ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಮುನ್ನಡೆಯ ಹಾದಿಯಲ್ಲಿ ಹೆಜ್ಜೆ ಇಟ್ಟ ಲಂಕಾ

Last Updated 15 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ಗಾಲ್‌ (ಎಎಫ್‌ಪಿ): ಕುಶಾಲ್‌ ಮೆಂಡಿಸ್‌ (53; 89ಎ, 7ಬೌಂ, 1ಸಿ) ಮತ್ತು ಏಂಜೆಲೊ ಮ್ಯಾಥ್ಯೂಸ್‌ (50; 98ಎ, 7ಬೌಂ, 1ಸಿ) ಅವರ ಅರ್ಧಶತಕಗಳ ನೆರವಿನಿಂದ ಶ್ರೀಲಂಕಾ ತಂಡ ನ್ಯೂಜಿಲೆಂಡ್‌ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಮುನ್ನಡೆಯತ್ತ ಹೆಜ್ಜೆ ಇಟ್ಟಿದೆ.

ಗಾಲ್‌ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ 5 ವಿಕೆಟ್‌ಗೆ 203ರನ್‌ಗಳಿಂದ ಗುರುವಾರ ಆಟ ಮುಂದುವರಿಸಿದ ಕಿವೀಸ್‌ ನಾಡಿನ ತಂಡ ಈ ಮೊತ್ತಕ್ಕೆ 46 ರನ್‌ ಸೇರಿಸಿ ಮೊದಲ ಇನಿಂಗ್ಸ್‌ ಹೋರಾಟ ಮುಗಿಸಿತು.

ಶ್ರೀಲಂಕಾ ತಂಡದ ವೇಗದ ಬೌಲರ್‌ ಸುರಂಗ ಲಕ್ಮಲ್‌, ನಾಲ್ಕು ವಿಕೆಟ್‌ ಕಬಳಿಸಿ ಮಿಂಚಿದರು.

ಪ್ರಥಮ ಇನಿಂಗ್ಸ್‌ ಶುರುಮಾಡಿರುವ ದಿಮುತ್‌ ಕರುಣಾರತ್ನೆ ಬಳಗ ದಿನದಾಟದ ಅಂತ್ಯಕ್ಕೆ 80 ಓವರ್‌ಗಳಲ್ಲಿ 7 ವಿಕೆಟ್‌ಗೆ 227ರನ್‌ ಪೇರಿಸಿದೆ. ಈ ತಂಡವು ಮುನ್ನಡೆಗಾಗಿ ಇನ್ನೂ 23 ರನ್‌ ಗಳಿಸಬೇಕು.

ಇನಿಂಗ್ಸ್‌ ಆರಂಭಿಸಿದ ಲಂಕಾ ತಂಡಕ್ಕೆ 11ನೇ ಓವರ್‌ನಲ್ಲಿ ಆಘಾತ ಎದುರಾಯಿತು. ಅಜಾಜ್‌ ಪಟೇಲ್‌ ಹಾಕಿದ ಓವರ್‌ನ ಆರನೇ ಎಸೆತದಲ್ಲಿ ಲಾಹಿರು ತಿರಿಮಾನ್ನೆ (10) ಸ್ಟಂಪ್‌ ಔಟ್‌ ಆದರು.

ದಿಮುತ್‌ ಕರುಣಾರತ್ನೆ (39), ಕುಶಾಲ್‌, ಮ್ಯಾಥ್ಯೂಸ್‌ ಮತ್ತು ಧನಂಜಯ ಡಿಸಿಲ್ವ ಅವರ ವಿಕೆಟ್‌ಗಳನ್ನೂ ಬುಟ್ಟಿಗೆ ಹಾಕಿಕೊಂಡ ಅಜಾಜ್‌, ಕಿವೀಸ್‌ ಆಟಗಾರರ ಖುಷಿಗೆ ಕಾರಣರಾದರು.

158ರನ್‌ಗಳಿಗೆ ಆರು ವಿಕೆಟ್‌ ಕಳೆದುಕೊಂಡು ಸಂಕಷ್ಟ ಎದುರಿಸಿದ್ದ ಆತಿಥೇಯರಿಗೆ ನಿರೋಷನ್‌ ಡಿಕ್ವೆಲ್ಲಾ (ಬ್ಯಾಟಿಂಗ್‌ 39; 74ಎ, 1ಬೌಂ) ಮತ್ತು ಸುರಂಗ ಲಕ್ಮಲ್‌ (ಬ್ಯಾಟಿಂಗ್‌ 28; 79ಎ, 2ಬೌಂ, 1ಸಿ) ಆಸರೆಯಾದರು.

ತಾಳ್ಮೆಯ ಇನಿಂಗ್ಸ್‌ ಕಟ್ಟಿದ ಈ ಜೋಡಿ ಮುರಿಯದ ಎಂಟನೇ ವಿಕೆಟ್‌ ಪಾಲುದಾರಿಕೆಯಲ್ಲಿ 66ರನ್‌ ಸೇರಿಸಿ ತವರಿನ ಅಭಿಮಾನಿಗಳನ್ನು ರಂಜಿಸಿತು.

ಸಂಕ್ಷಿಪ್ತ ಸ್ಕೋರ್‌: ನ್ಯೂಜಿಲೆಂಡ್‌, ಮೊದಲ ಇನಿಂಗ್ಸ್‌; 83.2 ಓವರ್‌ಗಳಲ್ಲಿ 249 (ರಾಸ್‌ ಟೇಲರ್‌ 86, ಮಿಷೆಲ್‌ ಸ್ಯಾಂಟನರ್‌ 13, ಟಿಮ್‌ ಸೌಥಿ 14, ಟ್ರೆಂಟ್‌ ಬೌಲ್ಟ್‌ 18, ವಿಲಿಯಮ್‌ ಸೋಮರ್‌ವಿಲ್‌ ಔಟಾಗದೆ 9; ಸುರಂಗ ಲಕ್ಮಲ್‌ 29ಕ್ಕೆ4, ಅಖಿಲ ಧನಂಜಯ 80ಕ್ಕೆ5).

ಶ್ರೀಲಂಕಾ: ಪ್ರಥಮ ಇನಿಂಗ್ಸ್‌; 80 ಓವರ್‌ಗಳಲ್ಲಿ 7 ವಿಕೆಟ್‌ಗೆ 227 (ದಿಮುತ್‌ ಕರುಣಾರತ್ನೆ 39, ಲಾಹಿರು ತಿರಿಮಾನ್ನೆ 10, ಕುಶಾಲ್‌ ಮೆಂಡಿಸ್‌ 53, ಏಂಜೆಲೊ ಮ್ಯಾಥ್ಯೂಸ್‌ 50, ನಿರೋಷನ್‌ ಡಿಕ್ವೆಲ್ಲಾ ಬ್ಯಾಟಿಂಗ್‌ 39, ಸುರಂಗ ಲಕ್ಮಲ್‌ ಬ್ಯಾಟಿಂಗ್‌ 28; ಟ್ರೆಂಟ್‌ ಬೌಲ್ಟ್‌ 24ಕ್ಕೆ1, ವಿಲಿಯಮ್‌ ಸೋಮರ್‌ವಿಲ್‌ 78ಕ್ಕೆ1, ಅಜಾಜ್‌ ಪಟೇಲ್‌ 76ಕ್ಕೆ5).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT