ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ ವಿಶ್ವಕಪ್‌ ಟೂರ್ನಿ: ಬಾಂಗ್ಲಾ ವಿರುದ್ಧ ಕಿವೀಸ್‌ ಜಯಭೇರಿ

ಮಳೆ ಕಾಡಿದ ಪಂದ್ಯದಲ್ಲಿ ಮಿಂಚಿದ ಆ್ಯಮಿ ಸಟೆರ್ಥ್‌ವೇಟ್‌, ಸೂಸಿ ಬೇಟ್ಸ್‌
Last Updated 8 ಮಾರ್ಚ್ 2022, 4:42 IST
ಅಕ್ಷರ ಗಾತ್ರ

ಡ್ಯುನೆಡಿನ್: ಆತಿಥೇಯ ನ್ಯೂಜಿಲೆಂಡ್ ತಂಡ ಮಹಿಳೆಯರ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ಮೊದಲ ಜಯ ಗಳಿಸಿತು. ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ಗೆ ಮಣಿದಿದ್ದ ತಂಡ ಸೋಮವಾರ ನಡೆದ ಹಣಾಹಣಿಯಲ್ಲಿ ಬಾಂಗ್ಲಾದೇಶವನ್ನು ಒಂಬತ್ತು ವಿಕೆಟ್‌ಗಳಿಂದ ಸೋಲಿಸಿತು.

ಮಳೆ ಕಾಡಿದ್ದರಿಂದ ಪಂದ್ಯವನ್ನು ತಲಾ 27 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಎದುರಾಳಿಗಳನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು. ಆ್ಯಮಿ ಸಟೆರ್ತ್‌ವೇಟ್‌ ಅವರ ದಾಳಿಗೆ ನಲುಗಿದ ಬಾಂಗ್ಲಾದೇಶಕ್ಕೆ ಎಂಟು ವಿಕೆಟ್‌ಗಳಿಗೆ 140 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಇನ್ನೂ 42 ಎಸೆತ ಬಾಕಿ ಇರುವಾಗ ಜಯದ ನಗೆ ಸೂಸಿತು. ಅಜೇಯ ಅರ್ಧಶತಕ ಸಿಡಿಸಿದ ಸೂಸಿ ಬೇಟ್ಸ್ ತಂಡದ ಸುಲಭ ಜಯಕ್ಕೆ ಕಾರಣರಾದರು. ಟೂರ್ನಿಯಲ್ಲಿ ಬಾಂಗ್ಲಾದೇಶಕ್ಕೆ ಇದು ಸತತ ಎರಡನೇ ಸೋಲು.

ನಾಯಕಿ ಸೋಫಿ ಡಿವೈನ್ ಅವರನ್ನು ಏಳನೇ ಓವರ್‌ನಲ್ಲಿ ವಾಪಸ್ ಕಳುಹಿಸಿದ ಸ್ಪಿನ್ನರ್‌ ಸಲ್ಮಾ ಖಾತುನ್ ಅವರು ಬಾಂಗ್ಲಾದೇಶ ಪಾಳಯದಲ್ಲಿ ನಿರೀಕ್ಷೆ ಮೂಡಿಸಿದ್ದರು. ಆದರೆ ಆರಂಭಿಕ ಬ್ಯಾಟರ್ ಬೇಟ್ಸ್‌ (79; 68 ಎಸೆತ, 8 ಬೌಂಡರಿ) ಮತ್ತು ಮೂರನೇ ಕ್ರಮಾಂಕದ ಅಮೆಲಿ ಕೆರ್‌ (47; 37 ಎ, 5 ಬೌಂ) ಶತಕದ (108 ರನ್) ಜೊತೆಯಾಟವಾಡಿದರು.

ಅಮೋಘ ಬ್ಯಾಟಿಂಗ್ ಮಾಡಿದ ಬೇಟ್ಸ್‌ ಏಕದಿನ ಕ್ರಿಕೆಟ್‌ನಲ್ಲಿ 28ನೇ ಅರ್ಧಶತಕ ಸಿಡಿಸಿದರು. ತಂಡ ಗೆಲುವಿನ ಸನಿಹ ಇದ್ದಾಗ ಬೌಂಡರಿ ಸಿಡಿಸುವ ಮೂಲಕ ಸಾವಿರ ರನ್ ಪೂರೈಸಿದರು. ಮಹಿಳೆಯರ ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ ಆರನೇ ಆಟಗಾರ್ತಿ ಎನಿಸಿಕೊಂಡರು. ಬಾಂಗ್ಲಾದೇಶ ಇನಿಂಗ್ಸ್‌ನಲ್ಲಿ ಒಟ್ಟು ಎಂಟು ಬೌಂಡರಿಗಳು ಬಂದಿದ್ದರೆ, ಬೇಟ್ಸ್ ಒಬ್ಬರೆ ಎಂಟು ಬಾರಿ ಚೆಂಡನ್ನು ಬೌಂಡರಿ ಗೆರೆಯಾಚೆ ಅಟ್ಟಿದರು.

ಶಮಿಮ–ಫರ್ಗಾನ ಉತ್ತಮ ಜೊತೆಯಾಟ: ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಮಣಿದಿದ್ದ ಬಾಂ‌ಗ್ಲಾದೇಶಕ್ಕೆ ಫರ್ಗಾನ ಹಕ್ ಮತ್ತು ಶಮೀಮ ಸುಲ್ತಾನ ಉತ್ತಮ ಆರಂಭ ಒದಗಿಸಿದರು. ಮೊದಲ ವಿಕೆಟ್‌ಗೆ ಇವರಿಬ್ಬರು 59 ರನ್ ಸೇರಿಸಿದರು. ಐದು ಓವರ್‌ಗಳ ಪವರ್ ಪ್ಲೇ ಮುಕ್ತಾಯಗೊಂಡಾಗ ತಂಡ ವಿಕೆಟ್ ನಷ್ಟವಿಲ್ಲದೆ 41 ರನ್ ಗಳಿಸಿತ್ತು. ಸ್ಪಿನ್ ಆಲ್‌ರೌಂಡರ್ ಫ್ರಾನ್ಸಿಸ್ ಮೆಕೆ ಅವರು ಈ ಜೊತೆಯಾಟವನ್ನು ಮುರಿದರು. ನಂತರ ತಂಡ ದಿಢೀರ್ ಪತನ ಕಂಡಿತು. ಐದು ಮಂದಿ ಎರಡಂಕಿ ಮೊತ್ತ ದಾಟದೆ ವಾಪಸಾದರು. ನಹಿದಾ ಅಕ್ತರ್‌ ಖಾತೆ ತೆರೆಯದೇ ಅಜೇಯವಾಗಿ ಉಳಿದರು.

ಸ್ಕೋರ್‌ ಕಾರ್ಡ್‌

ಬಾಂಗ್ಲಾದೇಶ 8ಕ್ಕೆ 140 (27 ಓವರ್‌ಗಳಲ್ಲಿ)

ಶಮೀಮಾ ಸಿ ತಹುಹು ಬಿ ಮೆಕೆ 33 (36 ಎ, 4x4), ಫರ್ಗನ ರನೌಟ್‌ (ಮೆಕೆ) 52 (63 ಎ, 4x1), ನಿಗರ್‌ ಸಿ ಮಾರ್ಟಿನ್ ಬಿ ಸಟೆರ್ತ್‌ವೇಟ್‌ 11 (13 ಎ, 4x1), ರುಮಾನ ಬಿ ಸಟೆರ್ತ್‌ವೇಟ್‌ 1 (4 ಎ), ಸೊಭಾನ ಸಿ ಗ್ರೀನ್‌ ಬಿ ಜೆನ್ಸೆನ್‌ 13 (21 ಎ, 4x1), ರಿತು ಸಿ ಡಿವೈನ್ ಬಿ ಸಟೆರ್ತ್‌ವೇಟ್‌ 4 (2 ಎ, 4x1), ಸಲ್ಮಾ ರನೌಟ್‌ (ಬೇಟ್ಸ್‌/ಮೆಕೆ) 9 (10 ಎ), ಲತಾ ಔಟಾಗದೆ 9 (10ಎ,), ಜಹನಾರ ರನೌಟ್‌ (ಕೆರ್‌/ಸಟೆರ್ತ್‌ವೇಟ್ 2 (3 ಎ), ನಹಿದಾ ಔಟಾಗದೆ 0 (0 ಎ)

ಇತರೆ (ಬೈ 1, ಲೆಗ್‌ಬೈ 1, ವೈಡ್‌ 4) 6

ವಿಕೆಟ್ ಪತನ: 1-59 (ಶಮಿಮಾ ಸುಲ್ತಾನ, 9.2), 2-79 (ನಿಗರ್ ಸುಲ್ತಾನ, 14.1), 3-81 (ರುಮಾನ ಅಹಮ್ಮದ್‌, 14.6), 4-108 (ಸೊಭಾನ ಮೊಸ್ಟರಿ, 21.5), 5-118 (ರಿತು ಮೋನಿ, 22.5), 6-119 (ಫರ್ಗಾನ ಹಕ್‌, 23.1), 7-130 (ಸ‌ಲ್ಮಾ ಖಾತೂನ್‌, 25.3), 8-139 (ಜಹನಾರ ಆಲಂ, 26.5)

ಬೌಲಿಂಗ್‌: ಲೀ ತಹುಹು 2–0–19–0, ಜೆಸ್ ಕೆರ್‌ 5–1–24–0, ಹೇಲಿ ಜೆನ್ಸೆನ್‌ 3–0–18–1, ಅಮೆಲಿಯಾ ಕೆರ್‌ 6–0–28–0, ಫ್ರಾನ್ಸಿಸ್‌ ಮೆಕೆ 6–0–24–1, ಆ್ಯಮಿ ಸಟೆರ್ತ್‌ವೇಟ್ 5–0–25–3

ನ್ಯೂಜಿಲೆಂಡ್‌ 1ಕ್ಕೆ 144 (20 ಓವರ್‌)

ಸೋಫಿ ಡಿವೈನ್ ಬಿ ಸಲ್ಮಾ ಖಾತುನ್ 14 (16 ಎ, 4x1), ಸೂಸಿ ಬೇಟ್ಸ್‌ ಔಟಾಗದೆ 79 (68 ಎ, 4x8), ಅಮೆಲಿಯಾ ಕೆರ್‌ ಔಟಾಗದೆ 47 (37 ಎ, 4x5)

ಇತರೆ (ಬೈ 1, ನೋಬಾಲ್ 1, ವೈಡ್‌ 2) 4

ವಿಕೆಟ್ ಪತನ: 1-36 (ಸೋಫಿ ಡಿವೈನ್‌, 6.4)

ಬೌಲಿಂಗ್‌: ಜಹನಾರ ಆಲಂ 3–0–25–0, ಫರಿಹಾ ತ್ರಿಸ್ನ 3–0–17–0, ಸಲ್ಮಾ ಖಾತುನ್ 4–0–34–1, ನಹೀದ ಅಕ್ತರ್ 5–1–31–0, ರಿತು ಮೋನಿ 2–0–13–0, ರುಮಾನ ಅಹಮ್ಮದ್‌ 2–0–14–0, ಲತಾ ಮೊಂಡಲ್‌ 1–0–9–0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT