ಟ್ವೆಂಟಿ20 ಕ್ರಿಕೆಟ್: ಕಿವೀಸ್ ನೆಲದಲ್ಲಿ ಇತಿಹಾಸ ಬರೆಯಲು ಭಾರತಕ್ಕೆ ಬೇಕು 213ರನ್

7

ಟ್ವೆಂಟಿ20 ಕ್ರಿಕೆಟ್: ಕಿವೀಸ್ ನೆಲದಲ್ಲಿ ಇತಿಹಾಸ ಬರೆಯಲು ಭಾರತಕ್ಕೆ ಬೇಕು 213ರನ್

Published:
Updated:

ಹ್ಯಾಮಿಲ್ಟನ್: ಸೆಡನ್ ಪಾರ್ಕ್‌ನಲ್ಲಿ ನಡೆಯುತ್ತಿರುವ ಮೂರನೇ ಹಾಗು ಅಂತಿಮ ಟ್ವೆಂಟಿ–20 ಕ್ರಿಕೆಟ್‌ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡ 212ರನ್‌ ಕಲೆ ಹಾಕಿದ್ದು, ಭಾರತ ಗೆಲುವಿಗೆ ಸವಾಲಿನ ಗುರಿ ನೀಡಿದೆ.

ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ನ್ಯೂಜಿಲೆಂಡ್‌, ಆರಂಭಿಕ ಆಟಗಾರರಾದ ಟಿಮ್ ಸೀಫರ್ಟ್ ಹಾಗೂ ಕಾಲಿನ್ ಮನ್ರೊ ಅವರ ಅಮೋಘ ಬ್ಯಾಟಿಂಗ್‌ ಬಲದಿಂದ ನಿಗದಿತ 20ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 212ರನ್‌ ಕಲೆ ಹಾಕಿತ್ತು.

ಕೇವಲ 40 ಎಸೆತಗಳನ್ನು ಎದುರಿಸಿದ ಮನ್ರೊ ತಲಾ ಐದು ಸಿಕ್ಸರ್‌ ಹಾಗೂ ಬೌಂಡರಿ ಸಿಡಿಸಿ 72ರನ್‌ ಚಚ್ಚಿದರು. 25 ಎಸೆತ ಎದುರಿಸಿದ ಸೀಫರ್ಟ್‌ ಕೂಡ ತಲಾ ಮೂರು ಬೌಂಡರಿ, ಸಿಕ್ಸರ್‌ ಸಹಿತ 43ರನ್‌ ದೋಚಿದರು.

ಈ ಪಂದ್ಯದಲ್ಲಿ ಗೆದ್ದರೆ ಕಿವೀಸ್ ನಾಡಿನಲ್ಲಿ ಮೊದಲ ಸಲ ಟ್ವೆಂಟಿ–20 ಸರಣಿ ಜಯಿಸಿದ ಹೆಗ್ಗಳಿಕೆಗೆ ರೋಹಿತ್‌ ಶರ್ಮಾ ನೇತೃತ್ವದ ಭಾರತ ಪಾತ್ರವಾಗಲಿದೆ.

ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಮುಕ್ತಾಯವಾದ ಟೆಸ್ಟ್ ಮತ್ತು ಏಕದಿನ ಸರಣಿಗಳನ್ನು ಗೆದ್ದು ಮೊದಲ ಸಲದ ಸಾಧನೆ ಮಾಡಿದ್ದ ಭಾರತ ನ್ಯೂಜಿಲೆಂಡ್‌ಗೆ ಬಂದಿತ್ತು. ಇಲ್ಲಿಯೂ ಏಕದಿನ ಸರಣಿಯಲ್ಲಿ ಜಯಭೇರಿ ಬಾರಿಸಿತ್ತು. ಟ್ವೆಂಟಿ–20 ಸರಣಿಯ ಮೊದಲ ಪಂದ್ಯದಲ್ಲಿ 80ರನ್‌ಗಳಿಂದ ಮುಗ್ಗರಿಸಿದ್ದ ರೋಹಿತ್ ಪಡೆಯು ಎರಡನೇ ಪಂದ್ಯದಲ್ಲಿ ಪುಟಿದೆದ್ದು 7ವಿಕೆಟ್‌ ಜಯ ಸಾಧಿಸಿತ್ತು.

ಹೀಗಾಗಿ ಸರಣಿಯಲ್ಲಿ 1–1ರ ಸಮಬಲ ಸಾಧಿಸಿರುವ ಉಭಯ ತಂಡಗಳು ಈ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳುವ ತವಕದಲ್ಲಿವೆ.

ಸದ್ಯ ಬ್ಯಾಟಿಂಗ್‌ ಆರಂಭಿಸಿರುವ ಭಾರತ ತಂಡ 5 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 49ರನ್‌ ಗಳಿಸಿದೆ. ಆರಂಭಿಕ ದಾಂಡಿಗ ಶಿಖರ್‌ ಧವನ್‌ 5 ರನ್‌ ಗಳಿಸಿ ಮಿಚೆಲ್ ಸ್ಯಾಂಟನರ್ ಬೌಲಿಂಗ್‌ನಲ್ಲಿ  ಡೆರಿಲ್ ಮಿಚೆಲ್‌ಗೆ ಕ್ಯಾಚ್‌ ನೀಡಿ ನಿರ್ಗಮಿಸಿದರು. ತಲಾ 19ರನ್‌ ಕಲೆ ಹಾಕಿರುವ ನಾಯಕ ರೋಹಿತ್‌ ಹಾಗೂ ವಿಜಯ್‌ ಶಂಕರ್‌ ಕ್ರೀಸ್‌ನಲ್ಲಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !