ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಜಲು ಬಳಕೆ ನಿಷೇಧಿಸಿದ ಐಸಿಸಿ

ಕೆಲವು ನಿಯಮಗಳಿಗೆ ತಾತ್ಕಾಲಿಕ ಪರಿಷ್ಕರಣೆ
Last Updated 9 ಜೂನ್ 2020, 19:30 IST
ಅಕ್ಷರ ಗಾತ್ರ

ದುಬೈ: ಬಹಳಷ್ಟು ಪರ–ವಿರೋಧ ಚರ್ಚೆಗಳ ನಡುವೆಯೇ ಕ್ರಿಕಟ್‌ನಲ್ಲಿ ಚೆಂಡಿನ ಹೊಳಪು ನಿರ್ವಹಿಸಲು ಎಂಜಲು ಬಳಕೆಯನ್ನು ನಿಷೇಧಿಸಲಾಗಿದೆ. ಇದರರೊಂದಿಗೆ ಇನ್ನೂ ಕೆಲವು ಮಹತ್ವದ ನಿಯಮಗಳನ್ನು ತಾತ್ಕಾಲಿಕವಾಗಿ ತಿದ್ದುಪಡಿ ಮಾಡಲಾಗಿದೆ.

ಅನಿಲ್ ಕುಂಬ್ಳೆ ನೇತೃತ್ವದ ಕ್ರಿಕೆಟ್ ತಾಂತ್ರಿಕ ಸಮಿತಿಯು ನೀಡಿರುವ ಪ್ರಸ್ತಾವಕ್ಕೆ ಐಸಿಸಿಯು ಮಂಗಳವಾರ ಅನುಮೋದನೆ ನೀಡಿದೆ.

ಕೊರೊನಾ ಸೋಂಕು ಹರಡದಂತೆ ತಡೆಯಲು ಎಂಜಲು ಬಳಕೆ ನಿಷೇಧಿಸುವಂತೆ ಸಮಿತಿಯು ಶಿಫಾರಸು ಮಾಡಿತ್ತು. ಮುಂದಿನ ಸೂಚನೆಯವರೆಗೂ ಎಂಜಲು ಬಳಕೆಯನ್ನು ನಿಷೇಧಿಸಬೇಕು ಎಂದು ಐಸಿಸಿಯು ಸೂಚಿಸಿದೆ.

ಇದಲ್ಲದೇ ಟೆಸ್ಟ್ ಪಂದ್ಯಗಳಲ್ಲಿ ಆಡುವಾಗ ಯಾವುದಾದರೂ ಆಟಗಾರ ಕೋವಿಡ್‌–19ಗೆ ತುತ್ತಾದರೆ ಬದಲೀ ಆಟಗಾರನನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಪಂದ್ಯ ರೆಫರಿಯು ಈ ಕುರಿತುನಿರ್ಧಾರ ಕೈಗೊಳ್ಳಬೇಕು. ಕಂಕಷನ್ ನಿಯಮದಡಿಯಲ್ಲಿ ಇದನ್ನು ಜಾರಿಗೆ ತರಲಾಗುವುದು.

ಈ ಮೊದಲು ದ್ವಿ‍ಪಕ್ಷೀಯ ಸರಣಿಗಳಲ್ಲಿ ಆಡುವ ಎರಡೂ ದೇಶಗಳ ಅಂಪೈರ್‌ಗಳನ್ನು ನೇಮಕ ಮಾಡಲಾಗುತ್ತಿರಲಿಲ್ಲ. ತಟಸ್ಥ ಅಂಪೈರ್‌ಗಳನ್ನು ನೇಮಕ ಮಾಡಲಾಗುತ್ತಿತ್ತು. ಇದೀಗ ತಾತ್ಕಾಲಿಕ ಅವಧಿಗಾಗಿ ಈ ನಿಯಮವನ್ನು ಸಡಿಲಗೊಳಿಸಲಾಗಿದೆ. ಸ್ಥಳೀಯ ಅಂಪೈರ್‌ಗಳನ್ನೇ ನೇಮಕ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ಡಿಆರ್‌ಎಸ್‌ಗೆ ಪರಿಷ್ಕರಣೆ: ಅಂಪೈರ್ ಮರುಪರಿಶೀಲನಾ ತೀರ್ಪು ವ್ಯವಸ್ಥೆ (ಯುಡಿಆರ್‌ಎಸ್‌) ನಿಯಮದಲ್ಲಿಯೂ ಒಂದು ಬದಲಾವಣೆ ಮಾಡಲಾಗಿದೆ. ತಂಡಗಳಿಗೆ ತಲಾ ಒಂದು ಹೆಚ್ಚುವರಿ ಮನವಿಯ ಅವಕಾಶವನ್ನು ನೀಡಲಾಗಿದೆ. ಇದರಿಂದಾಗಿ ಟೆಸ್ಟ್‌ನಲ್ಲಿ ಉಭಯ ತಂಡಗಳು ತಲಾ ಮೂರು ಮತ್ತು ಸೀಮಿತ ಓವರ್‌ಗಳಲ್ಲಿ ಎರಡು ಅವಕಾಶಗಳನ್ನು ಪಡೆಯಲಿವೆ.

ಆಟಗಾರರು ತಮ್ಮ ಪೋಷಾಕಿನ ಮೇಲೆ ಲಾಂಛನಗಳನ್ನು ಹಾಕಿಕೊಳ್ಳುವ ನಿಯಮಕ್ಕೂ ತಿದ್ದುಪಡಿ ಮಾಡಲಾಗಿದೆ. ಟೆಸ್ಟ್‌ನಲ್ಲಿಯೂ ಈ ರೀತಿಯ ಲೋಗೊ ಬಳಸಲು ಅವಕಾಶ ಕಲ್ಪಿಸಲಾಗಿದೆ. ಈಗಿರುವ ಲೋಗೊ ಹೊರತುಪಡಿಸಿ ಇನ್ನೂ ಮೂರು ಲಾಂಛನಗಳನ್ನು ಬಳಸಿಕೊಳ್ಳಬಹುದು. ತಮ್ಮ ಟೀ ಶರ್ಟ್, ಸ್ವೆಟರ್‌ನ ಎದೆ ಭಾಗದಲ್ಲಿ ಅವುಗಳನ್ನು ಪ್ರದರ್ಶಿಸಬಹುದು ಎಂದು ಹೇಳಿದೆ.

ಕೋವಿಡ್‌ –19 ಹಿನ್ನಲೆ ನಿಯಮಗಳ ಪರಿಷ್ಕರಣೆ (ತಾತ್ಕಾಲಿಕ)
* ಚೆಂಡಿನ ಹೊಳಪಿಗೆ ಎಂಜಲು ಲೇಪನಕ್ಕೆ ನಿಷೇಧ
* ಕೋವಿಡ್ –19 ಬದಲೀ ಆಟಗಾರನನ್ನು ಪಡೆಯಲು ಅನುಮತಿ
* ದ್ವಿಪಕ್ಷೀಯ ಟೆಸ್ಟ್ ಸರಣಿಗೆ ತಟಸ್ಥ ಅಂಪೈರ್ ನೇಮಕಕ್ಕೆ ತಡೆ
* ಎರಡೂ ತಂಡಗಳಿಗೆ ತಲಾ ಒಂದು ಒಂದು ಹೆಚ್ಚುವರಿ ಡಿಆರ್‌ಎಸ್‌ ಮನವಿಗೆ ಅವಕಾಶ
* ಆಟಗಾರರ ಪೋಷಾಕಿನ ಮೇಲೆ ಮೂರು ಜಾಹೀರಾತು ಲಾಂಛನ ಹಾಕಲು ಟೆಸ್ಟ್‌ನಲ್ಲಿಯೂ ಅವಕಾಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT