ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಟ್ವಿಂಟಿ–20 ಪಂದ್ಯ: ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ಸೋಲು 

ರೋಹಿತ್ ಪಡೆಯ ಜಯದ ಕನಸು ಭಗ್ನ
Last Updated 6 ಫೆಬ್ರುವರಿ 2019, 15:18 IST
ಅಕ್ಷರ ಗಾತ್ರ

ವೆಲಿಂಗ್ಟನ್‌: ಆತಿಥೇಯರ ವಿರುದ್ಧ ಕಳಪೆ ಆಟವಾಡಿದ ಭಾರತ ತಂಡ ಟ್ವೆಂಟಿ–20 ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲ್ಲಿ 80 ರನ್‌ಗಳಿಂದ ಸೋತಿತು. ಇದು ಚುಟುಕು ಕ್ರಿಕೆಟ್‌ನಲ್ಲಿ ಭಾರತ ತಂಡದ ಹೀನಾಯ ಸೋಲಾಗಿದೆ.

ಟಾಸ್‌ ಸೋತು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ ಭಾರಿ ಮೊತ್ತ ಕಲೆ ಹಾಕಿತು. ಏಕದಿನ ಸರಣಿಯಲ್ಲಿ ಭಾರತದ ಬೌಲರ್‌ಗಳನ್ನು ಎದುರಿಸಲು ಪರದಾಡಿದ ತಂಡದ ಬ್ಯಾಟ್ಸ್‌ಮನ್‌ಗಳು ಬುಧವಾರ ದಿಟ್ಟ ಆಟ ಆಡಿದರು.

ಕಾಲಿನ್‌ ಮನ್ರೊ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಟಿಮ್‌ ಸೀಫರ್ಟ್‌ (84;43 ಎಸೆತ, 6 ಸಿಕ್ಸರ್‌, 7 ಬೌಂಡರಿ) ಮೊದಲ ವಿಕೆಟ್‌ಗೆ 86 ರನ್‌ಗಳ ಜೊತೆಯಾಟದ ಮೂಲಕ ಇನಿಂಗ್ಸ್‌ಗೆ ಭದ್ರ ತಳಪಾಯ ಹಾಕಿದರು. ಅವರ ಭರ್ಜರಿ ಬ್ಯಾಟಿಂಗ್ ಬಲದಿಂದ 200 ರನ್‌ಗಳ ಗಡಿ ದಾಟಿದ ನ್ಯೂಜಿಲೆಂಡ್ ನಂತರ ಭಾರತದ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿತು.

ಭಾರಿ ಮೊತ್ತ ಬೆನ್ನತ್ತಿದ ಭಾರತದ ಆರಂಭಿಕ ಜೋಡಿ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್‌ ಪವರ್ ಪ್ಲೇ ಮುಕ್ತಾಯವಾಗುವ ಮೊದಲೇ ವಾಪಸಾದರು. ಹೀಗಾಗಿ ಆರಂಭದಲ್ಲೇ ತಂಡದ ಆತಂಕಕ್ಕೆ ಒಳಗಾಯಿತು. 31 ಎಸೆತಗಳಲ್ಲಿ 39 ರನ್‌ ಗಳಿಸಿದ ಮಹೇಂದ್ರ ಸಿಂಗ್‌ ಧೋನಿ ತಮ್ಮ ಪಾತ್ರವನ್ನು ಚೆನ್ನಾಗಿ ನಿಭಾಯಿಸಿದರು.

ಆದರೆ ವಿಕೆಟ್‌ಗಳು ನಿರಂತರವಾಗಿ ಪತನಗೊಂಡ ಕಾರಣ ಗೆಲುವಿನ ದಡ ಸೇರಲು ತಂಡಕ್ಕೆ ಸಾಧ್ಯವಾಗಲಿಲ್ಲ. ಸ್ಪಿನ್ನರ್‌ಗಳನ್ನು ಎದುರಿಸಲು ಭಾರತದ ಬ್ಯಾಟ್ಸ್‌ಮನ್‌ಗಳು ಪರದಾಡಿದರು. ಧೋನಿ ಹೊರತುಪಡಿಸಿದರೆ ಶಿಖರ್ ಧವನ್‌ ಮತ್ತು ವಿಜಯಶಂಕರ್‌ ಮಾತ್ರ ಸ್ವಲ್ಪ ಪ್ರತಿರೋಧ ತೋರಿದರು.

ಭಾರತ ಈ ಹಿಂದೆ ಒಮ್ಮೆಯೂ ಟ್ವೆಂಟಿ–20 ಪಂದ್ಯವೊಂದರಲ್ಲಿ 50 ರನ್‌ಗಳಿಗಿಂತ ಹೆಚ್ಚು ಅಂತರದಲ್ಲಿ ಸೋತಿಲ್ಲ. 2010ರಲ್ಲಿ ಆಸ್ಟ್ರೇಲಿಯಾ ವಿರುದ್ಧ ತಂಡ 49 ರನ್‌ಗಳಿಂದ ಸೋತಿತ್ತು.

ಅವಕಾಶ ಸದುಪಯೋಗ ಮಾಡಿಕೊಂಡ ಸೀಫರ್ಟ್‌:ಇದೇ ಮೊದಲ ಬಾರಿ ಇನಿಂಗ್ಸ್ ಆರಂಭಿಸಿದ ಸೀಫರ್ಟ್‌ ಭಾರತದ ಬೌಲರ್‌ಗಳನ್ನು ಕಾಡಿದರು. ಭರ್ಜರಿ ಸಿಕ್ಸರ್ ಮತ್ತು ಮೋಹಕ ಬೌಂಡರಿಗಳ ಮೂಲಕ ಮಿಂಚಿದ ಅವರು ವೈಯಕ್ತಿಕ ಗರಿಷ್ಠ ರನ್ ಗಳಿಸಿದರು. ಮನ್ರೊ ಮತ್ತು ನಾಯಕ ಕೇನ್ ವಿಲಿಯಮ್ಸನ್ ಕೂಡ ಉತ್ತಮ ಕಾಣಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT