ಗುರುವಾರ , ಆಗಸ್ಟ್ 5, 2021
28 °C
ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಬಿಸಿಸಿಐ ಪಂದ್ಯಗಳ ಆಯೋಜನೆಗೆ ಸಿದ್ಧತೆ

ಹುಬ್ಬಳ್ಳಿ: ದಶಕದಲ್ಲಿ ಪಿಚ್‌ಗೆ ಹೊಸ ಕಳೆ

ಪ್ರಮೋದ‌ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ)‌ ಇಲ್ಲಿನ ರಾಜನಗರದಲ್ಲಿ ಹೊಂದಿರುವ ಕ್ರೀಡಾಂಗಣದಲ್ಲಿ ಪಿಚ್‌ಗಳ ನವೀಕರಣ ಕಾರ್ಯ ಆರಂಭಿಸಿದೆ. ದಶಕದ ಅವಧಿಯಲ್ಲಿ ಪಿಚ್‌ಗೆ ಸಂಬಂಧಿಸಿದಂತೆ ನಡೆಯುತ್ತಿರುವ ಮೊದಲ ಕೆಲಸ ಇದಾಗಿದೆ.

ಕ್ರೀಡಾಂಗಣದಲ್ಲಿ ಒಟ್ಟು ಎಂಟು ಪಿಚ್‌ಗಳಿದ್ದು ಒಂದು, ಮೂರು, ಏಳು ಮತ್ತು ಎಂಟನೇ ಪಿಚ್‌ಗಳನ್ನು ಸ್ಥಳೀಯ ಟೂರ್ನಿಗಳ ಪಂದ್ಯಗಳಿಗೆ ಬಳಕೆ ಮಾಡಲಾಗುತ್ತಿತ್ತು. ಉಳಿದ ನಾಲ್ಕು ಪಿಚ್‌ಗಳನ್ನು ಕರ್ನಾಟಕ ಪ್ರೀಮಿಯರ್‌ ಲೀಗ್‌, ರಣಜಿ ಮತ್ತು ರಾಷ್ಟ್ರೀಯ ‘ಎ’ ತಂಡಗಳ ಟೂರ್ನಿಗಳ ಪಂದ್ಯಗಳು ನಡೆದಾಗ ಉಪಯೋಗಿಸಲಾಗುತ್ತಿತ್ತು. ಈಗ ನಾಲ್ಕು, ಐದು ಮತ್ತು ಆರನೇ ಪಿಚ್‌ಗಳಿಗೆ ‘ಮರುಜೀವ’ ನೀಡಲಾಗುತ್ತಿದೆ.

2012ರಲ್ಲಿ ಇಲ್ಲಿ ಕ್ರೀಡಾಂಗಣ ಆರಂಭವಾದಾಗ ಈ ಪಿಚ್‌ಗಳನ್ನು ನಿರ್ಮಿಸಲಾಗಿತ್ತು. ಈಗ ಅವುಗಳ ಮಣ್ಣನ್ನು ಪೂರ್ತಿಯಾಗಿ ತೆಗೆದು ಹಾಕಿ ಧಾರವಾಡ ಸುತ್ತಮುತ್ತಲಿನ ಊರುಗಳಿಂದ ಮಣ್ಣನ್ನು ತಂದು ವೈಜ್ಞಾನಿಕವಾಗಿ ಕೆಲ ಕಾಲ ಸಂಗ್ರಹಿಸಿಟ್ಟು ಪಿಚ್‌ ತಯಾರಿಸಲಾಗುತ್ತಿದೆ. ಹೊಸದಾಗಿ ನಿರ್ಮಾಣಗೊಳ್ಳಲಿರುವ ಪಿಚ್‌ಗಳು ಅಂತರರಾಷ್ಟ್ರೀಯ ಮಟ್ಟದ ಗುಣಮಟ್ಟ ಹೊಂದಿರಲಿದ್ದು, ಬಿಸಿಸಿಐ ಆಯೋಜಿಸುವ ಪಂದ್ಯಗಳಿಗೆ ಬಳಕೆ ಮಾಡಲಾಗುತ್ತಿದೆ. ಈ ದೇಶಿ ಋತುವಿನ ಕೆಲ ಪಂದ್ಯಗಳಿಗೆ ಇಲ್ಲಿನ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.

ಇಲ್ಲಿ ಹಿಂದೆ ರಣಜಿ ಸೇರಿದಂತೆ ನಡೆದ ಹಲವು ಪಂದ್ಯಗಳಲ್ಲಿ ಪಿಚ್‌ ಬಹುತೇಕವಾಗಿ ಬ್ಯಾಟ್ಸ್‌ಮನ್‌ಗಳ ಸ್ನೇಹಿಯಾಗಿರುತ್ತಿತ್ತು. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬಂದವರು ಸಹ ಉತ್ತಮವಾಗಿ ರನ್‌ ಗಳಿಸುತ್ತಿದ್ದರು. ಹೀಗಾಗಿ ಈಗಿನ ಸ್ಪರ್ಧಾತ್ಮಕತೆಗೆ ತಕ್ಕಂತೆ ಹಾಗೂ ಫಲಿತಾಂಶ ಬರುವಂತೆ ಪಿಚ್‌ಗಳನ್ನು ಬ್ಯಾಟ್ಸ್‌ಮನ್ ಮತ್ತು ಬೌಲರ್‌ ಸ್ನೇಹಿಯಾಗಿ ರೂಪಿಸಲಾಗುತ್ತಿದೆ.

ಕೆಎಸ್‌ಸಿಎ ಪಿಚ್‌ ಕ್ಯುರೇಟರ್‌ ಪ್ರಶಾಂತರಾವ್‌ ಮಾರ್ಗದರ್ಶನದಲ್ಲಿ ಸೂಪರ್‌ವೈಸರ್‌ ಸತೀಶ ಉಳ್ಳಾಗಡ್ಡಿ, ಎಂಜಿನಿಯರ್‌ ವಿಭಾಗದ ಸೀನಿಯರ್‌ ಅಧಿಕಾರಿ ಸಾಗರ ಪರ್ವತಿ ಮತ್ತು ಧಾರವಾಡ ವಲಯದ ವ್ಯವಸ್ಥಾಪಕ ಟೋನಿ ಸಿ. ಜಳ್ಕಿ ಪಿಚ್‌ ನವೀಕರಣದ ನಿರ್ವಹಣೆ ನೋಡಿಕೊಳ್ಳುತ್ತಿದ್ದಾರೆ. ಮೈದಾನದ ಸಿಬ್ಬಂದಿ ಮಹಾಂತೇಶ ಚಲವಾದಿ, ಭರತ್‌ ದಂಡಿನ್ನವರ, ಇಸ್ಮಾಯಿಲ್‌ ಪಿರ್ಜಾದೆ, ತುಕಾರಾಮ್‌ ಕಣಗೇರಿ, ಶಿವಕುಮಾರ ಪಾಟೀಲ, ಶ್ರೀಕಾಂತ ಪೂಜಾರ, ಸಿದ್ದರಾಮ ಹಾತರಕಿ ಮತ್ತು ಯಲ್ಲಮ್ಮ ದೊಡ್ಡಮನಿ ಪಿಚ್‌ ತಯಾರಿಕೆಯಲ್ಲಿ ತೊಡಗಿದ್ದಾರೆ.

ಈ ಕುರಿತು ಪ್ರಜಾವಾಣಿ ಜೊತೆ ಮಾತನಾಡಿದ ಪ್ರಶಾಂತರಾವ್ ‘ಈಗಿನ ಸ್ಪರ್ಧೆಗೆ ತಕ್ಕಂತೆ ಪಿಚ್‌ಗಳನ್ನು ರೂಪಿಸಲಾಗುತ್ತದೆ. ಪಿಚ್‌ ನಿರ್ಮಾಣ ಕಾರ್ಯ ಮುಗಿದು ಒಂದೂವರೆ ವರ್ಷದ ಬಳಿಕ ಪಿಚ್‌ನ ಸಾಮರ್ಥ್ಯ ಏನೆಂಬುದು ಗೊತ್ತಾಗುತ್ತದೆ. ಎಂಟು ತಿಂಗಳ ತನಕ ಯಾವುದೇ ಪಂದ್ಯಗಳನ್ನು ಆ ಪಿಚ್‌ಗಳ ಮೇಲೆ ಆಡಿಸಲು ಬರುವುದಿಲ್ಲ. ಈಗಿನ ಹೊಸ ಪಿಚ್‌ಗಳು 12ರಿಂದ 15 ವರ್ಷಗಳವರೆಗೆ ಬಾಳಿಕೆ ಬರುತ್ತವೆ’ ಎಂದರು.

***

ಹೊಸ ಪಿಚ್‌ಗಳ ಮೇಲೆ ಮುಂದಿನ ವರ್ಷದಿಂದ ಬಿಸಿಸಿಐ ನೀಡುವ ಪಂದ್ಯಗಳನ್ನು ನಡೆಸಲಾಗುವುದು. ಈ ವರ್ಷ ಉಳಿದ ಪಿಚ್‌ಗಳ ಮೇಲೆ ಪಂದ್ಯಗಳನ್ನು ಆಯೋಜಿಸಲು ಸಿದ್ಧರಿದ್ದೇವೆ. 

- ವೀರಣ್ಣ ಸವಡಿ, ಕೆಎಸ್‌ಸಿಎ ಧಾರವಾಡ ವಲಯದ ಚೇರ್ಮನ್‌

***

ಪಂದ್ಯದಲ್ಲಿ ಫಲಿತಾಂಶ ಬರುವ ಪಿಚ್‌ ಇರಬೇಕು ಎಂದು ಬಹಳಷ್ಟು ಜನ ಬಯಸುತ್ತಾರೆ. ಬ್ಯಾಟ್ಸ್‌ಮನ್‌ ಹಾಗೂ ಬೌಲರ್‌ ಇಬ್ಬರಿಗೂ ಅನುಕೂಲವಾಗುವಂತೆ ಪಿಚ್‌ಗಳನ್ನು ನಿರ್ಮಿಸಲಾಗುತ್ತಿದೆ.

- ಅವಿನಾಶ್ ಪೋತದಾರ, ಕೆಎಸ್‌ಸಿಎ ಧಾರವಾಡ ವಲಯದ ನಿಮಂತ್ರಕ

***

2012ರಲ್ಲಿ ನಿರ್ಮಾಣವಾಗಿರುವ ಕ್ರೀಡಾಂಗಣ

ಮೈದಾನದಲ್ಲಿ ಒಟ್ಟು ಎಂಟು ಪಿಚ್‌ಗಳು

ಈ ವರ್ಷ ಬಿಸಿಸಿಐ ಪಂದ್ಯಗಳಿಗೆ ಆತಿಥ್ಯ ಸಾಧ್ಯತೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು