ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಎದುರು ಗೆಲುವು: ಬಾಂಗ್ಲಾ ಕ್ರಿಕೆಟ್‌ನಲ್ಲಿ ಮೂಡಿದ ಭರವಸೆ

ಮತ್ತೆ ನೋವು ನುಂಗುವ ಶಕ್ತಿ ಇರಲಿಲ್ಲ–ಮುಷ್ಫಿಕುರ್
Last Updated 4 ನವೆಂಬರ್ 2019, 19:31 IST
ಅಕ್ಷರ ಗಾತ್ರ

ನವದೆಹಲಿ: ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಭಾರತದ ವಿರುದ್ಧ ಮೊತ್ತಮೊದಲ ಜಯ ಗಳಿಸಿದ ಬಾಂಗ್ಲಾದೇಶ ತಂಡದಲ್ಲಿ ಈಗ ಭರವಸೆಯ ಹೊಸ ಕಿರಣ ಮೂಡಿದೆ. ಹಗರಣ, ಪ್ರತಿಭಟನೆ, ಗಾಯದ ಸಮಸ್ಯೆ ಮುಂತಾದ ಕಾರಣದಿಂದ ನೈತಿಕವಾಗಿ ಕುಗ್ಗಿದ್ದ ತಂಡ ಈಗ ಅಭಿಮಾನದಿಂದ ಬೀಗುವಂತಾಗಿದೆ.

ಭಾನುವಾರ ರಾತ್ರಿ ಇಲ್ಲಿ ನಡೆದ 3 ಪಂದ್ಯಗಳ ಸರಣಿಯ ಮೊದಲ ಹಣಾಹಣಿಯಲ್ಲಿ ಪ್ರವಾಸಿ ತಂಡ 7 ವಿಕೆಟ್‌ಗಳಿಂದ ಗೆಲುವು ಸಾಧಿಸಿತ್ತು. 43 ಎಸೆತಗಳಲ್ಲಿ 60 ರನ್ (1 ಸಿಕ್ಸರ್‌, 8 ಬೌಂಡರಿ) ಗಳಿಸಿ ಅಜೇಯರಾಗಿದ್ದ ವಿಕೆಟ್ ಕೀಪರ್ ಮುಷ್ಫಿಕುರ್ ರಹೀಮ್ ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು.

ಪಂದ್ಯದ ನಂತರ ಮಾತನಾಡಿದ ಅವರು ‘ಇತ್ತೀಚಿನ ಕೆಲವು ವಾರಗಳಲ್ಲಿ ನನ್ನ ವೃತ್ತಿ ಜೀವನದ ಅತ್ಯಂತ ಕಠಿಣ ದಿನಗಳನ್ನು ಕಂಡಿದ್ದೆ. 15 ವರ್ಷಗಳಲ್ಲಿ ಇಂಥ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ’ ಎಂದು ಮುಷ್ಫಿಕುರ್ ಹೇಳಿದರು. ಕಳೆದ ತಿಂಗಳು ಆಟಗಾರರು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ವಿರುದ್ಧ ದಂಗೆದ್ದಿದ್ದರು. ನಂತರ ಸ್ಟಾರ್ ಆಟಗಾರ ಶಕೀಬ್ ಅಲ್ ಹಸನ್ 2 ವರ್ಷಗಳ ನಿಷೇಧಕ್ಕೆ ಒಳಗಾಗಿದ್ದರು.

‘‍ಪಂದ್ಯಗಳನ್ನು ಗೆಲ್ಲುವುದು ಅಥವಾ ಅತ್ಯುತ್ತಮ ಆಟವಾಡುವುದೊಂದೇ ಸದ್ಯದ ಸಂಕಟದಿಂದ ಹೊರಬರುವ ದಾರಿ ಎಂದು ಬಾಂಗ್ಲಾದೇಶದಿಂದ ಬರುವಾಗ ಸಹ ಆಟಗಾರರಿಗೆ ಹೇಳಿದ್ದೆ. ಈ ಹಿನ್ನೆಲೆಯಲ್ಲಿ ಮೊದಲ ಟ್ವೆಂಟಿ–20 ಪಂದ್ಯದ ಜಯ ತಂಡದಲ್ಲೂ ದೇಶದ ಕ್ರಿಕೆಟ್‌ನಲ್ಲೂ ಭರವಸೆ ಮೂಡಿಸಿದೆ’ ಎಂದು ಅವರು ನುಡಿದರು.

ಬಲಿಷ್ಠ ಬ್ಯಾಟಿಂಗ್ ಬಳಗವನ್ನು ಹೊಂದಿರುವ ಭಾರತವನ್ನು 148 ರನ್‌ಗಳಿಗೆ ಬಾಂಗ್ಲಾ ಬೌಲರ್‌ಗಳು ನಿಯಂತ್ರಿಸಿದ್ದರು. ಗುರಿ ಬೆನ್ನತ್ತಿದ ತಂಡ 8 ರನ್ ಗಳಿಸುವಷ್ಟರಲ್ಲಿ ಲಿಟನ್ ದಾಸ್ ವಿಕೆಟ್ ಕಳೆದುಕೊಂಡಿತ್ತು. ನಂತರ ಮೊಹಮ್ಮದ್ ನಯೀಮ್ ಮತ್ತು ಸೌಮ್ಯ ಸರ್ಕಾರ್ 46 ರನ್‌ಗಳ ಜೊತೆಯಾಟ ಆಡಿದರು. ನಯೀಮ್ ಔಟಾದ ಮೇಲೆ 3ನೇ ವಿಕೆಟ್‌ಗೆ ಸೌಮ್ಯ ಸರ್ಕಾರ್ ಜೊತೆ 60 ರನ್‌ ಸೇರಿಸಿದ ಮುಷ್ಫಿಕುರ್ ಮುರಿಯದ 4ನೇ ವಿಕೆಟ್‌ಗೆ ನಾಯಕ ಮೊಹಮ್ಮದುಲ್ಲಾ ಜೊತೆಗೂಡಿ 40 ರನ್ ಪೇರಿಸಿ ತಂಡಕ್ಕೆ ಭರ್ಜರಿ ಜಯ ಒದಗಿಸಿಕೊಟ್ಟಿದ್ದರು.

‘ಪ್ರಮುಖ ಆಟಗಾರರು ಲಭ್ಯ ಇರಲಿಲ್ಲಿ. ಆದರೂ ಯುವ ಆಟಗಾರರು ಅಮೋಘ ಆಟವಾಡಿದ್ದಾರೆ. ಭಾರತದಂಥ ತಂಡದ ವಿರುದ್ಧ ಅವರದೇ ನೆಲದಲ್ಲಿ ಜಯ ಗಳಿಸಿದ್ದು ಅತ್ಯಂತ ಖುಷಿಯ ವಿಷಯ’ ಎಂದರು.

ಧನ್ಯವಾದ ಹೇಳಿದ ಸೌರವ್‌ ಗಂಗೂಲಿ


ನವದೆಹಲಿ: ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆಯಾಗಿದ್ದರೂ ದೆಹಲಿಯಲ್ಲಿ ಪಂದ್ಯ ಆಡಲು ಒಪ್ಪಿಕೊಂಡ ಭಾರತ ಮತ್ತು ಬಾಂಗ್ಲಾ ತಂಡದ ಆಟಗಾರರಿಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಧನ್ಯವಾದ ಅರ್ಪಿಸಿ ಟ್ವೀಟ್ ಮಾಡಿದ್ದಾರೆ.

ಮುಂದಿನ ವರ್ಷಗಳಲ್ಲಿ ದೀಪಾವಳಿ ನಂತರ ತವರಿನಲ್ಲಿ ‍ಪ‍ಂದ್ಯಗಳನ್ನು ಆಯೋಜಿಸುವುದದಿದ್ದರೆ ಎಲ್ಲ ಆಯಾಮಗಳಿಂದಲೂ ಯೋಚಿಸಲಾಗುವುದು ಎಂದು ಗಂಗೂಲಿ ಹೇಳಿದ್ದಾರೆ.

ಎರಡನೇ ಪಂದ್ಯಕ್ಕೆ ಚಂಡಮಾರುತ ಕಾಟ?
ಎರಡನೇ ಪಂದ್ಯಕ್ಕೆ ಚಂಡಮಾರುತ ಕಾಡುವ ಸಾಧ್ಯತೆ ಇದೆ ಎಂದು ಕ್ರಿಕ್ ಇನ್ಫೊ ವರದಿ ಮಾಡಿದೆ. ಗುಜರಾತ್‌ನ ರಾಜ್‌ಕೋಟ್‌ನಲ್ಲಿ ನವೆಂಬರ್ 7ರಂದು ಎರಡನೇ ಪಂದ್ಯ ನಡೆಯಲಿದೆ. ಆದರೆ 6ರಂದು ಗುಜರಾತ್ ಕರಾವಳಿಯಲ್ಲಿ ‘ಮಹಾ’ ಚಂಡಮಾರುತ ಬೀಸುವ ಸಾಧ್ಯತೆ ಇದ್ದು ಪರಿಣಾಮ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿರುವುದಾಗಿ ವೆಬ್‌ಸೈಟ್ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT