ಏಕದಿನ ಕ್ರಿಕೆಟ್: ಸೋಲಿನ ಕಹಿ ಮರೆಯುವತ್ತ ಭಾರತ ಚಿತ್ತ

7

ಏಕದಿನ ಕ್ರಿಕೆಟ್: ಸೋಲಿನ ಕಹಿ ಮರೆಯುವತ್ತ ಭಾರತ ಚಿತ್ತ

Published:
Updated:
Prajavani

ವೆಲ್ಲಿಂಗ್ಟನ್: ಸರಣಿಯಂತೂ ಗೆದ್ದಾಗಿದೆ. ಆದರೆ, ಕಳೆದ ಪಂದ್ಯದಲ್ಲಿ ಹೀನಾಯವಾಗಿ ಸೋತ ನೋವು ಶಮನವಾಗಬೇಕಾದರೆ ಮತ್ತೊಂದು ಅಮೋಘ ಜಯ ಸಾಧಿಸುವ ಛಲದಲ್ಲಿ ಭಾರತ ತಂಡವಿದೆ. ಅದಕ್ಕೆ ಪೂರಕವಾಗಿ ಅನುಭವಿ ವಿಕೆಟ್‌ಕೀಪರ್‌–ಬ್ಯಾಟ್ಸ್‌ಮನ್ ಮಹೇಂದ್ರಸಿಂಗ್ ಧೋನಿ ಅವರು ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರಳಿರುವುದು ವಿಶ್ವಾಸ ಹೆಚ್ಚಿಸಿದೆ.

ಇಲ್ಲಿ ಭಾನುವಾರ ನಡೆಯಲಿರುವ ಸರಣಿಯ ಐದನೇ ಮತ್ತು ಕೊನೆಯ ಪಂದ್ಯದಲ್ಲಿ ಗೆದ್ದು ಆತ್ಮವಿಶ್ವಾಸದ ಹಾದಿಗೆ
ಮರಳುವತ್ತ ರೋಹಿತ್ ಶರ್ಮಾ ಬಳಗವು ಚಿತ್ತ ನೆಟ್ಟಿದೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿದ್ದ ಭಾರತ ತಂಡವು ನಾಲ್ಕನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ  ಮತ್ತು ಧೋನಿ ಇಲ್ಲದೇ ಕಣಕ್ಕಿಳಿದಿತ್ತು. ಆದರೆ ಟ್ರೆಂಟ್‌ ಬೌಲ್ಟ್‌ ಎದುರು ಭಾರತದ ಬ್ಯಾಟಿಂಗ್ ದೂಳೀಪಟವಾಗಿತ್ತು. ಕೇವಲ 92 ರನ್‌ಗಳಿಗೆ ಆಲೌಟ್‌ ಆಗಿತ್ತು.

ಹೊಸ ಹುಡುಗ ಶುಭಮನ್ ಗಿಲ್ ಸಹಿತ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಅಗ್ಗಕ್ಕೆ ವಿಕೆಟ್ ತೆತ್ತಿದ್ದರು.
ಆದರೆ, ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳಾದ ಯಜುವೇಂದ್ರ ಚಾಹಲ್ ಮತ್ತು ಕುಲದೀಪ್ ಯಾದವ್ ಅವರು ತಮ್ಮ ಶಕ್ತಿ ಮೀರಿ ಉತ್ತಮವಾಗಿ ಆಡಿದ್ದರು. ಬೌಲಿಂಗ್‌ ಕೂಡ ಉತ್ತಮವಾಗಿ ಮಾಡಿದ್ದರು.

ಆದರೆ ಇಡೀ ಸರಣಿಯಲ್ಲಿ ನ್ಯೂಜಿಲೆಂಡ್ ಬ್ಯಾಟಿಂಗ್ ಪಡೆಯು ನಿರೀಕ್ಷೆಗೆ ತಕ್ಕಂತೆ ಆಡಿಲ್ಲ. ಕೇನ್ ವಿಲಿಯಮ್ಸನ್, ರಾಸ್ ಟೇಲರ್, ಟಾಮ್ ಲಥಾಮ್ ಮತ್ತು ಮಾರ್ಟಿನ್ ಗಪ್ಟಿಲ್ ಉತ್ತಮವಾಗಿ ಆಡಿದರೆ ದೊಡ್ಡ ಮೊತ್ತ ಗಳಿಸುವುದು ಕಷ್ಟವೇನಲ್ಲ. ಕಳೆದ ಪಂದ್ಯದಲ್ಲಿಯಂತೆಯೇ ಇಲ್ಲಿಯೂ ಆಲ್‌ರೌಂಡ್ ಆಟವಾಡಿದರೆ ಗೆಲುವು ಸುಲಭ. ಸರಣಿ ಸೋಲಿನ ಅಂತರವನ್ನು ಕಡಿಮೆ ಮಾಡಿಕೊಳ್ಳಬಹುದು.  

ತಂಡಗಳು ಇಂತಿವೆ: ಭಾರತ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ಮಹೇಂದ್ರಸಿಂಗ್ ಧೋನಿ (ವಿಕೆಟ್‌ ಕೀಪರ್), ಕೇದಾರ್ ಜಾಧವ್, ದಿನೇಶ್ ಕಾರ್ತಿಕ್, ವಿಜಯ್ ಶಂಕರ್, ಶುಭಮನ್ ಗಿಲ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಸಿರಾಜ್, ಖಲೀಲ್ ಅಹಮದ್, ರವೀಂದ್ರ ಜಡೇಜ, ಹಾರ್ದಿಕ್ ಪಾಂಡ್ಯ.

ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್ (ನಾಯಕ), ಟಾಡ್ ಆಸ್ಲೆ, ಟ್ರೆಂಟ್ ಬೌಲ್ಡ್, ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಲಾಕಿ ಫರ್ಗ್ಯುಸನ್, ಮಾರ್ಟಿನ್ ಗಪ್ಟಿಲ್, ಮ್ಯಾಟ್ ಹೆನ್ರಿ, ಟಾಮ್ ಲಥಾಮ್ (ವಿಕೆಟ್‌ಕೀಪರ್), ಕಾಲಿನ್ ಮನ್ರೊ, ಜಿಮ್ಮಿ ನಿಶಾಮ್, ಟಿಮ್ ಸೌಥಿ, ರಾಸ್ ಟೇಲರ್

ಪಂದ್ಯ ಆರಂಭ: ಬೆಳಿಗ್ಗೆ 7.30ರಿಂದ
ನೇರಪ್ರಸಾರ: ಸ್ಟಾರ್‌ ನೆಟ್‌ವರ್ಕ್ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !