ಚಟುವಟಿಕೆ ಸ್ಥಗಿತಗೊಂಡಿತ್ತು. ಮುಂದಿನ ಸಮಿತಿಯ ಅಯ್ಕೆ ಪ್ರಕ್ರಿಯೆ ಆರಂಭಗೊಂಡಿದ್ದು ಮುಖ್ಯಸ್ಥರ ಸ್ಥಾನಕ್ಕೆ ನೀತು ಹೆಸರು ಮುನ್ನೆಲೆಯಲ್ಲಿದೆ. ‌‌‌

ಹೊಸ ಸಮಿತಿ ರಚನೆಗೆ ತಡ ಮಾಡುತ್ತಿರುವುದಕ್ಕೆ ಬಿಸಿಸಿಐ ವಿರುದ್ಧ ಅನೇಕರು ಟೀಕೆ ವ್ಯಕ್ತಪಡಿಸಿದ್ದರು. ಭಾರತ ಮಹಿಳಾ ತಂಡವು ಯುಎಇಯಲ್ಲಿ ನಡೆಯಲಿರುವ ಚಾಲೆಂಜರ್ ಸೀರಿಸ್‌ನಲ್ಲಿ ಪಾಲ್ಗೊಳ್ಳಲಿದೆ. ಅದಕ್ಕೂ ಮೊದಲು ಬಿಸಿಸಿಐ ಆಯ್ಕೆ ಸಮಿತಿಯನ್ನು ರಚಿಸಬೇಕಾಗಿದೆ. 

ಏಕದಿನ ಕ್ರಿಕೆಟ್‌ನಲ್ಲಿ ದೊಡ್ಡ ಹೆಸರು ಮಾಡಿದ್ದ ಎಡಗೈ ಸ್ಪಿನ್ನರ್ ನೀತು ಡೇವಿಡ್ ಭಾರತದ ಪರ ಅತಿ ಹೆಚ್ಚು ವಿಕೆಟ್ ಗಳಿಸಿದ ಆಟಗಾರ್ತಿ ಎಂದೆನಿಸಿಕೊಂಡಿದ್ದರು. ನಂತರ ಈ ದಾಖಲೆ ಮಧ್ಯಮ ವೇಗಿ ಜೂಲನ್ ಗೋಸ್ವಾಮಿ ಅವರ ಹೆಸರಿಗೆ ಸೇರಿತು. 97 ‍ಪಂದ್ಯಗಳನ್ನು ಆಡಿರುವ ನೀತು ಡೇವಿಡ್ 141 ವಿಕೆಟ್ ಉರುಳಿಸಿದ್ದಾರೆ.  

ಟೆಸ್ಟ್ ಪಂದ್ಯವೊಂದರಲ್ಲಿ 53ಕ್ಕೆ8 ವಿಕೆಟ್ ಅವರ ಗರಿಷ್ಠ ಸಾಧನೆಯಾಗಿದೆ. 10 ಪಂದ್ಯಗಳಲ್ಲಿ ಅವರು 41 ವಿಕೆಟ್ ಪಡೆದಿದ್ದಾರೆ. 2008ರಲ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.  

‘ಭಾರತ ಮಹಿಳಾ ಕ್ರಿಕೆಟ್‌ಗೆ ನೀತು ಡೇವಿಡ್ ಅಪಾರ ಕಾಣಿಕೆ ನೀಡಿದ್ದಾರೆ. ಅವರನ್ನು ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ಮಾಡಿದರೆ ವಿರೋಧಿಸುವವರು ಯಾರೂ ಇರಲಾರರು ಎಂದೇ ನನ್ನ ಅನಿಸಿಕೆ’ ಎಂದು ಬಿಸಿಸಿಐ ಪದಾಧಿಕಾರಿಯೊಬ್ಬರು ಅಭಿಪ್ರಾಯಪಟ್ಟರು. 

ಸಮಿತಿಯ ಸದಸ್ಯ ಸ್ಥಾನಕ್ಕಾಗಿ ಅರ್ಜಿ ಸಲ್ಲಿಸಿದವರಲ್ಲಿ ಮಹಾರಾಷ್ಟ್ರದ ಮಾಹಿ ಎಡಗೈ ಬ್ಯಾಟ್ಸ್‌ವುಮನ್ ಆರತಿ ವೈದ್ಯ ಇದ್ದಾರೆ. ಅವರು ಮೂರು ಟೆಸ್ಟ್ ಮತ್ತು ಆರು ಏಕದಿನ ಪಂದ್ಯಗಳನ್ನು ಆಡಿದ್ದು ಪಶ್ಚಿಮ ವಲಯದಿಂದ ಪ್ರತಿನಿಧಿಯಾಗಲು ಬಯಸಿದ್ದಾರೆ. ಪೂರ್ವ ವಲಯದಿಂದ ಮಿತು ಮುಖರ್ಜಿ ಆಯ್ಕೆ ಬಯಸಿದ್ದಾರೆ. ಕೇಂದ್ರ ವಲಯದಿಂದ ಮಧ್ಯಮ ವೇಗದ ಬೌಲರ್ ರೇಣು ಮಾರ್ಗರೆಟ್ ಅರ್ಜಿ ಸಲ್ಲಿಸಿದ್ದಾರೆ. ಐದು ಟೆಸ್ಟ್ ಮತ್ತು 23 ಏಕದಿನ ಪಂದ್ಯಗಳನ್ನು ಆಡಿರುವ 45 ವರ್ಷದ ಅವರು ಭಾರತೀಯ ರೈಲ್ವೆ ತಂಡದ ಪರವಾಗಿಯೂ ಆಡಿದ್ದಾರೆ. ವೆಂಕಟಾಚಾರ್ ಕಲ್ಪನಾ ಅವರೂ ಸದಸ್ಯ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ವಿಕೆಟ್ ಕೀಪರ್ ಆಗಿರುವ ಅವರು ಮೂರು ಟೆಸ್ಟ್ ಮತ್ತು ಎಂಟು ಏಕದಿನ ಪಂದ್ಯಗಳನ್ನು ಆಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು