ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿರುವ ನ್ಯೂಜಿಲೆಂಡ್ ಆಟಗಾರರು ನೇರ ಇಂಗ್ಲೆಂಡ್‌ಗೆ

ಭಾರತ–ಕಿವೀಸ್‌ ಆಟಗಾರರ ಜೊತೆ ಪಯಣ
Last Updated 28 ಏಪ್ರಿಲ್ 2021, 13:14 IST
ಅಕ್ಷರ ಗಾತ್ರ

ಆಕ್ಲೆಂಡ್‌, ನ್ಯೂಜಿಲೆಂಡ್‌: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ನ್ಯೂಜಿಲೆಂಡ್‌ನ ಆಟಗಾರರು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ಗೆ ಭಾರತದ ಆಟಗಾರರ ಜೊತೆಯಲ್ಲೇ ಪಯಣಿಸಲಿದ್ದಾರೆ ಎಂದು ನ್ಯೂಜಿಲೆಂಡ್‌ ಆಟಗಾರರ ಸಂಘಟನೆ ತಿಳಿಸಿದೆ.

ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ಜೂನ್ 18ರಂದು ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ ಆರಂಭವಾಗಲಿದೆ. ಕಠಿಣ ಕ್ವಾರಂಟೈನ್ ನಿಯಮಗಳು ಜಾರಿಯಲ್ಲಿರುವುದರಿಂದ ತವರಿಗೆ ಮರಳಿ ನಂತರ ಇಂಗ್ಲೆಂಡ್‌ಗೆ ತೆರಳುವುದು ಆಟಗಾರರಿಗೆ ಕಷ್ಟಕರವಾಗಲಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಘಟನೆ ವಿವರಿಸಿದೆ.

ನಾಯಕ ಕೇನ್ ವಿಲಿಯಮ್ಸನ್, ವೇಗದ ಬೌಲರ್‌ಗಳಾದ ಟ್ರೆಂಟ್‌ ಬೌಲ್ಟ್‌, ಕೈಲ್ ಜೆಮೀಸನ್, ಮೈಕೆಲ್ ಸ್ಯಾಂಟ್ನರ್ ಸೇರಿದಂತೆ ನ್ಯೂಜಿಲೆಂಡ್‌ನ 10 ಆಟಗಾರರು ಐಪಿಎಲ್‌ನಲ್ಲಿ ಆಡುತ್ತಿದ್ದಾರೆ. ಜೂನ್‌ ಎರಡರಿಂದ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ನ್ಯೂಜಿಲೆಂಡ್ 20 ಮಂದಿ ಆಟಗಾರರ ತಂಡವನ್ನು ಪ್ರಕಟಿಸಿದೆ. ಈ ತಂಡದಿಂದ 15 ಮಂದಿಯನ್ನು ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಆರಿಸಲಾಗುತ್ತದೆ.

‘ಆಟಗಾರರು ತವರಿಗೆ ಬಂದು ಎರಡು ವಾರ ಪ್ರತ್ಯೇಕವಾಸದಲ್ಲಿದ್ದು ಇಂಗ್ಲೆಂಡ್‌ಗೆ ಪಯಣಿಸುವುದು ಕಷ್ಟ. ಹೀಗಾಗಿ ಐಪಿಎಲ್‌ನಲ್ಲಿ ಆಡುತ್ತಿರುವವರು ಲೀಗ್ ಹಂತದ ಪಂದ್ಯಗಳು ಮುಗಿಯುವ ವರೆಗೆ ಅಥವಾ ಫೈನಲ್ ವರೆಗೆ ಭಾರತದಲ್ಲೇ ಇರುವರು. ಪ್ರಯಾಣಕ್ಕೆ ಸಾಕಷ್ಟು ವಿಮಾನಗಳಿಲ್ಲ. ಹೀಗಾಗಿ ಎಲ್ಲ ಆಟಗಾರರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಪದೇ ಪದೇ ಪಯಣಿಸುವುದು ಕಷ್ಟ. ಈ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್ ಕ್ರಿಕೆಟ್‌ ಜೊತೆ ಮಾತುಕತೆ ನಡೆಸಲಾಗಿದೆ. ಅವರು ಬಿಸಿಸಿಐ ಮತ್ತು ಐಸಿಸಿ ಜೊತೆ ಚರ್ಚಿಸಲಿದ್ದಾರೆ’ ಎಂದು ಆಟಗಾರರ ಸಂಘಟನೆಯ ಮುಖ್ಯ ಕಾರ್ಯನಿರ್ವಾಹಕ ಹೀತ್ ಮಿಲ್ಸ್‌ ತಿಳಿಸಿದ್ದಾರೆ.

ಐಪಿಎಲ್‌ನಲ್ಲಿರುವ ಎಲ್ 10 ಆಟಗಾರರು ಕೂಡ ನ್ಯೂಜಿಲೆಂಡ್ ರಾಷ್ಟ್ರೀಯ ತಂಡದಲ್ಲಿಲ್ಲ. ಸ್ಕಾಟ್ ಕುಗೆಲಿನ್, ಜಿಮ್ಮಿ ನೀಶಮ್‌, ಆ್ಯಡಂ ಮಿಲ್ನೆ, ಫಿನ್ ಅಲೆನ್, ಲಾಕಿ ಫರ್ಗ್ಯುಸನ್ ಮತ್ತು ಟಿಮ್ ಸೀಫರ್ಟ್‌ ತಂಡದ ಸದಸ್ಯರಲ್ಲ.

ಏಪ್ರಿಲ್ 11ರಂದು ವಿಮಾನಯಾನ ರದ್ದಾದಾಗ ಅನೇಕ ಆಟಗಾರರು ಆತಂಕಗೊಂಡಿದ್ದರು. ಅದರೆ ತವರಿಗೆ ಮರಳಲು ಯಾರೂ ಇಚ್ಛೆ ವ್ಯಕ್ತಪಡಿಸಿಲ್ಲ. ಭಾರತದಲ್ಲಿ ಕೋವಿಡ್ ಸೃಷ್ಟಿಸಿರುವ ಆತಂಕ ಮತ್ತು ತಮ್ಮ ಸುತ್ತ ನಡೆಯುತ್ತಿರುವ ಘಟನೆಗಳನ್ನು ನೋಡಿ ಆಟಗಾರರು ಗಾಬರಿಗೊಂಡಿದ್ದಾರೆ. ಆದರೆ ಐಪಿಎಲ್ ಫ್ರಾಂಚೈಸ್‌ಗಳು ಚೆನ್ನಾಗಿ ನೋಡಿಕೊಳ್ಳುತ್ತಿದ್ದು ಬಯೊಬಬಲ್‌ನಲ್ಲಿ ಸುರಕ್ಷಿತರಾಗಿರುವುದಾಗಿ ತಿಳಿಸಿದ್ದಾರೆ’ ಎಂದು ಮಿಲ್ಸ್‌ ಹೇಳಿದ್ದಾರೆ.

ನ್ಯೂಜಿಲೆಂಡ್‌ನ ಮಾಜಿ ಕ್ರಿಕೆಟಿಗರು ವಿವಿಧ ಫ್ರಾಂಚೈಸ್‌ಗಳಲ್ಲಿದ್ದಾರೆ. ಸ್ಟೀಫನ್ ಫ್ಲೆಮಿಂಗ್ (ಚೆನ್ನೈ ಸೂಪರ್ ಕಿಂಗ್ಸ್ ಮುಖ್ಯ ಕೋಚ್‌), ಬ್ರೆಂಡನ್ ಮೆಕ್ಲಂ (ಕೋಲ್ಕತ್ತ ನೈಟ್ ರೈಡರ್ಸ್‌ ಮುಖ್ಯ ಕೋಚ್‌), ಮೈಕ್ ಹೆಸನ್ (ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ವಿಭಾಗದ ನಿರ್ದೇಶಕ), ಶೇನ್ ಬಾಂಡ್ (ಮುಂಬೈ ಇಂಡಿಯನ್ಸ್ ಬೌಲಿಂಗ್ ಕೋಚ್‌), ಜೇಮ್ಸ್‌ ಪಮೆಂಟ್‌ (ಮುಂಬೈ ಇಂಡಿಯನ್ಸ್‌ ಫೀಲ್ಡಿಂಗ್ ಕೋಚ್‌), ಕೈಲ್ ಮಿಲ್ಸ್ (ಕೋಲ್ಕತ್ತ ನೈಟ್ ರೈಡರ್ಸ್‌ ಬೌಲಿಂಗ್‌ ಕೋಚ್‌), ಕ್ರಿಸ್ ಡೊನಾಲ್ಡ್ಸನ್ (ಕೋಲ್ಕತ್ತ ನೈಟ್ ರೈಡರ್ಸ್‌ ಸ್ಟ್ರೆಂತ್ ಆ್ಯಂಡ್ ಕಂಡೀಷನಿಂಗ್ ಸಿಬ್ಬಂದಿ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT