ಮಂಗಳವಾರ, ಡಿಸೆಂಬರ್ 7, 2021
26 °C
ಡೇವೋನ್ ಕಾನ್ವೆ, ನಾಯಕ ಕೇನ್ ವಿಲಿಯಮ್ಸನ್ ಉತ್ತಮ ಜೊತೆಯಾಟ: ಅಫ್ಗಾನಿಸ್ತಾನಕ್ಕೆ ಸೋಲು

DNP ಸೆಮೀಸ್‌ಗೆ ನ್ಯೂಜಿಲೆಂಡ್; ಭಾರತದ ಕನಸು ಭಗ್ನ

ಎಎಫ್‌ಐ Updated:

ಅಕ್ಷರ ಗಾತ್ರ : | |

Prajavani

ಅಬುಧಾಬಿ: ಟ್ವೆಂಟಿ–20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸುವ ಭಾರತದ ಕನಸು ಭಗ್ನಗೊಂಡಿದೆ. ಅಫ್ಗಾನಿಸ್ತಾನದ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಜಯ ಗಳಿಸಿದ ನ್ಯೂಜಿಲೆಂಡ್ ನಾಲ್ಕರ ಘಟ್ಟ ಪ್ರವೇಶಿಸಿತು. ಇದರಿಂದಾಗಿ ಭಾರತ ತಂಡ ಟೂರ್ನಿಯಿಂದ ಹೊರಬಿದ್ದಿತು.

ಅಫ್ಗಾನಿಸ್ತಾನ ಮುಂದಿಟ್ಟ 125 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ 11 ಎಸೆತ ಉಳಿದಿರುವಾಗಲೇ ಕೇವಲ ಎರಡು ವಿಕೆಟ್ ಕಳೆದುಕೊಂಡು ದಡ ಸೇರಿತು. 57 ರನ್ ಗಳಿಸುವಷ್ಟರಲ್ಲಿ ತಂಡ ಎರಡು ವಿಕೆಟ್ ಕಳೆದುಕೊಂಡಿತ್ತು. ಆದರೆ ನಾಯಕ ಕೇನ್ ವಿಲಿಯಮ್ಸನ್ ಮತ್ತು ಡೇವೋನ್ ಕಾನ್ವೆ ಮುರಿಯದ ಮೂರನೇ ವಿಕೆಟ್‌ಗೆ 68 ರನ್ ಸೇರಿಸಿ ಸುಲಭ ಜಯಕ್ಕೆ ಕಾರಣರಾದರು.

ನಜೀಬುಲ್ಲ ಜದ್ರಾನ್ ಏಕಾಂಗಿ ಹೋರಾಟ

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಅಫ್ಗಾನಿಸ್ತಾನದ ಯೋಜನೆಗಳು ಬುಡಮೇಲಾದವು. ಟ್ರೆಂಟ್ ಬೌಲ್ಟ್ ನೇತೃತ್ವದ ಬೌಲಿಂಗ್ ವಿಭಾಗದ ಮೊನಚಾದ ದಾಳಿಗೆ ನಲುಗಿದ ತಂಡಕ್ಕೆ 124 ರನ್ ಗಳಿಸಲಷ್ಟೇ ಸಾಧ್ಯವಾಯಿತು.

ಏಕಾಂಗಿ ಹೋರಾಟ ನಡೆಸಿದ ನಜೀಬುಲ್ಲ ಜದ್ರಾನ್ 48 ಎಸೆತಗಳಲ್ಲಿ 73 ರನ್ ಗಳಿಸಿದರು. ಆದರೂ ತಂಡಕ್ಕೆ ಸವಾಲಿನ ಮೊತ್ತ ಪೇರಿಸಲು ಸಾಧ್ಯವಾಗಲಿಲ್ಲ.

ಅಗ್ರ ಕ್ರಮಾಂಕದ ಬ್ಯಾಟರ್‌ಗಳಿಗೆ ನ್ಯೂಜಿಲೆಂಡ್‌ ವೇಗಿಗಳು ಆಘಾತ ನೀಡಿದರು. ಆ್ಯಡಂ ಮಿಲ್ನೆ ತಮ್ಮ ಮೊದಲ ಓವರ್‌ನಲ್ಲೇ ಮೊಹಮ್ಮದ್ ಶಹಜಾದ್ ಅವರನ್ನು ವಾಪಸ್ ಕಳುಹಿಸಿದರು. ಅವರ ಜೊತೆ ಇನಿಂಗ್ಸ್ ಆರಂಭಿಸಿದ ಹಜರತ್ ಉಲ್ಲಾ ಜಜಾಯ್ ಅವರು ಬೌಲ್ಟ್‌ ಎಸೆತದಲ್ಲಿ ವಿಕೆಟ್ ಕಳೆದುಕೊಂಡರೆ ರಹಮಾನುಲ್ಲ ಗುರ್ಬಜ್‌ ಅವರನ್ನು ಟಿಮ್ ಸೌಥಿ ವಾಪಸ್ ಕಳುಹಿಸಿದರು.

ಜದ್ರಾನ್ ಮತ್ತು ಗುಲ್ಬದಿನ್ ನಯೀಬ್ ತಿರುಗೇಟು ನೀಡಲು ಪ್ರಯತ್ನಿಸಿದರು. ಜಿಮ್ಮಿ ನೀಶಮ್ ಅವರನ್ನು ಎರಡು ಬಾರಿ ಬೌಂಡರಿ ಗೆರೆ ದಾಟಿಸಿದ ಜದ್ರಾನ್ ಭರವಸೆ ಮೂಡಿಸಿದರು. ಆದರೆ ನಯೀಬ್ ಔಟಾದಾಗ ತಂಡಕ್ಕೆ ಮತ್ತೆ ಪೆಟ್ಟು ಬಿತ್ತು. ನಂತರ ಜದ್ರಾನ್ ಮತ್ತು ನಾಯಕ ಮೊಹಮ್ಮದ್ ನಬಿ ಆಟ ಕಳೆಕಟ್ಟಿತು. ಅವರಿಬ್ಬರು ಸ್ಪಿನ್ನರ್ ಮತ್ತು ವೇಗಿಗಳನ್ನು ದಿಟ್ಟವಾಗಿ ಎದುರಿಸಿದರು.

ಮಿಚೆಲ್ ಸ್ಯಾಂಟನರ್ ಓವರ್‌ನಲ್ಲಿ ಎರಡು ಸಿಕ್ಸರ್ ಸಿಡಿಸಿದ ಜದ್ರಾನ್ 33 ಎಸೆತಗಳಲ್ಲಿ ಆರ್ಧಶತಕ ಪೂರೈಸಿದರು. ಇದು, ಈ ವಿಶ್ವಕಪ್‌ನಲ್ಲಿ  ಅವರ ಎರಡನೇ ಮತ್ತು ಒಟ್ಟಾರೆ ಆರನೇ ಅರ್ಧಶತಕ. ನಬಿ ವಿಕೆಟ್ ಕಬಳಿಸಿದ ಸೌಥಿ 59 ರನ್‌ಗಳ ಜೊತೆಯಾಟ ಮುರಿದರು.

ಬೌಂಡರಿ ಗೆರೆ ಬಳಿ ನೀಶಮ್ ಡೈವ್ ಮಾಡಿ ಪಡೆದ ಮೋಹಕ ಕ್ಯಾಚ್‌ಗೆ ಜದ್ರಾನ್ ಬಲಿಯಾದರು. ನಂತರ ಅಫ್ಗಾನ್ ಬ್ಯಾಟರ್‌ಗಳ ಹೋರಾಟ ನಡೆಯಲಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.